
ಕಾರ್ಮಿಕರಿಗೆ ಅನ್ಯಾಯವಾದರೆ ಅಧಿಕಾರದ ಕುರ್ಚಿ ರಸ್ತೆಗೆ: ಈಶ್ವರಿ ಶಂಕರ್ ಸರ್ಕಾರಕ್ಕೆ ಎಚ್ಚರಿಕೆ
ಪುತ್ತೂರು: ಕಾರ್ಮಿಕರ ಬದುಕನ್ನು ಸಂಕಷ್ಟಕ್ಕೀಡು ಮಾಡುವಂತಹ ಕಾರ್ಯಗಳಿಗೆ ಸರ್ಕಾರ ಕೈ ಹಾಕುವ ಮೂಲಕ ನಮ್ಮ ಹಕ್ಕುಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡಿದರೆ ಕಾಯ್ದೆ ತಿದ್ದುಪಡಿ ಮಾಡಿದರೆ ನಿಮ್ಮ ಅಧಿಕಾರದ ಕುರ್ಚಿಯನ್ನು ತಂದು ರಸ್ತೆಗೆ ಬೀಸಾಡುವ ತಾಕತ್ತು ನಮಗಿದೆ ಎಂದು ಕಾರ್ಮಿಕೆ ಮುಖಂಡೆ ಈಶ್ವರಿ ಶಂಕರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಬುಧವಾರ ಕೇಂದ್ರ ಕಾರ್ಮಿಕ ಸಂಘಗಳ ಒಕ್ಕೂಟ ಜೆಸಿಟಿಯು ಮತ್ತು ರೈತ ಸಂಘಟನೆಗಳ ಒಕ್ಕೂಟ ಎಸ್.ಕೆ.ಎಂ. ಆಶ್ರಯದಲ್ಲಿ ಕಾರ್ಮಿಕ ವರ್ಗದ ದೇಶಾದ್ಯಂತ ಸಾರ್ವತ್ರಿಕ ಮುಷ್ಕರದ ಅಂಗವಾಗಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಅಕ್ಷರ ದಾಸೋಹ ನೌಕರರ ಸಂಘದಿಂದ ಪುತ್ತೂರು ಉಪವಿಭಾಗಾಧಿಕಾರಿಗಳ ಕಚೇರಿ ಬಳಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಅನಗತ್ಯವಾಗಿ ಕಾರ್ಮಿಕರನ್ನು ಕೆಣಕುವ ಕೆಣಕುವ ಕೃತ್ಯಕ್ಕೆ ಕೈ ಹಾಕಿದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು. ಕೆಂಬಾವುಟ ಚುನಾವಣೆಯಲ್ಲಿ ಸೋತಿರಬಹುದು ಆದರೆ ಕೆಂಬಾವುಟ ಹಿಡಿದು ನಡೆಸಿದ ಯಾವುದೇ ಹೋರಾಟಗಳು ಸೋತಿಲ್ಲ ಎಂಬುವುದನ್ನು ಅಧಿಕಾರಿ ವರ್ಗ ಮತ್ತು ಸರ್ಕಾರಗಳು ನೆನಪಿಟ್ಟುಕೊಳ್ಳಬೇಕು ಎಂದು ಅವರು ಹೇಳಿದರು.
ಜಿಲ್ಲಾ ಮುಖಂಡ ಶ್ಯಾಮರಾಜ್ ಪಟ್ರಮೆ ಅವರು ಮಾತನಾಡಿ, ದುಡಿಯುವ ಕೈಗಳ ಪರವಾಗಿ ಸರ್ಕಾರ ಇರಬೇಕು. ಆದರೆ ಈ ದುಡಿಯುವ ವರ್ಗದ ಮೇಲೆ ಸರ್ಕಾರ ಅಧಿಕಾರ ಚಲಾಯಿಸುತ್ತಿದೆ. ನಮ್ಮ ಮೌನವನ್ನು ಸರ್ಕಾರ ತಪ್ಪು ಅರ್ಥ ಮಾಡಿಕೊಂಳ್ಳುತ್ತಿದೆ. ಹಾಗಾಗಿ ನಾವು ಹೋರಾಟವನ್ನು ಮತ್ತಷ್ಟು ಹೆಚ್ಚು ಮಾಡಬೇಕಾಗಿದೆ ಎಂದರು.
ಅಭಿವೃದ್ಧಿಯ ಹೆಸರಿನಲ್ಲಿ ಕಾರ್ಪೊರೇಟ್ ಕಂಪನಿಗಳ ಸೇವಕರನ್ನಾಗಿ ಮಾಡಲು 29 ಪ್ರಮುಖ ಕಾರ್ಮಿಕ ಕಾನೂನುಗಳನ್ನು 4 ಸಂಹಿತೆಗಳಲ್ಲಿ ರೂಪೀಕರಿಸಲಾಗಿದೆ. ಅಕ್ಷರ ದಾಸೋಹ, ಆಶಾ ಕಾರ್ಮಿಕರನ್ನು ಖಾಯಂ ಗೊಳಿಸಬೇಕು ಮತ್ತು ಕನಿಷ್ಠ ವೇತನ ಜಾರಿಗೊಳಿಸಬೇಕು. ಕಾರ್ಮಿಕ ಕಾನೂನುಗಳಲ್ಲಿ ಕೆಲಸದ ಅವಧಿ ಹೆಚ್ಚಳ ಸೇರಿದಂತೆ ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಮತ್ತು ಜೀವನ ಯೋಗ್ಯ ಕನಿಷ್ಠ ವೇತನ ರೂ. ೩೬ಸಾವಿರ ನಿಗದಿಗಾಗಿ ಗುತ್ತಿಗೆ ಮುಂತಾದ ಖಾಯಂ ಯೇತರ ಕಾರ್ಮಿಕರ ಖಾಯಂಗೆ ಶಾಸನಕ್ಕಾಗಿ, ಅಸಂಘಟಿತ ಕಾರ್ಮಿಕರ ಭವಿಷ್ಯ ನಿಧಿ ಪಿಂಚಣಿ ಸೇರಿದಂತೆ ಕಲ್ಯಾಣ ಸೌಲಭ್ಯಗಳ ಜಾರಿಗಾಗಿ ಆಗ್ರಹಿಸಿ ಅಕ್ಷರ ದಾಸೋಹ ನೌಕರರು ಮದ್ಯಾಹ್ನದ ಊಟದ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದರು.
ಅಕ್ಷರ ದಾಸೋಹ ನೌಕರರ ಸಂಘದ ಪುತ್ತೂರು ಅಧ್ಯಕ್ಷೆ ರಂಜಿತಾ, ಪ್ರಧಾನ ಕಾರ್ಯದರ್ಶಿ ಲತಾ, ಸುಳ್ಯ ಸಂಘದ ಅಧ್ಯಕ್ಷೆ ರೇವತಿ, ಕಾರ್ಯದರ್ಶಿ ಸುಲೋಚನಾ, ಕಡಬ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮೀ, ಕಾರ್ಯದರ್ಶಿ ಭವ್ಯ, ಕಾರ್ಮಿಕ ಮುಖಂಡರಾದ ಜನಾರ್ದನ ಪುತ್ತೂರು, ದಾಮೋದರ, ವೇದಾ, ತೆರೆಸಾ, ಹೇಮಲತಾ, ಲೀಲಾವತಿ, ಸುಲೋಚನಾ ಸಹಿತ ಅಕ್ಷರದಾಸೋಹ ನೌಕರರ ಸಂಘದ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಡಿವೈಎಫ್‌ಐ ಮುಖಂಡ ಅಭಿಷೇಕ್ ಕಾರ್ಯಕ್ರಮ ನಿರೂಪಿಸಿದರು. ರಂಜಿತಾ ವಂದಿಸಿದರು.