ಎರಡು ವಾರ ಬಳಿಕ ಕಾಣಿಸಿಕೊಂಡ ಬಿಸಿಲು
ಮಂಗಳೂರು: ನಿರಂತರ ಮಳೆ-ಗಾಳಿಯ ಆರ್ಭಟ, ಅನಾಹುತ, ಭೂಕುಸಿತ, ಕಡಲ್ಕೊರೆತ ಸಹಿತ ವಿವಿಧ ಪ್ರಾಕೃತಿಕ ವಿಕೋಪಗಳನ್ನು ಮಳೆಗಾಲದ ಆರಂಭದಲ್ಲೇ ಕಂಡ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಡೆ ಸುಮಾರು ಎರಡು ವಾರ ಬಳಿಕ ಸೋಮವಾರ ಸೂರ್ಯನ ಬಿಸಿಲು ನೆಲ ಸೋಕಿದೆ.
ದಿನದಲ್ಲಿ ಕೆಲವು ಬಾರಿ ಮಾತ್ರ ಸೋಮವಾರ ಬಿಟ್ಟು ಬಿಟ್ಟು ಮಳೆ ಸುರಿದಿದೆ. ರಸ್ತೆ, ಬಸ್‌ಗಳಲ್ಲಿ ಕೊಡೆ ಇಲ್ಲದೆ, ದ್ವಿಚಕ್ರ ವಾಹನಗಳಲ್ಲಿ ರೈನ್‌ಕೋಟ್ ಇಲ್ಲದೆ ಓಡಾಡುವ ಜನರು ಇಂದು ಕಂಡುಬಂದರು. ಆಗೊಮ್ಮೆ ಈಗೊಮ್ಮೆ ಸುರಿದ ದಿಢೀರ್ ಮಳೆಗೆ ಒದ್ದೆಯಾಗಿ ಓಡಾಡುವವರು ತುಂಬಾ ಮಂದಿ ಕಂಡುಬಂದರು.
ರಾಜ್ಯ ಹವಾಮಾನ ಇಲಾಖೆ ದಕ್ಷಿಣ ಕನ್ನಡ ಮತ್ತು ಉಡುಪಿಯನ್ನು ಒಳಗೊಂಡಿರುವ ಕರ್ನಾಟಕ ಕರಾವಳಿಯಲ್ಲಿ ಜುಲೈ 29 ರಂದು ಮಾತ್ರ ಯೆಲ್ಲೋ ಅಲರ್ಟ್ ಇದ್ದು, ಈ ಅವಧಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಬಳಿಕ ಆ.3ರ ತನಕ ಯಾವುದೇ ಮುನ್ಸೂಚನೆ ಇರುವುದಿಲ್ಲ ಎಂದು ಸೂಚಿಸಿದೆ. ಮಂಗಳೂರಿನಲ್ಲಿ ಸೋಮವಾರ ಗರಿಷ್ಠ 29.6 ಮತ್ತು ಕನಿಷ್ಠ 21.6 ಡಿಗ್ರಿ ಸೆಲ್ಶಿಯಸ್ ತಾಪಮಾನ ದಾಖಲಾಗಿದೆ.
35 ಮನೆಗಳಿಗೆ ಹಾನಿ:
ದ.ಕ. ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗಿನಿಂದ ಸೋಮವಾರ ಬೆಳಗ್ಗಿನವರೆಗೆ 24 ತಾಸು ಅವಧಿಯಲ್ಲಿ 35 ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ. ಭಾನುವಾರ ರಾತ್ರಿ ಬೀಸಿದ ಭಾರಿ ಬಿರುಗಾಳಿಗೆ ಹೆಚ್ಚಿನ ಹಾನಿ ಸಂಭವಿಸಿತ್ತು. ಒಟ್ಟು 458 ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದರೆ, 6 ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿದೆ.