
ಹೆಬ್ಬಾವು ಮಾರಾಟ ಜಾಲ ಬಯಲು ನಾಲ್ವರ ಬಂಧನ
ಮಂಗಳೂರು: ನಗರದಲ್ಲಿ ಹೆಬ್ಬಾವು ಮಾರಾಟ ಜಾಲ ಪತ್ತೆ ಹಚ್ಚಿರುವ ಅರಣ್ಯ ಇಲಾಖೆಯು ಅಪ್ರಾಪ್ತ ಸೇರಿದಂತೆ ನಾಲ್ವರನ್ನು ಬಂಧಿಸಿದೆ.
ನಗರದ ಬಡಗ ಉಳಿಪ್ಪಾಡಿ ನಿವಾಸಿ ವಿಶಾಲ್ ಹೆಚ್. ಶೆಟ್ಟಿ(18), ಸ್ಟೇಟ್ಬ್ಯಾಂಕ್ ಬಳಿಯ ಪೆಟ್ಝೋನ್ ಮಾಲಕ ಇಬ್ರಾಹೀಂ ಶಕೀಲ್ ಇಸ್ಮಾಯಿಲ್(35), ಪೆಟ್ಝೋನ್ನ ಸಿಬ್ಬಂದಿ ಮಹಮ್ಮದ್ ಮುಸ್ತಫಾ(22) ಬಂಧಿತ ಆರೋಪಿಗಳು. ಮಂಗಳೂರಿನ ಕಾಲೇಜೊಂದರ ಪ್ರಥಮ ಪಿಯುಸಿ ವಿದ್ಯಾರ್ಥಿ ಮತ್ತೋರ್ವ ಅಪ್ರಾಪ್ತ ಆರೋಪಿ.
ಹೆಬ್ಬಾವು ಮಾರಾಟ ಜಾಲ ಸಕ್ರಿಯವಿದೆ ಎಂಬ ಮಾಹಿತಿ ಲಭ್ಯವಾಗುತ್ತಿದ್ದಂತೆ ಮಂಗಳೂರು ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್ ಮತ್ತು ತಂಡ ಕಾರ್ಯಾಚರಣೆಗಿಳಿದು ಮೊದಲಿಗೆ ಇಬ್ಬರನ್ನು ಹೆಬ್ಬಾವು ಖರೀದಿಸುವ ಸೋಗಿನಲ್ಲಿ ಕಳುಹಿಸಿದೆ. ನಗರದ ಕದ್ರಿಯ ಅಶ್ವತ್ಥ ಕಟ್ಟೆಯ ಬಳಿ ಆಗಮಿಸಿದ ಆರೋಪಿ ವಿಶಾಲ್ ಹೆಚ್.ಶೆಟ್ಟಿ ಬಳಿಗೆ ಹೋದ ಅರಣ್ಯ ಇಲಾಖೆಯ ಕಡೆಯ ಇಬ್ಬರು ಹೆಬ್ಬಾವು ಖರೀದಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಹಾವು ತೋರಿಸಿದ ಆತ ೪೫,೦೦೦ಕ್ಕೆ ವ್ಯವಹಾರ ಕುದುರಿಸಿದ್ದಾನೆ. ಈ ವೇಳೆ ಅರಣ್ಯ ಇಲಾಖೆ ದಾಳಿ ನಡೆಸಿ ಆತನನ್ನು ಬಂಧಿಸಿದೆ.
ಇದರಿಂದ ಭೀತಿಗೊಳಗಾದ ವಿಶಾಲ್ ಹೆಚ್.ಶೆಟ್ಟಿ ಈ ಹಾವು ತನ್ನದಲ್ಲ ಅಪ್ರಾಪ್ತನ ಹೆಸರು ಹೇಳಿ ಆತ ತನಗೆ ಮಾರಲು ನೀಡಿದ್ದು ಎಂದು ಬಾಯಿ ಬಿಟ್ಟಿದ್ದಾನೆ. ತಕ್ಷಣ ಉಪಾಯವಾಗಿ ಅಪ್ರಾಪ್ತನಿಗೆ ಕರೆ ಮಾಡಿ ಮಾಲ್ವೊಂದರ ಬಳಿ ಹೋಗಿ ಆತನನ್ನು ತಮ್ಮ ಖೆಡ್ಡಾಕ್ಕೆ ಕೆಡವಿ ಅಧಿಕಾರಿಗಳು ಬಂಧಿಸಿದ್ದಾರೆ.
ಹಾವು ಮಾರಾಟದ ಬಗ್ಗೆ ಸ್ಟೇಟ್ಬ್ಯಾಂಕ್ನಲ್ಲಿರುವ ಪೆಟ್ಝೋನ್ ಮೇಲೂ ಕಣ್ಣಿಟ್ಟಿದ್ದ ಅರಣ್ಯ ಇಲಾಖೆ ಇದೇ ಸಂದರ್ಭ ಗ್ರಾಹಕರ ಸೋಗಿನಲ್ಲಿ ಓರ್ವ ಯುವಕನನ್ನು ಅಲ್ಲಿಗೆ ಕಳುಹಿಸಿದೆ. ಆಗ ಅಲ್ಲಿನ ಸಿಬ್ಬಂದಿ ತಮ್ಮಲ್ಲಿ ಹಾವಿದೆ ತರಿಸಿ ಕೊಡುತ್ತೇವೆ ಎಂದು ಬಂಧಿತ ವಿಶಾಲ್ ಶೆಟ್ಟಿಗೆ ಕರೆ ಮಾಡಿದ್ದಾನೆ. ತಕ್ಷಣ ದಾಳಿ ನಡೆಸಿದ ಅರಣ್ಯ ಇಲಾಖೆಯು ಪೆಟ್ಝೋನ್ನ ಮಾಲಕ ಹಾಗೂ ಸಿಬ್ಬಂದಿಯನ್ನು ಬಂಧಿಸಿದೆ. ಈ ಪೆಟ್ಝೋನ್ನಲ್ಲಿ ನಕ್ಷತ್ರ ಆಮೆಗಳೂ ಸಿಕ್ಕಿದ್ದು, ಅದನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅನುಸೂಚಿತ (ಶೆಡ್ಯೂಲ್ 1) ಭಾಗ ಸಿ ಪ್ರಾಣಿಯಾದ ಇಂಡಿಯನ್ ರಾಕ್ ಪೈಥಾನ್(ಹೆಬ್ಬಾವು) ಅನ್ನು ಆರೋಪಿಗಳು ಹೊರದೇಶದ ಅಂದರೆ ಬರ್ಮಿಸ್
ಬಾಲ್ ಪೈಥಾನ್ ಎಂದು ಮಾರುತ್ತಿದ್ದರು. ಇದನ್ನು ಕೆಲವರು ಮನೆಯಲ್ಲಿ ಸಾಕುವ ಉದ್ದೇಶದಿಂದ ಖರೀದಿಸುತ್ತಿದ್ದರು. ಈ ಜಾಲಕ್ಕೆ ತಮಿಳುನಾಡುವರೆಗೆ ಸಂಪರ್ಕವಿರುವುದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಆದ್ದರಿಂದ ತನಿಖೆ ಮುಂದುವರಿದಿದೆ.