ಕಲ್ಲಡ್ಕದಲ್ಲಿ 93ನೇ ವರ್ಷದ ಮೊಸರುಕುಡಿಕೆ ಉತ್ಸವದ ವೈಭವ ಪೂರ್ಣ ಶೋಭಾಯಾತ್ರೆ
ಕಲ್ಲಡ್ಕ ಶ್ರೀರಾಮ ಮಂದಿರದಿಂದ ಹೊರಟ ಹೂವಿನಿಂದ ಅಲಂಕೃತವಾದ ಶ್ರೀ ಕೃಷ್ಣ ದೇವರ ಪಲ್ಲಕಿಯ ಶೋಭಾಯಾತ್ರೆಯು ಕಲ್ಲಡ್ಕ ರಾಜಾರಸ್ತೆಯಲ್ಲಿ ಕೆ.ಸಿ.ರೋಡು ವರೆಗೆ ಸಾಗಿ ಅಲ್ಲಿಂದ ವಾಪಾಸ್ ಮೇಲಿನ ಪೇಟೆಯವರೆಗೆ ಅಗಮಿಸಿ ಮಂದಿರದಲ್ಲಿ ಸಂಪನ್ನಗೊಂಡಿತು.
ಈ ಬಾರಿ ಕಲ್ಲಡ್ಕದಲ್ಲಿ ಮೇಲ್ಸ್‌ತುವೆ ಪೂರ್ಣಗೊಂಡಿರುವುದರಿಂದ ಸರ್ವಿಸ್ ರಸ್ತೆಯಲ್ಲಿ ಯಾವುದೇ ತಡೆ ಇಲ್ಲದೆ ಮೆರವಣಿಗೆಯು ಸಾಂಗವಾಗಿ ನಡೆದಿದ್ದು, ಭಕ್ತಸಮೂಹ ಮೇಲ್ಸ್‌ತುವೆಯ ತಳಭಾಗದುದ್ದಕ್ಕು ಹಾಗೂ ಹೆದ್ದಾರಿ ಪಕ್ಕದ ಕಟ್ಟಡದಲ್ಲು ನಿಂತು ಮೆರವಣಿಗೆಯನ್ನು ವೀಕ್ಷಿಸಿ ಸಂಭ್ರಮ ಪಟ್ಟರು.
ವಿವಿಧ ಸಂಘಟನೆಗಳ ಸ್ತಬ್ದಚಿತ್ರ, ಟ್ಯಾಬ್ಲೋ:
ಶ್ರೀರಾಮ ವಿದ್ಯಾಕೇಂದ್ರದ ಮಕ್ಕಳಿಂದ ಶ್ರೀ ಕೃಷ್ಣ ಲೋಕ, ಕಲ್ಲಡ್ಕ ಶಿಲ್ಪಾ ಬಳಗದ ಕೇರಳ ಶೈಲಿಯ ಪ್ರಭಾವಳಿಯ ನೃತ್ಯ, ಗೊಂಬೆಕುಣಿತ, ಕೀಲುಕುದುರೆ ನೃತ್ಯ, ಹುಲಿವೇಷದ ಭರಾಟೆ, ನಾಸಿಕ್ ಬ್ಯಾಂಡ್ ವಿವಿಧ ವಾದ್ಯಗೋಷ್ಠಿ ಶೋಭಾಯಾತ್ರೆಗೆ ವಿಶೇಷ ಮೆರಗು ನೀಡಿತು. ಇದೇ ವೇಳೆ ವಿವಿದೆಡೆಯಲ್ಲಿ ಕಟ್ಟಲಾದ ಮಡಕೆಯನ್ನು ಸ್ಥಳೀಯ ಯುವಕರು ಪಿರಮಿಡ್ ರಚಿಸಿ ಒಡೆಯುವ ದೃಶ್ಯವನ್ನು ಭಕ್ತ ಸಮೂಹ ಕಣ್ತುಂಬಿಕೊಂಡರು. ಪಲ್ಲಕಿಯ ಮುಂಭಾಗ ಕೊಳನೂದುವ ಶ್ರೀಕೃಷ್ಣ ವೇಷಧಾರಿ ವಿಶೇಷ ಗಮನಸೆಳೆಯಿತು.
ಸಂಸದ ಕ್ಯಾ. ಬ್ರಿಜೇಶ್ ಚೌಟ, ಶ್ರೀರಾಮಾಂಜನೇಯ ಸೇವಾ ಟ್ರಸ್ಟ್‌ನ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಕಾರ್ಯದರ್ಶಿ ನಾಗೇಶ್ ಕಲ್ಲಡ್ಕ, ಶ್ರೀ ರಾಮ ಆಡಳಿತ ಸಮಿತಿಯ ಅಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್, ಕಾರ್ಯದರ್ಶಿ ಕ. ಕೃಷ್ಣಪ್ಪ, ಉತ್ಸವ ಸಮಿತಿ ಅಧ್ಯಕ್ಷ ಪುಪ್ಪರಾಜ್ ಶೆಟ್ಟಿಗಾರ್, ಕಾರ್ಯದರ್ಶಿ ಸುಜೀತ್ ಕೊಟ್ಟಾರಿ, ಭಜನಾ ಸಮಿತಿ ಅಧ್ಯಕ್ಷಹರೀಶ್ ಆಚಾರ್ಯ, ಉತ್ತಮ ಕುಮಾರ್ ಪಳನೀರು, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ವಸಂತ ಮಾಧವ, ನಿತಿನ್ ಏಳ್ತಿಮಾರ್, ಕೃಷ್ಣಪ್ರಸಾದ್, ಮೋನಪ್ಪ ದೇವಸ್ಯ, ರಾಜೇಶ್ ಪಳನೀರು, ಜಯರಾಮ ರೈ, ಡಾ. ಕಮಲಾ ಪ್ರಭಾಕರ ಭಟ್, ಸುಲೋಚನಾ ಜಿ.ಕೆ. ಭಟ್ ಮೊದಲಾದವರು ಮರವಣಿಗೆಯಲ್ಲಿ ಪಾಲ್ಗೊಂಡರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಮಂದಿರಕ್ಕೆ ಭೇಟಿ ನೀಡಿ ದೇವರ ಪ್ರಸಾದ ಸ್ವೀಕರಿಸಿದರು.
ಶೋಬಾಯಾತ್ರೆ ಸಂಪನ್ನಗೊಂಡ ಬಳಿಕ ರಾಮಾಂಗಣದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ನ್ಯಾಯವಾದಿ, ಚೆಂಡೆ ಪುಳಿಂಚ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀಧರ ಶೆಟ್ಟಿ ಪುಳಿಂಚ ಧಾರ್ಮಿಕ ಉಪನ್ಯಾಸ ಗೈದರು. ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ಎಲ್ಲಾ ಸಂಘಟನೆ, ಸಂಘ-ಸಂಸ್ಥೆಯನ್ನು ಅಭಿನಂದಿಸಲಾಯಿತು.