ಜೀವನದಲ್ಲಿ ಕತ್ತಲೆಯನ್ನು ತೊರೆದು ಬೆಳಕಿನತ್ತ ಸಾಗಿ: ವಿದ್ಯಾರ್ಥಿ ಪ್ರೇರಣಾ ಕಾರ್ಯಕ್ರಮ ಫಾ. ಅ.ವಂ. ಲಾರೆನ್ಸ್ ಮಸ್ಕರೇನ್ಹಸ್ ಹೇಳಿಕೆ

ಜೀವನದಲ್ಲಿ ಕತ್ತಲೆಯನ್ನು ತೊರೆದು ಬೆಳಕಿನತ್ತ ಸಾಗಿ: ವಿದ್ಯಾರ್ಥಿ ಪ್ರೇರಣಾ ಕಾರ್ಯಕ್ರಮ ಫಾ. ಅ.ವಂ. ಲಾರೆನ್ಸ್ ಮಸ್ಕರೇನ್ಹಸ್ ಹೇಳಿಕೆ


ಪುತ್ತೂರು: ‘ನಿಮ್ಮ ಜೀವನದಲ್ಲಿ ನೀವು ಸದಾ ಸಂತೋಷದಿಂದಿರಿ, ನಿಮ್ಮನು ನೀವು ರೂಪಿಸಿಕೊಳ್ಳಿ. ಜೀವನದಲ್ಲಿ ಕತ್ತಲೆಯನ್ನು ತೊರೆದು ಬೆಳಕಿನತ್ತ ಸಾಗಿರಿ. ಶಿಕ್ಷಣ ಮತ್ತು ಜ್ಯಾನದ ಬೆಳಕನ್ನು ಪಡೆಯಿರಿ. ನೈತಿಕತೆ, ಆಧ್ಯಾತ್ಮಿಕತೆ ಮತ್ತು ಪ್ರಾಮಾಣಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ. ನಿಮ್ಮನ್ನು ನೀವು ಹೋಲಿಸಿಕೊಳ್ಳಬೇಡಿ, ಸ್ವಾರ್ಥಿಗಳಾಗಬೇಡಿ, ಕಾಲೇಜಿನಲ್ಲಿ ದೊರೆಯುವ ಎಲ್ಲಾ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ. ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ’ ಎಂದು ಕಾಲೇಜಿನ ಸಂಚಾಲಕರಾದ ಅತಿ ವಂ. ಲಾರೆನ್ಸ್ ಮಸ್ಕರೇನ್ಹಸ್ ಹೇಳಿದರು.


ಅವರು ಇಂದು ಶೈಕ್ಷಣಿಕ ವರ್ಷದ ಆರಂಭದೊಂದಿಗೆ ಇಲ್ಲಿನ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಪ್ರೇರಣಾ ಕಾರ್ಯಕ್ರಮವನ್ನು ಕಾಲೇಜಿನ ಬೆಳ್ಳ ಹಬ್ಬ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು. ಈ ಕಾರ್ಯಕ್ರಮದ ಉದ್ದೇಶವು ಹೊಸ ವಿದ್ಯಾರ್ಥಿಗಳಿಗೆ ಕಾಲೇಜಿನ ಬಗ್ಗೆ ಒಂದು ಸ್ಪಷ್ಟವಾದ ನೋಟವನ್ನು ನೀಡಿ, ಆತ್ಮವಿಶ್ವಾಸ ಮತ್ತು ದೃಢಸಂಕಲ್ಪವನ್ನು ತುಂಬುವುದಾಗಿದೆ.


ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊರವರು ಪ್ರಸ್ತಾವಿಕ ಮಾತುಗಳನ್ನಾಡಿ, ‘ಕಲಿಕೆ ಒಂದು  ನಿರಂತರ ಪ್ರಕ್ರಿಯೆ, ಜೀವನದಲ್ಲಿ ನಾವು ಹೊಸ ವಿಷಯಗಳನ್ನು ಕಲಿತಷ್ಟು ಚುರುಕಾಗಿರುತ್ತೇವೆ. ಸಮಾಜದಲ್ಲಿ ಉನ್ನತ ಶಿಕ್ಷಣಕ್ಕೆ ಯಾವಾಗಲು ತನ್ನದೇ ಆದ ಮಹತ್ವವಿರುತ್ತದೆ. ಅಂತೆಯೇ ಸಂತ ಫಿಲೋಮಿನಾ ಕಾಲೇಜು ನಮ್ಮ ಸಮಾಜದಲ್ಲಿ ಬಹಳ ವಿಶಿಷ್ಟ ಛಾಪು ಮೂಡಿಸಿದೆ. ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಉತ್ತೇಜಿಸಿ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಾಹಿಸಬೇಕು’ ಎಂದು ಪ್ರೋತ್ಸಾಹಿಸಿದರು.


ಕಾಲೇಜಿನ ಪರೀಕ್ಷಾಂಗ ಕುಲಸಚಿವರಾದ ಡಾ. ವಿನಯಚಂದ್ರ ಅವರು ಪರೀಕ್ಷೆಗೆ ಪ್ರತಿಯೊಬ್ಬ ವಿದ್ಯಾರ್ಥಿಯು ನೋಂದಣಿಯನ್ನು ಕಡ್ಡಾಯವಾಗಿ ಮಾಡಿಕೊಳ್ಳಬೇಕು ಮತ್ತು ಸೆಮಿಸ್ಟರ್ ಉತ್ತೀರ್ಣತಾ ಮಾನದಂಡ, ಪರೀಕ್ಷೆಯಲ್ಲಿ ನಕಲು ಮತ್ತು ಅದರ  ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿ ಶೈಕ್ಷಣಿಕ ಮೌಲ್ಯಮಾಪನದ ಕುರಿತು ಸಂಕ್ಷಿಪ್ತ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.


ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಪಕಿ ತೇಜಸ್ವಿ ಭಟ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸೌಲಭ್ಯಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿ ಎಲ್ಲಾ ವಿದ್ಯಾರ್ಥಿಗಳು ವಿದ್ಯಾರ್ಥಿವೇತನದ ಲಾಭವನ್ನು ಪಡೆದುಕೊಳ್ಳುವಂತೆ ಸೂಚಿಸಿದರು.

ದೈಹಿಕ ಶಿಕ್ಷಣ ನಿರ್ದೇಶಕ ಡಾ. ಎಲಿಯಾಸ್ ಪಿಂಟೋ ವಿದ್ಯಾರ್ಥಿಗಳಿಗೆ ಸ್ಪೋಟ್ಸ್ ಮತ್ತು ಫಿಟ್ನೆಸ್ ಬಗ್ಗೆ ಮಾರ್ಗದರ್ಶನ ನೀಡಿ, ಪ್ರಾಯೋಗಿಕ ವ್ಯಾಯಾಮ ಜುಂಬಾ ಡಾನ್ಸ್ ಮೂಲಕ ವಿದ್ಯಾರ್ಥಿಗಳಿಗೆ ಮೋಜಿನ ಜೊತೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ನೀಡುವಲ್ಲಿ ಪ್ರೆರೇಪಿಸಿದರು.

ಅಕ್ಷತಾ ಮತ್ತು ಬಳಗ ಪ್ರಾರ್ಥಿಸಿದರು. ಐಕ್ಯೂಎಸಿ ಸಂಯೋಜಕರಾದ ಡಾ. ಎಡ್ವಿನ್ ಡಿ’ಸೋಜಾ ಸ್ವಾಗತಿಸಿ, ವಿಜ್ಞಾನ ವಿಭಾಗದ ಡೀನ್ ಡಾ. ಮಾಲಿನಿ ಕೆ. ವಂದಿಸಿದರು. ಗಣಕ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಪಕಿ ಸುರಕ್ಷಾ ಎಸ್. ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article