ಕೊಂಕೆ ಅಜಕಲದಲ್ಲಿ ರಸ್ತೆ ಇಲ್ಲದೆ ಪರದಾಟ: ತಡೆ ಬಂದರೂ ವಾರದೊಳಗೆ ರಸ್ತೆ ನಿರ್ಮಾಣ-ಅಂಬೇಡ್ಕರ್ ತತ್ವರಕ್ಷಣಾವೇದಿಕೆ ನಿರ್ಧಾರ

ಕೊಂಕೆ ಅಜಕಲದಲ್ಲಿ ರಸ್ತೆ ಇಲ್ಲದೆ ಪರದಾಟ: ತಡೆ ಬಂದರೂ ವಾರದೊಳಗೆ ರಸ್ತೆ ನಿರ್ಮಾಣ-ಅಂಬೇಡ್ಕರ್ ತತ್ವರಕ್ಷಣಾವೇದಿಕೆ ನಿರ್ಧಾರ

ಪುತ್ತೂರು: ಬಲ್ನಾಡು ಗ್ರಾಮದ ಕೊಂಕೆ ಅಜಕಲ ಎಂಬಲ್ಲಿ ಕಳೆದ 106 ವರ್ಷಗಳಿಂದ ವಾಸ್ತವ್ಯವಿರುವ 7 ಕುಟುಂಬಗಳಿಗೆ ರಸ್ತೆಯೇ ಇಲ್ಲವಾಗಿದ್ದು, ಇದರಿಂದ ಈ ಕುಟುಂಬಗಳು ಆರೋಗ್ಯ ಸಮಸ್ಯೆ ಬಂದಾಗ ಪರದಾಟ ನಡೆಸುವಂತಾಗಿದೆ. ಇಲ್ಲಿನ ಶಾಲಾ ಮತ್ತು ಅಂಗನವಾಡಿ ಮಕ್ಕಳು ರಸ್ತೆ ಇಲ್ಲದ ಕಾರಣ ತೊಂದರೆಗೆ ಒಳಗಾಗುತ್ತಿದ್ದಾರೆ. ಇಲ್ಲಿ ರಸ್ತೆ ಮಾಡಲು ಸ್ಥಳೀಯ ಭೂಮಾಲಕರ ತಡೆ ಇದ್ದು, ಮುಂದಿನ ಒಂದು ವಾರದಲ್ಲಿ ಯಾವುದೇ ತಡೆ ಬಂದರೂ ಇಲ್ಲಿ ರಸ್ತೆ ನಿರ್ಮಾಣ ಮಾಡುತ್ತೇವೆ ಎಂದು ಅಂಬೇಡ್ಕರ್ ತತ್ವರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಗಿರಿಧರ್ ನಾಯ್ಕ್ ಅವರು ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಇಲ್ಲಿನ ಕಾಲು ದಾರಿ ಪಂಚಾಯತ್ ದಾಖಲೆಯಲ್ಲಿದೆ. ಕಳೆದ 45 ವರ್ಷಗಳಿಂದ ಬಲ್ನಾಡು ಗ್ರಾಪಂಗೆ ಇಲ್ಲಿನ ಮಂದಿ ರಸ್ತೆ ನಿರ್ಮಿಸಿ ಕೊಡಿ ಎಂದು ಬೇಡಿಕೆ ಸಲ್ಲಿಸುತ್ತಲೇ ಬಂದಿದ್ದಾರೆ. ಆದರೆ ಈ ತನಕ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿನ ಭೂಮಾಲೀಕ ಕೃಷ್ಣ ಭಟ್ ಅವರು ಈ ಸ್ಥಳ ನನ್ನ ಪಟ್ಟಾ ಭೂಮಿ ಎಂದು ಸುಳ್ಳು ಹೇಳುತ್ತಿದ್ದಾರೆ. ಕಾಲುದಾರಿಯನ್ನೇ ರಸ್ತೆಯಾಗಿ ಪರಿವರ್ತಿಸಿದರೆ ಸುಮಾರು 70 ಜನ ವಾಸಿಸುತ್ತಿರುವ ಈ ಕೊಂಕೆ ಅಜಕಲದ ಜನತೆ ನೆಮ್ಮದಿಯಿಂದ ಬದುಕುವಂತಾಗುತ್ತದೆ. ಆದರೆ ಶ್ರೀಮಂತರ ಲಾಭಿಯಿಂದಾಗಿ ರಸ್ತೆ ನಿರ್ಮಾಣವಾಗುತ್ತಿಲ್ಲ ಎಂದವರು ತಿಳಿಸಿದರು.

ಮೂಲಭೂತ ಸೌಕರ್ಯವಾದ ರಸ್ತೆಯೇ ಇಲ್ಲದ ಈ ಊರಿಗೆ ಅಂಬೇಡ್ಕರ್ ತತ್ವರಕ್ಷಣಾ ವೇದಿಕೆ ರಸ್ತೆ ನಿರ್ಮಾಣ ಮಾಡಿಕೊಡಲು ಮುಂದಾಗಿದ್ದು, ಇದಕ್ಕೆ ತಡೆ ಬಂದರೂ, ನಮ್ಮ ಮೇಲೆ ಕೇಸು ದಾಖಲಾದರೂ ನಾವು ಜಗ್ಗುವುದಿಲ್ಲ. ಸಾರ್ವಜನಿಕರಿಗಾಗಿ ನಾವು ಜೈಲಿಗೆ ಹೋಗಲೂ ನಾವು ಸಿದ್ಧ ಎಂದವರು ಹೇಳಿದರು. 2023ರಲ್ಲಿ ಇಲ್ಲಿನ ಬಂಟ ಸಮುದಾಯಕ್ಕೆ ಸೇರಿದ ರಮ್ಯಶ್ರೀ ಅವರ ಮನೆ ಮಳೆಯಿಂದಾಗಿ ಸಂಪೂರ್ಣವಾಗಿ ಕುಸಿದು ಬಿದ್ದಿತ್ತು. ಆಗ ಸರ್ಕಾರದಿಂದ 1 ಲಕ್ಷ ಪರಿಹಾರಧನ ಸಿಕ್ಕಿತ್ತು. ಆದರೆ ಮನೆ ಪನರ್ ನಿರ್ಮಾಣಕ್ಕೆ ಸಾಮಾಗ್ರಿಗಳನ್ನು ಸಾಗಿಸಲು ರಸ್ತೆ ಇಲ್ಲದ ಕಾರಣ ತಲೆ ಹೊರೆಯಲ್ಲಿಯೇ ತರಬೇಕಾಯಿತು. ಸುಮಾರು 1 ಕಿಮೀ ವ್ಯಾಪ್ತಿಯಲ್ಲಿ ರಸ್ತೆಯ ಅವಶ್ಯಕತೆ ಇದ್ದು, ಇಲ್ಲಿನ ತೋಡಿಗೆ ಕಾಲುಸಂಕದ ಅಗತ್ಯತೆ ಇದೆ. ತಕ್ಷಣ ಅಧಿಕಾರಿಗಳು ಹಾಗೂ ಗ್ರಾಪಂ ಇಲ್ಲಿಗೆ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ನಾವೇ ರಸ್ತೆ ಮಾಡುತ್ತೇವೆ. ಅಲ್ಲಿ ಬೇರೆನಾದರೂ ಸಮಸ್ಯೆ ಉಂಟಾದರೆ ಅದಕ್ಕೆ ಕಂದಾಯ ಇಲಾಖೆಯೇ ಪೂರ್ಣ ಜವಾಬ್ದಾರಿ ಎಂದು ಅವರು ಹೇಳಿದರು.

ಅಂಬೆಡ್ಕರ್ ತತ್ವರಕ್ಷಣಾ ವೇದಿಕೆಯ ರಾಜ್ಯ ಕಾರ್ಯದರ್ಶಿ ಪ್ರಮೋದ್ ತಿಂಗಳಾಡಿ, ಅಜಕಲ ನಿವಾಸಿಗಳಾದ ರಮ್ಯಶ್ರೀ, ಚಂದ್ರಶೇಖರ್, ರೇಖಾ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article