
ಉದ್ದಿಮೆ ಪರವಾನಿಗೆ-ನಕಲಿ ದಾಖಲೆ ಸೃಷ್ಟಿಸಿ ವಂಚನೆ: ನೈಜತೆ ಪರಿಶೀಲಿಸಿ ಖಾತರಿಪಡಿಸಿ
ಮಂಗಳೂರು: ಉದ್ದಿಮೆ ಪರವಾನಿಗೆ ಅಥವಾ ತೆರಿಗೆ ಶುಲ್ಕಗಳನ್ನು ಪಾವತಿಗೆ ಸಂಬಂಧಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ವಂಚನೆ ನಡೆಸುತ್ತಿರುವ ಪ್ರಕರಣಗಳು ಗಮನಕ್ಕೆ ಬಂದಿದ್ದು, ಸಾರ್ವಜನಿಕರು ಈ ಬಗ್ಗೆ ಗಮನ ಹರಿಸಿ ತಮ್ಮ ದಾಖಲೆಗಳ ನೈಜತೆಯನ್ನು ಪರಿಶೀಲಿಸಿ ಖಾತರಿಪಡಿಸುವಂತೆ ಮಂಗಳೂರು ಮಹಾನಗರ ಪಾಲಿಕೆ ಸಾರ್ವಜನಿಕರಿಗೆ ಸೂಚನೆ ನೀಡಿದೆ.
ಇಬ್ಬರು ಉದ್ಯಮಿಗಳಿಗೆ ನಕಲಿ ಉದ್ದಿಮೆ ಪರವಾನಿ ನೀಡಿ ವಂಚಿಸಿರುವ ಬಗ್ಗೆ ಪಾಲಿಕೆ ಈಗಾಗಲೇ ದಲ್ಲಾಳಿಯೊಬ್ಬರ ವಿರುದ್ಧ ದೂರು ದಾಖಲಿಸಿದೆ. ನಗರದ ಬಜಾಲ್‌ನ ಉದ್ಯಮಿಯೊಬ್ಬರಿಗೆ ಕಾನೂನು ಪ್ರಕ್ರಿ ಯೆಗೆ ಸಂಬಂಧಿಸಿ ೧೫ ವರ್ಷಗಳ ಉದ್ದಿಮೆ ಪರವಾನಿಗೆ ಪ್ರತಿ ಬೇಕಾಗಿತ್ತು. ಇದಕ್ಕಾಗಿ ಅವರು ಪಾಲಿಕೆಗೆ ಹೋದಾಗ ಪರವಾನಿಗೆ ನವೀಕರಣವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂದರ್ಭ ತಮ್ಮಲ್ಲಿದ್ದ ಪರವಾನಿಗೆ ನವೀಕರಣದ ಪ್ರತಿಯನ್ನು ತೋರಿಸಿದಾಗ ಅದು ನಕಲಿ ಎಂಬುದು ತಿಳಿದು ಬಂದಿದೆ. ಉದ್ಯಮಿ ಕೆಲ ದಿನಗಳ ಹಿಂದೆ ದಲ್ಲಾಳಿಯೊಬ್ಬರರ ಮೂಲಕ ಉದ್ದಿಮೆ ಪರವಾನಿಗೆ ನವೀಕರಣ ಮಾಡಿದ್ದರು. ಪಾಲಿಕೆಯಲ್ಲಿ ಪರಿಶೀಲನೆಯ ಸಂದರ್ಭ ಆ ಪರವಾನಿಗೆಯಲ್ಲಿ ಬ್ಯಾಂಕ್ನ ಸೀಲ್ನೊಂದಿಗೆ ಪರವಾನಿಗೆಯನ್ನೇ ಸಂಪೂರ್ಣವಾಗಿ ನಕಲಿಯಾಗಿ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಪಾಲಿಕೆಯ ಉಪ ಆಯುಕ್ತೆ (ಕಂದಾಯ) ಅಕ್ಷತಾ ತಿಳಿಸಿದ್ದಾರೆ.
ಸಾರ್ವಜನಿಕರು ಕಚೇರಿ ಸಮಯದಲ್ಲಿ ಪಾಲಿಕೆಯ ಕೇಂದ್ರ ಕಚೇರಿ ಅಥವಾ ವಲಯಕಚೇರಿ ಅಥವಾ ವಾರ್ಡ್ ಕಚೇರಿಗಳನ್ನು ಸಂಪರ್ಕಿಸಿ ತಮ್ಮ ಉದ್ದಿಮೆ ಪರವಾನಿಗೆ ಅಥವಾ ತೆರಿಗೆ ಪಾವತಿಯ ಮಾಹಿತಿಯನ್ನು ಖಾತರಿಪಡಿಸಿಕೊಳ್ಳಬಹುದು. ನಕಲಿ ಅಥವಾ ಅನಧಿಕೃತ ದಾಖಲೆ ಕಂಡುಬಂದಲ್ಲಿ ಪಾಲಿಕೆಯ ಈ ಮೇಲಿನ ಕಚೇರಿಗಳಿಗೆ ಸಂಪರ್ಕಿಸಿ ಮಾಹಿತಿ ನೀಡಬಹುದು. ಮಧ್ಯವರ್ತಿ ಅಥವಾ ಇತರರನ್ನು ಅವಲಂ ಬಿಸದೆ ಸಾರ್ವಜನಿಕರು ನೇರವಾಗಿ ಶುಲ್ಕ ಪಾವತಿ ಅಥವಾ ಪರವಾನಿಗೆ ಪಡೆಯುವ ತಂತ್ರಾಂಶಗಳನ್ನು ಉಪಯೋಗಿಸಿ ನಿಗದಿತ ಸೌಲಭ್ಯಗಳನ್ನು ನಿಯಮಾನುಸಾರ ಪಡೆಯಬಹುದು. ಪಾಲಿಕೆಯ ಕಂಟ್ರೋಲ್ ರೂಂನಿಂದಲೂ ಮಾಹಿತಿ ಪಡೆಯಬಹುದು ಎಂದು ಪಾಲಿಕೆಯ ಆಯುಕ್ತರು ಸಲಹೆ ನೀಡಿದ್ದಾರೆ.