
ಕರಾವಳಿಯ ಹಲವಡೆ ಮಳೆಯ ಸಿಂಚನ
ಮಂಗಳೂರು: ಕಳೆದ ಒಂದೆರಡು ದಿನಗಳಿಂದ ಕರಾವಳಿಯಲ್ಲಿ ಬಿಟ್ಟು ಬಿಟ್ಟು ಮಳೆಯಾಗುತ್ತಿದ್ದು, ಬುಧವಾರ ಬಿಸಿಲು ಸಹಿತ ಮಳೆಯ ಸಿಂಚನವಾಗಿದೆ.
ಸುಳ್ಯ, ಕಡಬ ತಾಲೂಕಿನ ಹಲವೆಡೆ ದಿನಪೂರ್ತಿ ಬಿಸಿಲು ಸಹಿತ ಕೆಲವೊಮ್ಮೆ ಹನಿ ಮಳೆಯಾಗಿದೆ. ಬೆಳ್ತಂಗಡಿ, ಬಂಟ್ವಾಳ, ಸುಳ್ಯ ಸುತ್ತಮುತ್ತ ಸಂಜೆ ವೇಳೆ ಸಾಧಾರಣ ಗುಡುಗು ಸಹಿತ ಮಳೆಯಾಗಿದೆ. ಪುತ್ತೂರು ಪೇಟೆಯಲ್ಲಿ ಹನಿ ಮಳೆಯಾದರೆ ಕೆಲವು ಕಡೆ ಸಿಡಿಲು ಸಹಿತ ಮಳೆಯಾಗಿದೆ. ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಲ್ಲಲ್ಲಿ ಮುಂದಿನ 2-3 ದಿನ ಸಾಮಾನ್ಯ ಮಳೆ ಮುಂದುವರಿಯುವ ಮುನ್ಸೂಚೆನೆ ಇದೆ. ಈಗಿನಂತೆ ಜು.31ರಂದು ಹಲವಡೆ ಮಳೆಯ ಮುನ್ಸೂಚೆನೆ ಇದೆ. ಆ.2ರಿಂದ ಹೆಚ್ಚಿನ ಅವಧಿ ಬಿಸಿಲು ಇರಬಹುದು. ಆ.10 ಅಥವಾ 11ರಿಂದ ಮುಂಗಾರು ಸ್ವಲ್ಪ ಚುರುಕಾಗುವ ಲಕ್ಷಣಗಳಿವೆ. ಇದರ ಮಧ್ಯೆ ಒಂದೆರಡು ದಿನ ಸಂಜೆ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯ ಸಾಧ್ಯತೆಗಳಿವೆ. ಜು. 11ರಿಂದ ಸ್ವಲ್ಪ ಮಟ್ಟಿಗೆ ಮುಂಗಾರು ಚುರುಕುಗೊಂಡು ಕರಾವಳಿಯ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಸರಾಸರಿ 17 ಮಿಮೀ ಮಳೆ ದಾಖಲು:
ಜಿಲ್ಲೆಯಲ್ಲಿ ಬುಧವಾರ ಬೆಳಗ್ಗಿನವರೆಗೆ ಜಿಲ್ಲೆಯಲ್ಲಿ ಸರಾಸರಿ 17 ಮಿಮೀ ಮಳೆ ದಾಖಲಾಗಿದೆ. ಬೆಳ್ತಂಗಡಿಯಲ್ಲಿ 20.4 ಮಿಮೀ, ಬಂಟ್ವಾಳ 16.3 ಮಿಮೀ, ಮಂಗಳೂರು 10.8 ಮಿಮೀ, ಪುತ್ತೂರು 16.5 ಮಿಮೀ, ಸುಳ್ಯ 17.3 ಮಿಮೀ, ಮೂಡುಬಿದಿರೆ 19.6 ಮಿಮೀ, ಕಡಬ 16.7 ಮಿಮೀ, ಮೂಲ್ಕಿ 12.9 ಮಿಮೀ, ಉಳ್ಳಾಲದಲ್ಲಿ 14.2 ಮಿಮೀ ಮಳೆಯಾಗಿದೆ. ಅರಬ್ಬಿ ಸಮುದ್ರದಲ್ಲಿ ಗಾಳಿಯ ಪ್ರಮಾಣ ತುಸು ಹೆಚ್ಚಳವಾಗಿರುವುದರಿಂದ ಕಡಲತೀರ ನಿವಾಸಿಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಬುಧವಾರ ಗರಿಷ್ಠ 33.7 ಡಿಗ್ರಿ ಸೆಲ್ಸಿಯಸ್, ಕನಿಷ್ಠ 24.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಗುರುವಾರ ವೇಳೆ ತುಸು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಮಾಹಿತಿ ನೀಡಿದೆ.