
ಕೈದಿಗೆ ಮಾದಕ ವಸ್ತು ಪೂರೈಕೆ: ಮಹಿಳೆ ವಶಕ್ಕೆ
Saturday, July 12, 2025
ಮಂಗಳೂರು: ದ.ಕ. ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿರುವ ಮುಹಮ್ಮದ್ ಅಸ್ಕರ್ ಎಂಬಾತನಿಗೆ ಮಾದಕ ವಸ್ತು ಎಂಡಿಎಂಎ ಪೂರೈಕೆ ಮಾಡಿದ ಆರೋಪದ ಮೇರೆಗೆ ಮಹಿಳೆಯೊಬ್ಬರ ವಿರುದ್ಧ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜು.10ರಂದು ಮಧ್ಯಾಹ್ನ 12.15ಕ್ಕೆ ಸಂದರ್ಶಕಿಯಾಗಿ ರಮ್ಸೂನಾ ಎಂಬಾಕೆ ಬಂದಿದ್ದು, ಆಕೆ ಮುಹಮ್ಮದ್ ಅಸ್ಕರ್ಗೆ ನೀಡಲು ಬೇಕರಿ ತಿಂಡಿಗಳನ್ನು ಕೊಂಡೊಯ್ದಿದ್ದಳು ಎನ್ನಲಾಗಿದೆ. ಈ ಸಂದರ್ಭ ಕರ್ತವ್ಯದಲ್ಲಿದ್ದ ಸಿಬ್ಬಂದಿ ಪರಿಶೀಲಿಸಿದಾಗ 5 ಸಣ್ಣ ಪೊಟ್ಟಣಗಳು ಕಂಡು ಬಂದಿದೆ. ಈ ಬಗ್ಗೆ ಸಿಬ್ಬಂದಿ ಆಕೆಯನ್ನು ವಿಚಾರಿಸಿದಾಗ ಹೊಸಂಗಡಿಯ ಹುಸೇನ್ ಎಂಬಾತ ಕೆಲವು ಪೊಟ್ಟಣಗಳನ್ನು ಕೊಡುತ್ತಾನೆ. ಅದನ್ನು ತಂದು ಕೊಡಬೇಕು ಎಂದು ಮುಹಮ್ಮದ್ ಅಸ್ಕರ್ ಈ ಹಿಂದೆ ತಿಳಿಸಿದ್ದ, ಅದರಂತೆ ತಾನು ತಂದಿರುವುದಾಗಿ ಹೇಳಿದ್ದಾಳೆ.
ಈ ಬಗ್ಗೆ ಜೈಲು ಅಧೀಕ್ಷಕ ಶರಣ ಬಸಪ್ಪ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿರುವ ಬರ್ಕೆ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.