
ಸಂತ ಫಿಲೋಮಿನಾ ಕಾಲೇಜಿನಲ್ಲಿ ಬಿಬಿಎ ವಿದ್ಯಾರ್ಥಿಗಳಿಗೆ ‘ಡಿಜಿಟಲ್ ಮಾರ್ಕೆಟಿಂಗ್ ತರಗತಿ’
Friday, July 25, 2025
ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಬ್ಯುಸಿನೆಸ್ ಅಡ್ಮಿನಿಸ್ಟ್ರೇಶನ್ ವಿಭಾಗದ ವತಿಯಿಂದ ಐಸಿಟಿ ಅಕಾಡೆಮಿಯ ಸಹಯೋಗದೊಂದಿಗೆ ಬಿಬಿಎಯಲ್ಲಿ ಡಿಜಿಟಲ್ ಮಾರ್ಕೆಟಿಂಗ್ ವಿಶೇಷ ವಿಷಯವಾಗಿ ಆಯ್ಕೆಮಾಡಿದ ವಿದ್ಯಾರ್ಥಿಗಳಿಗೆ ಡಿಜಿಟಲ್ ಮಾರ್ಕೆಟಿಂಗ್ ತರಗತಿಗಳನ್ನು ಪ್ರಾರಂಭಿಸಲಾಯಿತು.
ಐಸಿಟಿ ಅಕಾಡೆಮಿಯ ಪ್ರಮಾಣೀಕೃತ ತರಬೇತುದಾರ ಸಯ್ಯದ್ ಕಮ್ರಾನ್ ತರಗತಿಗಳನ್ನು ನಡೆಸಿಕೊಟ್ಟರು. ಶೇಕಡಾ ನೂರು ಪ್ರಾಯೋಗಿಕ ವಿಷಯಗಳನ್ನೊಳಗೊಂಡ ತರಗತಿಗಳನ್ನು ಕಾಲೇಜಿನ ಕಂಪ್ಯೂಟರ್ ಪ್ರಯೋಗಾಲಯದಲ್ಲಿ ನಡೆಸಲಾಯಿತು. ತರಬೇತಿಯ ಪ್ರತಿದಿನವೂ ವಿದ್ಯಾರ್ಥಿಗಳನ್ನು ಆನ್‌ಲೈನ್ ಪರೀಕ್ಷೆಗಳಿಗೊಳಪಡಿಸಲಾಯಿತು. ಕೋರ್ಸ್ ಮತ್ತು ಮೌಲ್ಯಮಾಪನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಐಸಿಟಿ ಅಕಾಡೆಮಿಯಿಂದ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ.
‘ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ತರಬೇತಿ ನೀಡುತ್ತಿರುವುದು ಅವರ ಕೌಶಲ್ಯಾಭಿವೃದ್ಧಿಯಲ್ಲಿ ಕಾಲೇಜಿನ ಬದ್ಧತೆಗೆ ಸಾಕ್ಷಿಯಾಗಿದೆ. ಐಸಿಟಿ ಅಕಾಡೆಮಿಯ ಸಹಯೋಗದೊಂದಿಗೆ ಆಯೋಜಿಸಲಾದ ಡಿಜಿಟಲ್ ಮಾರ್ಕೆಟಿಂಗ್ ತರಬೇತಿಯಲ್ಲಿ ಸಕ್ರಿಯವಾಗಿ ಪಾಲೊಂಡ ವಿದ್ಯಾತ್ಥಿಗಳಿಗೆ ಅಭಿನಂದನೆಗಳು. ಈ ತರಬೇತಿಯು ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯಲು ಸಹಕಾರಿಯಾಗುವುದು’ ಎಂದು ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಹೇಳಿದ್ದಾರೆ
‘ಇಂದಿನ ಡಿಜಿಟಲ್ ಯುಗದಲ್ಲಿ, ಮಾರ್ಕೆಟಿಂಗ್ ಅಮೂಲಾಗ್ರ ಬದಲಾವಣೆಹೊಂದಿದ ಕ್ಷೇತ್ರವಾಗಿದೆ. ಈ ಕೋರ್ಸ್ ನಮ್ಮ ವಿದ್ಯಾರ್ಥಿಗಳಿಗೆ ಡಿಜಿಟಲ್ ಮಾರ್ಕೆಟಿಂಗ್ ತಂತ್ರಗಳು, ಪರಿಕರಗಳು ಮತ್ತು ತಂತ್ರಗಳಿಗೆ ಅಗತ್ಯವಾದ ಪ್ರಾಯೋಗಿಕ ವಿಷಯಗಳಲ್ಲಿ ಪರಿಣತಿಯನ್ನು ಪಡೆಯುವ ಅವಕಾಶವನ್ನು ಒದಗಿಸಿದೆ. ಅಂತಹ ಉಪಕ್ರಮಗಳು ಪಠ್ಯಕ್ರಮದ ಮೌಲ್ಯವರ್ಧನೆ ಮಾಡುತ್ತವೆ ಹಾಗೂ ಪದವಿ ಪಠ್ಯಕ್ರಮಗಳು ಮತ್ತು ಔದ್ಯೋಗಿಕ ಕ್ಷೇತ್ರಗಳ ಅಂತರವನ್ನು ಕಡಿಮೆಗೊಳಿಸುತ್ತವೆ’ ಎಂದು ಕಾಲೇಜಿನ ವ್ಯವಹಾರ ಆಡಳಿತ ವಿಭಾಗ ಮುಖ್ಯಸ್ಥ ಡಾ. ರಾಧಾಕೃಷ್ಣ ಗೌಡ ಹೇಳಿದ್ದಾರೆ.