
ಮಳೆಗೆ ಭಾರಿ ಪ್ರಮಾಣದ ಅನಾಹುತ-ಸರಕಾರದಿಂದ ನಿರೀಕ್ಷಿಸಿದಷ್ಟು ನೆರವು ಸಿಗುತ್ತಿಲ್ಲ: ಶಾಸಕ ಭರತ್ ಶೆಟ್ಟಿ ಆರೋಪ
Thursday, July 17, 2025
ಮಂಗಳೂರು: ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಅನಾಹುತ ಸಂಭವಿಸಿದ್ದು, ಸರಕಾರದಿಂದ ನಿರೀಕ್ಷಿಸಿದಷ್ಟು ನೆರವು ಸಿಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಕಣ್ಣು ಮುಚ್ಚಿ ಕುಳಿತಂತೆ ಕಂಡುಬರುತ್ತಿದ್ದು ಜನರಲ್ಲಿ ನೆರವು ಸಿಗದಿರುವುದು ಆತಂಕ ಮೂಡಿಸಿದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರಕಾರವಿದ್ದಾಗ ಮನೆ ಕುಸಿತವಾದ ಸಂದರ್ಭ 5 ಲಕ್ಷ ರೂ., ಭಾಗಶಃ ಹಾನಿಯಾದ ಸಂದರ್ಭ ಎರಡು ಲಕ್ಷ ರೂ. ನೀಡಲಾಗುತ್ತಿತ್ತು. ಇದೀಗ ಸರಕಾರ ಸಂತ್ರಸ್ತರಿಗೆ ನೀಡುವ ಪರಿಹಾರವನ್ನು ಒಂದೂವರೆ ಲಕ್ಷ ರೂ.ಗೆ ಇಳಿಸಿದೆ. ಈಗಿನ ಸಂದರ್ಭದಲ್ಲಿ ಈ ನೆರವು ಯಾವುದಕ್ಕೂ ಸಾಲದಾಗಿದೆ. ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳಬೇಕು ಜಿಲ್ಲೆಯಲ್ಲಿ ಆಗುತ್ತಿರುವ ಪ್ರಕೃತಿ ವಿಕೋಪಕ್ಕೆ ತುರ್ತು ನೆರವನ್ನು ಬಿಡುಗಡೆಗೊಳಿಸಬೇಕು ಎಂದು ಭರತ್ ಶೆಟ್ಟಿ ಒತ್ತಾಯಿಸಿದ್ದಾರೆ.