
ದ.ಕ ಜಿಲ್ಲೆಯಲ್ಲಿ ಮುಂದುವರಿದ ಮಳೆಯಬ್ಬರ-ನಾಳೆ ಆರೆಂಜ್ ಅಲರ್ಟ್ ಘೋಷಣೆ: ಜಿಲ್ಲೆಯಾಧ್ಯಂತ 40ಕ್ಕೂ ಹೆಚ್ಚು ಮನೆಗಳಿಗೆ ಹಾನಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಕಾಣಿಸಿಕೊಂಡ ಮಳೆಯ ಅಬ್ಬರದಿಂದಾಗಿ ಸಾಕಷ್ಟು ದೊಡ್ಡ ಪ್ರಮಾಣ ಹಾನಿಗಳು ಸಂಭವಿಸಿದೆ. ಗುರುವಾರವೂ ದಿನಪೂರ್ತಿ ಕರಾವಳಿಯಲ್ಲಿ ಅಬ್ಬರದ ಮಳೆಯಾಗಿದ್ದು, ಶುಕ್ರವಾರವೂ ಉತ್ತಮ ಮಳೆಯಯಾಗುವ ನಿರೀಕ್ಷೆಯನ್ನು ಹವಾಮಾನ ಇಲಾಖೆ ವ್ಯಕ್ತಪಡಿಸಿದೆ.
ಗುರುವಾರ ಸುರಿದ ನಿರಂತರ ಮಳೆಗೆ ದ.ಕ ಜಿಲ್ಲೆಯಲ್ಲಿ 30ಕ್ಕೂ ಅಧಿಕ ಮನೆಗಳಿಗೆ ಭಾಗಶಃ ಹಾನಿಯಾದರೆ 100ಕ್ಕೂ ಅಧಿಕ ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ. ದಕ್ಷಿಣ ಕನ್ನಡದಲ್ಲಿ ಒಂದೇ ದಿನ 161.1 ಮಿ.ಮೀ ಮಳೆ ದಾಖಲಾಗಿದೆ. ಸುರತ್ಕಲ್ ಭಾಗದಲ್ಲೇ ಅತೀ ಹೆಚ್ಚು 296.6 ಮಿ.ಮೀ ಮಳೆ ಸುರಿದಿದೆ.
ಆರೆಂಜ್ ಅಲರ್ಟ್ ಘೋಷಣೆ:
ಶುಕ್ರವಾರ ಉತ್ತಮ ಮಳೆಯಾಗುವ ಸಾಧ್ಯತೆಯಿರುವುದರಿಂದ ದ.ಕ ಜಿಲ್ಲೆಯಲ್ಲಿ ಐಎಂಡಿ ಆರೆಂಜ್ ಅಲರ್ಟ್ ಘೋಷಿಸಿದೆ. ಕಾಸರಗೋಡು ಉತ್ತಮ ಮಳೆ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಕರಾವಳಿ ತೀರ ತಾಲೂಕುಗಳಲ್ಲಿ ಉತ್ತಮ ಹಾಗೂ ಉಳಿದ ಭಾಗಗಳಲ್ಲಿ ಬಿಟ್ಟು ಬಿಟ್ಟು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಈಗಿನಂತೆ ಜುಲೈ 18ರಿಂದ 21ರ ತನಕ ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಉತ್ತಮ ಹಾಗೂ ಉತ್ತರ ಕನ್ನಡ ಸಾಮಾನ್ಯ ಮಳೆಯ ಮುನ್ಸೂಚನೆ ಇದ್ದು, 22ರಿಂದ 27ರ ತನಕವೂ ಸಾಮಾನ್ಯ ಮಳೆ ಮುಂದುವರಿಯುವ ಮುನ್ಸೂಚೆನೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
40ಕ್ಕೂ ಹೆಚ್ಚು ಮನೆಗಳಿಗೆ ಹಾನಿ:
ಬುಧವಾರ ರಾತ್ರಿ ಕಾಣಿಸಿಕೊಂಡ ಮಳೆಯ ಕಾರಣದಿಂದ ದ.ಕ.ಜಿಲ್ಲಾಡಳಿತ ಎಚ್ಚೆತ್ತು ಜಿಲ್ಲೆಯ ಅಂಗನವಾಡಿ, ಶಾಲೆ, ಪಿಯು ಕಾಲೇಜುಗಳಿಗೆ ಗುರುವಾರ ರಜೆ ಘೋಷಣೆ ಮಾಡಿತ್ತು. ಮಳೆಯಿಂದಾಗಿ ಜಿಲ್ಲೆಯಲ್ಲಿ ಸಾಕಷ್ಟು ಕಡೆಯಲ್ಲಿ ಗುಡ್ಡ ಕುಸಿತವಾಗಿ ರಸ್ತೆ ಸಂಚಾರಕ್ಕೆ ಸಮಸ್ಯೆಯಾದರೆ ಉಳಿದ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನುಗ್ಗಿ ರಾತ್ರಿಯ ನಿದ್ದೆಯನ್ನು ಕಸಿದುಕೊಟ್ಟಿತ್ತು. ಕೊಟ್ಟಾರ ಚೌಕಿ, ಮಾಲೇಮಾರ್, ಜಪ್ಪಿನಮೊಗರು ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಮನೆಯೊಳಗೆ ಪ್ರವೇಶ ಪಡೆದುಕೊಂಡು ಈ ಭಾಗದ ಸರಿಸುಮಾರು 40ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಉಳ್ಳಾಲ ತಾಲೂಕಿನ ಕೋಟೆಕಾರು, ಉಚ್ಚಿಲ, ಉಳ್ಳಾಲ, ಸೋಮೇಶ್ವರ ಭಾಗದಲ್ಲಿ ತಗ್ಗು ಪ್ರದೇಶಗಳು ಜಲಾವೃತಗೊಂಡಿತು. ಉಳ್ಳಾಲ, ಮೂಲ್ಕಿ, ಮೂಡುಬಿದಿರೆ, ಪುತ್ತೂರು, ಬಂಟ್ವಾಳ ಭಾಗದಲ್ಲಿ ಹೆಚ್ಚು ಮಳೆ ಕಾಣಿಸಿಕೊಂಡು ಸಾಕಷ್ಟು ಕಡೆಯಲ್ಲಿ ಗುಡ್ಡ ಕುಸಿತ, ವಿದ್ಯುತ್ ಕಂಬ ಮುರಿತ ಸೇರಿದಂತೆ ಆವರಣ ಗೋಡೆಗಳು ಕುಸಿದು ಬಿದ್ದಿದೆ. ವಾಮಂಜೂರಿನ ಕೆತ್ತಿಕಲ್ ಭಾಗದಲ್ಲಿ ಮತ್ತೆ ಕುಸಿತ ಕಾಣಿಸಿಕೊಂಡಿದೆ. ಜಿಲ್ಲೆಯ ನದಿಗಳು ತುಂಬಿ ಹರಿಯುತ್ತಿದ್ದು, ಎಲ್ಲೂ ಅಪಾಯ ಮಟ್ಟವನ್ನು ಮುಟ್ಟಿಲ್ಲ.
ಮಂಗಳೂರಿನಲ್ಲಿ ಅತೀ ಹೆಚ್ಚು ಮಳೆ:
ಪಶ್ಚಿಮಘಟ್ಟದ ತಳಭಾಗಗಳಲ್ಲಿ ಗುರುವಾರ ಉತ್ತಮ ಮಳೆಯಾಗಿದ್ದು, ಮುಂದಿನ ಒಂದಡೆರು ದಿನ ಮಳೆ ಹೆಚ್ಚಾಗುವ ಮುನ್ಸೂಚನೆ ಇದೆ. ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಗರಿಷ್ಠ 30.7 ಡಿಗ್ರಿ ಸೆಲ್ಸಿಯಸ್, ಕನಿಷ್ಠ 22.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಶುಕ್ರವಾರ ವೇಳೆ ತುಸು ಇಳಿಕೆ ಸಾಧ್ಯತೆ ಇದೆ. ಈಗಿನಂತೆ ಜು.27ರ ವರೆಗೆ ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಬ್ಬರದ ಮಳೆ ಮುಂದುವರಿಯಲಿದ್ದು, ನಂತರ ಮುಂಗಾರು ಯಥಾಸ್ಥಿತಿಗೆ ಮರಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ದ.ಕ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗಿನ ಮಾಹಿತಿಯಂತೆ ಕಳೆದ 24 ಗಂಟೆಯಲ್ಲಿ 92 ಮಿ.ಮೀ ಸರಾಸರಿ ಮಳೆಯಾಗಿದೆ. ಮಂಗಳೂರಿನಲ್ಲೇ ಹೆಚ್ಚು 152.2 ಮಿಮಿ ಮಳೆಯಾಗಿದೆ. ಉಳಿದಂತೆ ಮೂಡುಬಿದಿರೆಯಲ್ಲಿ 46.3 ಮಿ.ಮೀ, ಉಳ್ಳಾಲದಲ್ಲಿ 121.5, ಬೆಳ್ತಂಗಡಿಯಲ್ಲಿ 63.1, ಬಂಟ್ವಾಳದಲ್ಲಿ 129, ಪುತ್ತೂರಿನಲ್ಲಿ 111.1, ಸುಳ್ಯದಲ್ಲಿ 109.3, ಕಡಬದಲ್ಲಿ 66.7, ಮೂಲ್ಕಿಯಲ್ಲಿ 102.4 ಮಿ.ಮೀ ಮಳೆ ಸುರಿದಿದೆ.