
ರಕ್ಷಿತ್ ಶಿವರಾಂ ಆಮದು ನಾಯಕ, ಸುಳ್ಳಿನ ಸರದಾರ, ರಾಜಕೀಯ ಪ್ರಬುದ್ಧತೆ ಇಲ್ಲ: ಶಾಸಕ ಹರೀಶ್ ಪೂಂಜ
ಉಜಿರೆ: ರಕ್ಷಿತ್ ಶಿವರಾಂ ಸುಳ್ಳಿನ ಸರದಾರ, ಬೆಳ್ತಂಗಡಿಯ ಆಮದು ನಾಯಕ. ಅವರ ಸುಳ್ಳಿನ ಸರಮಾಲೆಯನ್ನು ಬೆಳ್ತಂಗಡಿ ತಾಲೂಕಿನ ಜನತೆ ಒಪ್ಪಿಕೊಳ್ಳುವುದಿಲ್ಲ, ಅವರಿಗೆ ರಾಜಕೀಯದಲ್ಲಿ ಪ್ರಬುದ್ಧತೆ ಇಲ್ಲ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಜು.16 ರಂದು ಉಜಿರೆಯ ಓಷಿಯನ್ ಪರ್ಲ್‌ನಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಕಾಂಗ್ರೆಸ್ ಸರಕಾರದ ಪೊಳ್ಳು ಭರವಸೆಗಳ ಹಾಗೂ ಶೇ.40 ಹೇಳಿಕೆಗಳ ಬಗ್ಗೆ ಸವಿವರ ಸಾಕ್ಷ್ಯಾಧಾರ ನೀಡಿ ರಕ್ಷಿತ್ ಶಿವರಾಂ ಹೇಳಿಕೆ ಆಧಾರರಹಿತವೆಂದು ಸಾರಾಸಗಟಾಗಿ ಅಲ್ಲಗಳೆದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಇರುವ ಸಂದರ್ಭದಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಕ್ಕೆ ಸುಮಾರು 3500 ಸಾವಿರ ಕೋಟಿ ಅನುದಾನ ತಂದು ಕ್ರಿಯಾ ಯೋಜನೆ ಮಾಡಿದವ ನಾನು. ನಿಮ್ಮ ಈಗಿನ ರಾಜ್ಯ ಸರಕಾರ ಕೊಟ್ಟಂತಹ ರೂ.10 ಕೋಟಿಗೆ 10 ಸಾವಿರ ಕೋಟಿ ಕೊಟ್ಟಂತೆ ಮಾತನಾಡುತ್ತೀರಿ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಹರೀಶ್ ಪೂಂಜರು ಇರುವುದಿಲ್ಲ ಎಂಬ ಆರೋಪ ಮಾಡಿದ್ದೀರಿ. ರಾಜ್ಯದಲ್ಲಿ 224 ವಿಧಾನಸಭಾ ಶಾಸಕರುಗಳಿಗೆ ಬೆಂಗಳೂರಿನಲ್ಲಿ ಕಮಿಟಿ ಮೀಟಿಂಗ್ ಇರುತ್ತದೆ. ನನ್ನ ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ನಾನು ಅದಕ್ಕೆ ಹೋಗುತ್ತಿದ್ದೇನೆ. ಎಲ್ಲ ಸಚಿವರ ಬಳಿಗೆ ಹೋಗಿ ಅನುದಾನಕ್ಕೆ ಕಾಡಿ ಬೇಡಿ ಪ್ರಾಮಾಣಿಕವಾಗಿ ಕಾಳಜಿ ಕೆಲಸ ಮಾಡಿದ್ದೇನೆ. ಪಕ್ಷದ ಸಂಘಟನೆಯ ದೃಷ್ಟಿಯಿಂದ ಬೆಂಗಳೂರು ಮತ್ತಿತರ ಕಡೆಗಳಿಗೆ ಹೋಗಿ ಕೆಲಸ ಮಾಡಿದ್ದೇನೆ ಎಂದರು.
ಕಳೆಂಜದ ಸ.ನಂ. 309 ರ 8 ಸಾವಿರ ಎಕ್ರೆ ಜಾಗದ ವಿಚಾರವಾಗಿ ರಕ್ಷಿತ್ ಅವರು ಯಾವುದೇ ಪರಿಜ್ಞಾನವಿಲ್ಲದೆ ಪತ್ರಿಕಾಗೋಷ್ಠಿಯಲ್ಲಿ ಹಸಿ ಹಸಿ ಸುಳ್ಳು ಹೇಳಿಕೆ ನೀಡಿದ್ದಾರೆ. ವನ್ಯಜೀವಿ ಜಾಗ ಮತ್ತು ಹಕ್ಕುಚ್ಯುತಿ ಸಮಿತಿ ಜಂಟಿ ಸರ್ವೆಗೆ ಆದೇಶವಾಗಿದೆ ಎಂದರು.
ರೇಖ್ಯದ ಸ.ನಂ. 79 ರಲ್ಲಿ 150 ಜನರ ಹಕ್ಕುಪತ್ರ ಪಹಣಿಗಾಗಿ 700 ಎಕ್ರೆ ಸರ್ವೆಗೆ ನಕ್ಷೆ ಸಿದ್ಧವಾಗಿ ಪ್ಲಾನಿಂಗ್ ಕಮಿಟಿ ಸಿದ್ಧತೆ ನಡೆಸಿದ್ದು, ರಕ್ಷಿತ್‌ಗೆ ಕಾನೂನು ಪ್ರಕ್ರಿಯೆಯ ಅರಿವಿಲ್ಲ ಎಂದು ಆರೋಪಿಸಿದರು. ತಾಲೂಕು ಕ್ರೀಡಾಂಗಣ, ಸಮುದಾಯ ಭವನ, ಅಂಬೇಡ್ಕರ್ ಭವನಗಳಿಗೆ ಅನುದಾನ ತಡೆಹಿಡಿದಿದ್ದೀರಿ. 30 ದೇವಸ್ಥಾನಗಳ ಸಮುದಾಯ ಭವನಗಳಿಗೆ 5 ಕೋಟಿ ರೂ. ವೆಚ್ಚದ ಯೋಜನೆ ಸಿದ್ಧಪಡಿಸದ್ದರೂ ಅನುದಾನ ತಡೆಹಿಡಿದ ನಿಮಗೆ ದೇವರ ಶಾಪ ತಟ್ಟದಿರುವುದಿಲ್ಲ ಎಂದರು.
ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಅವರಿಗೆ ಅಭಿವೃದ್ಧಿಗೆ ಅನುದಾನವಿದೆ, ಆದರೆ ಹರೀಶ್ ಪೂಂಜರಿಗೆ ಅನುದಾನ ಯಾಕಿಲ್ಲ ಎಂಬ ಪ್ರಶ್ನೆ ಕೇಳಿದ್ದೀರಿ. ಉಮಾನಾಥ ಕೋಟ್ಯಾನ್ ಅವರು ಮಾಡಿದ ಅಭಿವೃದ್ಧಿಯಲ್ಲಿ ಒಂದೇ ಒಂದು ರಾಜ್ಯ ಸರ್ಕಾರದ ಅನುದಾನವಿಲ್ಲ. ಎಲ್ಲ ಕೇಂದ್ರ ಸರಕಾರದ ಅನುದಾನ ಇರುವಂತಹದ್ದು. ಸುಳ್ಳಿನ ಸರಮಾಲೆಯನ್ನು ಕಟ್ಟುವುದಕ್ಕೆ ಹೋಗಬೇಡಿ ರಕ್ಷಿತ್ ಶಿವರಾಮ್ ರವರೇ ಎಂದವರು ಪ್ರಶ್ನಿಸಿದರು.
ಯುವ ನಿಧಿಯಲ್ಲಿ ಬೆಳ್ತಂಗಡಿಯಲ್ಲಿ ಎಷ್ಟು ಫಲಾನುಭವಿಗಳು ಇದ್ದಾರೆ? ಕೇಂದ್ರ ಸರಕಾರ ಕೊಡುವಂತಹ ಅಕ್ಕಿಯನ್ನು ತಮ್ಮದೆಂದು ಬಿಂಬಿಸಿದ್ದೀರಿ. ಹರೀಶ್ ಪೂಂಜರು ಕೆಡಿಪಿ ಸಭೆ ಮಾಡಿಲ್ಲ ಎಂಬ ಆರೋಪ ಮಾಡಿದ್ದೀರಿ. ಕೆಡಿಪಿ ಸಭೆ ಮಾಡಿದ್ರೆ ಅಲ್ಲಿಗೆ ಬಂದವರಿಗೆ ಚಾ, ಕಾಫಿ ಕೊಡುವುದಕ್ಕೂ ತಾಲೂಕು ಪಂಚಾಯತ್‌ನಲ್ಲಿ ದುಡ್ಡಿಲ್ಲದ ಪರಿಸ್ಥಿತಿಯಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಅದ್ಭುತ ಜನ ಸ್ಪಂದನ ಕಾರ್ಯಕ್ರಮ ನಾವು ತಾಲೂಕಿನಲ್ಲಿ ಮಾಡುತ್ತಿದ್ದೇವೆ. ಮಾಜಿ ವಿ.ಪ. ಶಾಸಕ ಹರೀಶ್ ಕುಮಾರ್ ಅವರು ತಂದ 3,4 ಅನುದಾನವನ್ನು ರಕ್ಷಿತ್ ಶಿವರಾಮ್ ಅವರು ತಾನೇ ತಂದಿದ್ದೇನೆ ಎಂದು ಸುಳ್ಳು ಹೇಳುತ್ತಿದ್ದೀರಿ. ಯಾರೋ ಹುಟ್ಟಿಸಿದ ಮಗುವಿಗೆ ನೀವು ತಂದೆ ಆಗುವುದಕ್ಕೆ ಹೋಗಬೇಡಿ ಎಂದರು.
ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆ:
ಸಿಆರ್‌ಎಫ್ ನಿಧಿಯಿಂದ ಮಂಜೂರುಗೊಂಡ 6 ಕೋಟಿಯಲ್ಲಿ ಎಷ್ಟು ಕಾಮಗಾರಿ ಆಗುತ್ತದೆ? ಗುರುವಾಯನಕೆರೆಯಿಂದ ಪಿಲಿಗೂಡುವರೆಗೆ ಮಾತ್ರ ರಸ್ತೆ ದುರಸ್ಥಿಯಾಗಿದೆ. ಅದನ್ನು ನಾನು ಶಿಲಾನ್ಯಾಸ ಸಂದರ್ಭದಲ್ಲಿ ಹೇಳಿದ್ದೆ. ಅಕ್ಕಿ ಹಿಟ್ಟಿಗೆ ಹೆಚ್ಚು ನೀರು ಹಾಕಿ ನೀರು ದೋಸೆ ಮಾಡಿದ ಹಾಗೆ ಮಾಡುವುದಕ್ಕೆ ಆಗುವುದಿಲ್ಲ. ಈ ಕ್ಷೇತ್ರದ ಜನರನ್ನು ಸುಳ್ಳಿನ ಹಾದಿಯಲ್ಲಿ ಮಂಗ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಉತ್ತರಿಸಿದರು.
ನಾನು ಮತ್ತು ನನ್ನ ಕುಟುಂಬ ಭ್ರಷ್ಟಾಚಾರ ರಹಿತ ಕುಟುಂಬ. ಇವತ್ತು ನಿಮ್ಮದೇ ಸರಕಾರ ಇದೆ. ನಿಮಗೆ ತಾಕತ್ತು ಇದ್ದರೆ ತನಿಖೆ ನಡೆಸಿ, ನಾನು, ನನ್ನ ಕುಟುಂಬ ತನಿಖೆಗೆ ಸದಾ ಸಿದ್ಧ. ವಕೀಲರ ತಂಡವನ್ನು ಕಟ್ಟಿಕೊಂಡು ತಪ್ಪಿಸಿಕೊಂಡು ಬದುಕುವವ ನಾನಲ್ಲ.ರಕ್ಷಿತ್ ಶಿವರಾಮ್ ರವರೇ ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಮಾಡಬೇಡಿ ಎಂದರು.
ನನ್ನ ಮೇಲೆ ಮೊಕದ್ದಮೆ ದಾಖಲಿಸಿ ಕೃಷಿಕರ ಬದುಕನ್ನು ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯ ಸರಕಾರ ಹಿಂದೂ ಜನರನ್ನು ದಮನಿಸುವ ಕಾರ್ಯದಲ್ಲಿ ತೊಡಗಿದೆ. ನನ್ನ ಮೇಲೆ ವೃಥಾ ಆರೋಪ ಹೊರಿಸಿ ಕೇಸ್ ಹಾಕಿದ್ದಾರೆ. ಕಾನೂನಿಗೆ ತಲೆಬಾಗಿ ಹಿಂದುತ್ವದ ರಕ್ಷಣೆಗೆ ಮುಂದೆ ನಿಂತು ಕಾನೂನಿನ ಚೌಕಟ್ಟಿನಲ್ಲಿ ಕಾರ್ಯ ಮಾಡಲು ಸಿದ್ಧ ಎಂದರು.
ಮಳೆ ಹಾನಿ ಸಮೀಕ್ಷೆಗೆಂದು ಜಿಲ್ಲಾ ಉಸ್ತುವಾರಿ ಸಚಿವರನ್ನು ಗಿರಿಗಿಟ್ ರೀತಿ ತಿರುಗಿಸಿ ರಾಜಕೀಯ ಚಪಲಕ್ಕೋಸ್ಕರ ಮಸೀದಿಗೆ ಕರೆದುಕೊಂಡು ಹೋಗಿದ್ದೀರಿ. ಸಚಿವರು ಒಂದು ರೂಪಾಯಿ ಒದಗಿಸಿಲ್ಲ ಎಂದು ಅವರು ಆರೋಪಿಸಿದರು. ಸಿದ್ಧರಾಮಯ್ಯ ಅವರು ಮೂಡ ಹಗರಣದಲ್ಲಿ ಸಾವಿರಾರು ರೂ. ಅವ್ಯವಹಾರ ನಡೆದಿದೆ. ಆ ಬಗ್ಗೆ ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಹೋರಾಟದಲ್ಲಿ ಭಾಗವಹಿಸಿದ್ದೆ. 400 ಕೋಟಿ ರೂ. ಸೈಟ್‌ನ್ನು ವಾಪಸು ದೊರಕಿಸುವಲ್ಲಿ ರಾಜ್ಯದ ಜನರ ದುಡ್ಡು ಕೊಳ್ಳೆ ಹೊಡೆಯುವ ಹುನ್ನಾರ ನಡೆಸಿದ್ದಾರೆ ಎಂದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಬಿಜೆಪಿ ಬೆಳ್ತಂಗಡಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಜಯಾನಂದ ಗೌಡ ಪ್ರಜ್ವಲ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸೀತಾ ರಾಮ್ ಬೆಳಾಲು, ಎಸ್.ಟಿ. ಮೋರ್ಚಾದ ಅಧ್ಯಕ್ಷ ರಾಜೇಶ್ ಎಂ.ಕೆ., ಧರ್ಮಸ್ಥಳ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಹರೀಶ್ ಕೆಬಿ, ಓಬಿಸಿ ಮೋರ್ಚಾದ ಅಧ್ಯಕ್ಷ ರತ್ನಾಕರ ಬುಣ್ಣನ್ ಉಪಸ್ಥಿತರಿದ್ದರು.