
ದ್ವೇಷ ಭಾಷಣ-ಸಚಿವರ ಮೌನ: ಕೆ. ಅಶ್ರಫ್ ಆರೋಪ
ಮಂಗಳೂರು: ದ.ಕ.ಜಿಲ್ಲಾಡಳಿತವು ಬುಧವಾರ ನಡೆಸಿದ ಶಾಂತಿ ಸಭೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರ ಮಾತಿಗೆ ದ.ಕ.ಜಿಲ್ಲಾಡಳಿತ, ದ.ಕ.ಜಿಲ್ಲಾ ಉಸ್ತುವಾರಿ ಸಚಿವರು ಮೌನ ವಹಿಸಿದ್ದರು ಎಂದು ಮಾಜಿ ಮೇಯರ್ ಕೆ. ಅಶ್ರಫ್ ಆರೋಪಿಸಿದ್ದಾರೆ.
ದ್ವೇಷ ಭಾಷಣಗಳಿಂದ ಜಿಲ್ಲೆಯ ಶಾಂತಿ ಕದಡುವುದಿಲ್ಲ. ಬದಲಾಗಿ ಧಾರ್ಮಿಕ ಸಂಕೇತವಾದ ಗೋಹತ್ಯೆ ಮತ್ತು ಭಿನ್ನ ಸಮುದಾಯದವರ ಲವ್ ಕಾರಣದಿಂದ ಶಾಂತಿ ಕದಡುತ್ತಿದೆ ಎಂದು ಜಿಲ್ಲಾಡಳಿತ ಮತ್ತು ಗೃಹ ಮಂತ್ರಿಗಳ ಮುಂದೆ ಶಾಸಕ ಪೂಂಜಾ ಹೇಳಿಕೆ ನೀಡಿದ್ದರು. ಇದನ್ನು ಕೇಳಿದ ಜಿಲ್ಲಾಡಳಿತ ಮತ್ತು ಸಚಿವರು ಪ್ರತಿಕ್ರಿಯೆ ನೀಡದೆ ಮೌನ ವಹಿಸಿರುವುದು ಸರಿಯಲ್ಲ ಎಂದು ತಿಳಿಳಿಸಿದ್ದಾರೆ.
ವಿದೇಶಕ್ಕೆ ಗೋ ಮಾಂಸವನ್ನು ಕೇಂದ್ರ ಸರಕಾರ ರಫ್ತು ಮಾಡುತ್ತಿದೆ. ಈ ಬಗ್ಗೆ ಶಾಸಕ ಹರೀಶ್ ಪೂಂಜಾ ಮಾತನಾಡಲಿ. ಇತ್ತೀಚೆಗೆ ಬ್ರಹ್ಮಾವರದ ಗೋಸಾಗಾಟ ಪ್ರಕರಣದಲ್ಲಿ ಶಾಮೀಲಾದವರು ಯಾರು ಎಂಬು ದನ್ನು ಶಾಂತಿಸಭೆಗೆ ಪೂಂಜಾ ತಿಳಿಸಬೇಕಿತ್ತು. ಪೂಂಜಾ ಜಿಲ್ಲೆಯಲ್ಲಿನ ದ್ವೇಷ ಭಾಷಣವನ್ನು ಸಮರ್ಥಿಸುವ ನಡೆಯು ಖಂಡನೀಯ. ಇದು ಪೂಂಜಾ ಸರಕಾರಕ್ಕೆ ಹಾಕಿದ ಸವಾಲು ಕೂಡ ಆಗಿರುತ್ತದೆ ಎಂದು ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷರೂ ಆಗಿರುವ ಅವರು ತಿಳಿಸಿದ್ದಾರೆ.