
ಬಹುಕೋಟಿ ವಂಚನೆ ಪ್ರಕರಣ: ಅಡಗುತಾಣದಿಂದ ಆರೋಪಿ ಸೆರೆ
ಮಂಗಳೂರು: ಬಹುಕೋಟಿ ವಂಚನೆ ಪ್ರಕರಣವನ್ನು ಬಯಲಿಗೆಳೆದಿರುವ ಪೊಲೀಸರು ನೂರಾರು ಕೋಟಿ ಪಂಗನಾಮ ಹಾಕಿದ ವಂಚಕನನ್ನು ಬಂದಿಸಿದ್ದಾರೆ.
ವಿವಿಧ ಉದ್ಯಮಿಗಳಿಗೆ ನೂರಾರು ಕೋಟಿ ಸಾಲ ಕೊಡಿಸುವುದಾಗಿ ನಂಬಿಸಿ ಅವರಿಂದ 32 ಕೋಟಿ ರೂ. ಪಡೆದು ವಂಚಿಸಿದ ಆರೋಪಿ ಜೆಪ್ಪಿನಮೊಗರು ಬಜಾಲ್‌ನ ಬೊಲ್ಲಗುಡ್ಡ ನಿವಾಸಿ ರೋಶನ್ ಸಲ್ಡಾನ (43) ಎಂಬಾತನನ್ನು ಆತನ ಐಷಾರಾಮಿ ಮನೆಯ ಅಡಗುತಾಣದಿಂದ ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ. ಆರೋಪಿ ವಿರುದ್ಧ ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಕಲಂ 316(2), 316(5) 318(2), 318(3) ಜೊತೆಗೆ 3(5) ಭಾರತೀಯ ನ್ಯಾಯ ಸಂಹಿತೆಯಂತೆ ವಂಚನೆ ಪ್ರಕರಣಗಳು ದಾಖಲಾಗಿದೆ.
ಮನೆಯಲ್ಲಿ ಅಡಗುತಾಣ..
ಪ್ರಕರಣದಲ್ಲಿ ಆರೋಪಿ ತನ್ನ ಮನೆಯಲ್ಲಿ ಇರುವ ಬಗ್ಗೆ ಮಾಹಿತಿ ಸಂಗ್ರಹಿಸಿಕೊಂಡು ಮನೆಗೆ ಹೋದಾಗ ಆತ ಕಾಣಸಿಕ್ಕಿರಲಿಲ್ಲ. ಬಳಿಕ ತಪಾಸಣೆ ನಡೆಸಿದಾಗ ಮನೆಯಲ್ಲಿ ಕಪಾಟು ಮಧ್ಯೆ ಬಾಗಿಲು ಮಾಡಿ ಅದರೊಳಗೆ ಅಡಗುತಾಣ ನಿರ್ಮಿಸಿದ್ದ. ಕಪಾಟು ಒಳಗೆ ಹೋದರೆ ಅಂಡರ್ ಗ್ರೌಂಡ್‌ಗೆ ದಾರಿಯಿದ್ದು, ಅಲ್ಲಿಂದ ಒಂದು ಕೋಣೆ ಸಿಗುತ್ತದೆ. ಆದರೆ ಆ ಕೋಣೆಯ ಗೋಡೆಗೆ ಗೋಡೆಯಂತೆ ಕಾಣುವ ಬಾಗಿಲು ನಿರ್ಮಿಸಿ ಇನ್ನೊಂದು ಕೋಣೆ ನಿರ್ಮಿಸಿದ್ದು, ಇಲ್ಲಿ ಆರೋಪಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿದೇಶಿ ಮದ್ಯ..
ಆರೋಪಿಯ ಮನೆ ಪರಿಶೀಲಿಸಿದಾಗ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 6,72,947 ರೂ. ಮೌಲ್ಯದ ದೇಶಿ ಮತ್ತು ವಿದೇಶಿ ಮದ್ಯ ದೊರೆತಿದೆ. ಈ ಮದ್ಯವನ್ನು ವಶಕ್ಕೆ ಪಡೆದು ಅಬಕಾರಿ ಕಾಯ್ದೆಯಂತೆ ಪ್ರಕರಣವನ್ನು ದಾಖಲಿಸಿಕೊಂಡು ರೋಶನ್ ಸಲ್ಡಾನನ್ನು ಬಂಧಿಸಲಾಗಿದೆ.
ಆರೋಪಿತನ ಮನೆಯಿಂದ ದಾಖಲಾತಿ, ಖಾಲಿ ಚೆಕ್‌ಗಲೂ ಹಾಗೂ ಸುಮಾರು 667 ಗ್ರಾಂ ಚಿನ್ನಾಭರಣಗಳು ಮತ್ತು ಅಂದಾಜು 2.75 ಕೋಟಿ ಮೌಲ್ಯದ ವಜ್ರದ ಉಂಗುರ ವಶಪಡಿಸಿಕೊಳ್ಳಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಆರೋಪಿಯ ವಿರುದ್ಧ ಚಿತ್ರದುರ್ಗ, ಮುಂಬೈ ಸೇರಿದಂತೆ ವಿವಿಧೆಡೆ ವಂಚನೆ ಪ್ರಕರಣಗಳು ದಾಖಲಾಗಿದೆ. ಆರೋಪಿಯು ಇತರರೊಂದಿಗೆ ಸೇರಿ ಅವಶ್ಯಕತೆ ಇರುವ ಉದ್ದಿಮೆದಾರರಿಗೆ ಸಾಲ ಕೊಡಿಸುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದರು. ಕಳೆದ ೩ ತಿಂಗಳಲ್ಲಿ ಗೋವಾ, ಬೆಂಗಳೂರು, ಪುಣೆ, ವಿಜಯಪುರ, ತುಮಕೂರು, ಕೋಲ್ಕತ್ತಾ, ಸಾಂಗ್ಲಿ, ಲಕ್ನೋ, ಬಾಗಲಕೋಟೆ ಇತ್ಯಾದಿ ಕಡೆಗಳಲ್ಲಿ ಉದ್ದಿಮೆದಾರರಿಗೆ ಸಾಲ ಕೊಡಿಸುವುದಾಗಿ ನಂಬಿಸಿ ಸುಮಾರು 32 ಕೋಟಿ ರೂ.ಗಳನ್ನು ಆರೋಪಿ ಮತ್ತು ಇತರರು ಪಡೆದುಕೊಂಡಿರುವುದು ಕಂಡುಬಂದಿದೆ. ಆರೋಪಿತನನ್ನು ಈ ದಿನ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.