
ಜಕ್ರಿಬೆಟ್ಟು ಡ್ಯಾಂನಿಂದ ಕಾಣೆಯಾಗಿದ್ದ ಹೇಮಂತ್ ಶವವಾಗಿ ಬಜಾಲ್‌ನಲ್ಲಿ ಪತ್ತೆ
ಡ್ರೋನ್ ಮೂಲಕ ಹೇಮಂತ್ ಆಚಾರ್ಯ ಶವವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದು, ನದಿಯಿಂದ ಶವವನ್ನು ಮೇಲಕ್ಕೆತ್ತಿ ಮುಂದಿನ ಪ್ರಕ್ರಿಯೆಗೆ ಆಸ್ಪತ್ರೆಗೆ ಸಾಗಿಸಲಾಗಿದೆ. ಡ್ರೋನ್ ಮೂಲಕ ನದಿಯಲ್ಲಿ ಶವವನ್ನು ಪತ್ತೆ ಹಚ್ಚಬಹುದಾಗಿದೆ ಎಂಬುದು ಈ ಪ್ರಕರಣದಿಂದ ಸಾಭೀತಾಗಿದೆ ಎಂದು ಈಶ್ವರ ಮಲ್ಪೆ ತಿಳಿಸಿದ್ದು, ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು.
ಕಳೆದ ನಾಲ್ಕು ದಿನಗಳಿಂದ ನೇತ್ರಾವತಿ ನದಿಯಲ್ಲಿ ಹೇಮಂತ್‌ಗಾಗಿ ಹುಡುಕಾಟ ನಡೆಸಿದರೂ ಸುಳಿವು ಸಿಗದ ಹಿನ್ನಲೆಯಲ್ಲಿ ಮುಳುಗು ತಜ್ಞ ಈಶ್ವರ ಮಲ್ಪೆ ಅವರ ತಂಡ ಹಾಗೂ ಎನ್‌ಡಿಆರ್‌ಎಫ್ ತಂಡವನ್ನು ಕರೆಸಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸೇರಿ ಸ್ಥಳೀಯ ಈಜುಗಾರ ನಿಸಾರ್ ಅವರನ್ನು ಬಳಸಿ ಬಂಟ್ವಾಳದ ಜಕ್ರಿಬೆಟ್ಟುವಿನಿಂದ ತುಂಬೆ ಡ್ಯಾಮ್ ವರೆಗೂ ಶೋಧಕಾರ್ಯ ನಡೆಸಲಾಗಿತ್ತು.
ಆದರೂ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಮಧ್ಯಾಹ್ನದ ಬಳಿಕ ತುಂಬೆ ಡ್ಯಾಂನ ಕೆಳಭಾಗದಲ್ಲಿ ಮೂರು ತಂಡಗಳ ಜೊತೆಯಲ್ಲಿ ಡ್ರೋನ್ ಬಳಸಿ ಶೋಧ ಕಾರ್ಯ ಆರಂಭಿಸಲಾಗಿತ್ತು. ಸಂಜೆಯ ವೇಳೆಗೆ ಬಜಾಲ್‌ನಲ್ಲಿ ನೇತ್ರಾವತಿನದಿಯಲ್ಲಿ ನೀರಿನಲ್ಲಿ ಶವವೊಂದು ತೇಲುತ್ತಿರುವ ದೃಶ್ಯ ಡ್ರೋನ್‌ನ ಕಣ್ಣಿಗೆ ಬಿದ್ದಿದೆ. ಶವವನ್ನು ಮೇಲಕ್ಜೆತ್ತಿದ ಬಳಿಕ ಶವದ ಗುರುತು ಪತ್ತೆಹಚ್ಚಲಾಗಿದ್ದು, ಹೇಮಂತ್ ಶವವೆಂದು ಧೃಢಪಟ್ಟ ನಂತರ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಜು.27 ರಂದು ಹೇಮಂತ್ ಬಂಟ್ವಾಳದ ಜಕ್ರಿಬೆಟ್ಟುವಿನಲ್ಲಿ ನೇತ್ರಾವತಿ ನದಿಕಿನಾರೆಯಲ್ಲಿ ತನ್ನ ದ್ವಿಚಕ್ರವಾಹನ ಹಾಗೂ ಮೊಬೈಲ್ ತೊರೆದು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕೆಂಬ ಶಂಕೆ ವ್ಯಕ್ತವಾಗಿದೆ. ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆಯ ಆಧಾರದಲ್ಲಿ ಪೊಲೀಸರು ಅತನ ಹೆಸರು, ವಿಳಾಸವನ್ನು ಪತ್ತೆ ಹಚ್ಚಿ ನಂತರ ಸ್ಥಳೀಯ ಮುಳುಗು ತಜ್ಞರು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಪೊಲೀಸರ ತಂಡ ಹುಡುಕಾಟ ನಡೆಸಿತ್ತು.ಆದರೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಈ ಹಿನ್ನಲೆಯಲ್ಲಿ ಗುರುವಾರ ಕಡೇಶಿವಾಲಯ ಗ್ರಾಮ ಪಂಚಾಯತ್ ಸದಸ್ಯ ಸಂಪತ್ ಸುವರ್ಣ ಅವರು ವಿಶೇಷ ಆಸ್ಥೆ ವಹಿಸಿ ಮುಳುಗುತಜ್ಞ ಈಶ್ವರ ಮಲ್ಪೆ ಮತ್ತವರ ತಂಡ ಹಾಗೂ ಎನ್‌ಡಿಆರ್‌ಎಫ್ ತಂಡವನ್ನು ಕರೆಸಿಕೊಂಡು ಅಗ್ನಿಶಾಮಕ ದಳದ ಸಿಬ್ಬಂದಿಗಳು, ಸ್ಥಳೀಯ ಈಜುಗಾರ ನಿಸಾರ್ ಅವರೊಂದಿಗೆ ನೇತ್ರಾವತಿ ನದಿಯಲ್ಲಿ ಜಾಲಾಡಿತ್ತು.
ಕೊನೆಗೂ ಕಾಣೆಯಾಗಿದ್ದ ಹೇಮಂತ್ ಶವವಾಗಿ ಪತ್ತೆಯಾಗಿದ್ದಾನೆ. ತುಂಬೆ ಡ್ಯಾಂನ ಗೇಟ್ ತೆರವುಗೊಳಿಸಲಾಗಿದ್ದರಿಂದ ಬಿಜೆಪಿ ಪ್ರಮುಖರಾದ ಸುದರ್ಶನ ಬಜ, ಶಿವಪ್ರಸಾದ್ ಶೆಟ್ಟಿ, ರವೀಶ್ ಶೆಟ್ಟಿ ಕರ್ಕಳ, ಶಶಿಕಾಂತ್ ಶೆಟ್ಟಿ ಅರ್ಮುಡಿ, ಕಾರ್ತಿಕ್ ಬಲ್ಲಾಳ್, ಹರೀಶ್ ಶೆಟ್ಟಿ ಪಡು, ಸನತ್ ಅಳ್ವ, ಸಂಪತ್ ಸುವರ್ಣ, ಅವರು ಸ್ಥಳದಲ್ಲಿದ್ದು ಕಾರ್ಯಚರಣೆಗೆ ಸಹಕರಿಸಿದರು.