ತುಳುನಾಡ ದೈವದ ಅಭಯ ಫಲಪ್ರದ: ‘ಕೆಡೆಂಜೋಡಿತ್ತಾಯಿ’ಗೆ ‘ಜನಾರ್ಧನರೆಡ್ಡಿ’ ಶರಣು
ಪುತ್ತೂರು: ಗಣಿ ಹಗರಣದಲ್ಲಿ ಸಿಲುಕಿಕೊಂಡು ಎರಡನೇ ಬಾರಿಗೆ ಜೈಲು ಪಾಲಾದ ಗಣಿಧಣಿ ಗಾಲಿ ಜನಾರ್ಧನ ರೆಡ್ಡಿ ಅವರಿಗೆ ಕಡಬ ತಾಲೂಕಿನ ಸವಣೂರು ಬಳಿಯ ಆರಲ್ತಡಿ ಗ್ರಾಮದೈವ ಕೆಡೆಂಜೋಡಿತ್ತಾಯಿ ದೈವ ನೀಡಿದ ಅಭಯ. ಅದರ ಪ್ರಕಾರವಾಗಿ ಅವರು ಬಿಡುಗಡೆಯಾದ ಹಿನ್ನಲೆಯಲ್ಲಿ ಬುಧವಾರ ದೈವಸ್ಥಾನಕ್ಕೆ ಭೇಟಿ ಮಾಡಿ ತುಳುನಾಡಿನ ದೈವದ ನುಡಿಗೆ ತಲೆಬಾಗಿಸಿ ಕೆಡೆಂಜೋಡಿತ್ತಾಯ ದೈವಸ್ಥಾನಕ್ಕೆ ಬಂದು ತಂಬಿಲಸೇವೆ ನಡೆಸಿದರು.
ಆರೇಲ್ತಡಿ ಇರ್ವೆರ್ ಉಳ್ಳಾಕುಲು, ಕೆಡೆಂಜೋಡಿತ್ತಾಯ ಹಾಗೂ ಪರಿವಾರ ದೈವಗಳ ಈ ತಾಣದಲ್ಲಿ ಮೇ.೧೩ ರಂದು ನಡೆದ ದೈವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಜನಾರ್ಧನ ರೆಡ್ಡಿ ಅವರು ಆಗಮಿಸಬೇಕಿತ್ತು. ಆದರೆ ಆಂದ್ರಪ್ರದೇಶದ ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮೇ 6ರಂದು ಜನಾರ್ಧನ ರೆಡ್ಡಿ ಜೈಲು ಪಾಲಾಗಿದ್ದರು. ಈ ಕಾರಣದಿಂದ ಅವರು ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಬ್ರಹ್ಮಕಲಶೋತ್ಸವದ ಸಂದರ್ಭ ನಡೆದ ಗ್ರಾಮದೈವ ಕೆಡೆಂಜೋಡಿತ್ತಾಯಿ ನೇಮೋತ್ಸವದಲ್ಲಿ ಜನಾರ್ಧನ ರೆಡ್ಡಿ ಅವರ ಅಭಿಮಾನಿಗಳು ಜೈಲಿನಿಂದ ಅವರು ಬಿಡುಗಡೆಯಾಗುವಂತೆ ಮಾಡಲು ಮೊರೆ ಇಟ್ಟಿದ್ದರು.
ದೈವ ನೀಡಿದ ಅಭಯ..:
ನೇಮೋತ್ಸವದ ಸಂದರ್ಭ ಭಕ್ತರ ಮೊರೆಯನ್ನು ಆಲಿಸಿದ ಕೆಡೆಂಜೋಡಿತ್ತಾಯಿ ದೈವ ಇಂದಿನಿಂದ ಒಂದು ತಿಂಗಳ ಒಳಗಾಗಿ ಅವರು ಜೈಲಿನಿಂದ ಬಿಡುಗಡೆಯಾಗುತ್ತಾರೆ ಎಂದು ಅಭಯ ನೀಡಿತ್ತು. ದೈವದ ನೀಡಿದ ಅಭಯದಂತೆ ತಿಂಗಳ ಒಳಗಾಗಿ ಜನಾರ್ಧನ ರೆಡ್ಡಿ ಅವರು ಜೈಲಿನಿಂದ ಬಿಡುಗಡೆಯಾಗಿದ್ದರು. ಈ ಹಿನ್ನಲೆಯಲ್ಲಿ ಸಂಕ್ರಮಣ ವಿಶೇಷ ದಿನ ಅವರು ಭೇಟಿ ನೀಡಿ ತಂಬಿಲಸೇವೆ ನೀಡುವ ಮೂಲಕ ದೈವಕ್ಕೆ ಶರಣಾದರು. ಜೈಲಿನಿಂದ ಬಿಡುಗಡೆಯಾದ ಒಂದೂವರೆ ತಿಂಗಳ ಬಳಿಕ ತುಳುನಾಡಿನ ದೈವದ ತಾಣಕ್ಕೆ ಬಂದ ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ಅವರು ದೈವದ ಕಾರಣಿಕದ ಮುಂದೆ ತಲೆಬಾಗಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ವಿಧಾನಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ದೇವಸ್ಥಾನದ ಸಮಿತಿಯ ರಾಕೇಶ್ ರೈ ಕೆಡೆಂಜಿ ಮತ್ತಿತರರು ಭಾಗಿಯಾಗಿದ್ದರು. ಮುಂದಿನ ಬಾರಿ ನೇಮೋತ್ಸವಕ್ಕೆ ಕುಟುಂಬ ಪರಿವಾರದ ಸಮೇತನಾಗಿ ಭಾಗವಹಿಸುವುದಾಗಿ ತಿಳಿಸಿದ ಅವರು ನೇಮೋತ್ಸವದ ಖರ್ಚುವೆಚ್ಚಗಳನ್ನು ತಾನೇ ಭರಿಸುವುದಾಗಿ ಹೇಳಿದರು. ಬಳಿಕ ಸಭಾಮಂಟಪಕ್ಕೆ ಶಿಲಾನ್ಯಾಸ ಮಾಡಿ ರೂ.15 ಲಕ್ಷ ದೇಣಿಗೆ ನೀಡಿದರು.