ದೇವಸ್ಯಮೂಡೂರು ಸ.ಹಿ.ಪ್ರಾ. ಶಾಲೆ ಶಿಕ್ಷಕಿ ವರ್ಗಾವಣೆ ವಿರೋಧಿಸಿ ಪೋಷಕರ ಪ್ರತಿಭಟನೆ

ದೇವಸ್ಯಮೂಡೂರು ಸ.ಹಿ.ಪ್ರಾ. ಶಾಲೆ ಶಿಕ್ಷಕಿ ವರ್ಗಾವಣೆ ವಿರೋಧಿಸಿ ಪೋಷಕರ ಪ್ರತಿಭಟನೆ


ಬಂಟ್ವಾಳ: ತಾಲೂಕಿನ ಮಣಿನಾಲ್ಕೂರು ಗ್ರಾಮದ ದೇವಸ್ಯಮೂಡೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯೋರ್ವರನ್ನು ಹೆಚ್ಚುವರಿ ಶಿಕ್ಷಕಿ ಎಂಬ ನೆಲೆಯಲ್ಲಿ ವರ್ಗಾವಣೆಗೊಳಿಸಲಾಗುತ್ತಿದೆ ಮತ್ತು ಇರುವ ನಾಲ್ಕು ಶಿಕ್ಷಕಿಯರ ಪೈಕಿ ಓರ್ವರನ್ನು ನಿಯೋಜನೆ ಮೇರೆಗೆ ಬೇರೆಡೆ ಕಳುಹಿಸಲಾದ ಕ್ರಮವನ್ನು ವಿರೋಧಿಸಿ  ಮಂಗಳವಾರ ಮಕ್ಕಳನ್ನು ಶಾಲೆಗೆ ಕಳುಹಿಸದ ಪೋಷಕರು ಶಾಲೆಗೆ ಆಗಮಿಸಿ ಪ್ರತಿಭಟನೆ ನಡೆಸಿದರು.


ಶಾಲೆಯಲ್ಲಿ ಒಟ್ಟು 95 ವಿದ್ಯಾರ್ಥಿಗಳಿದ್ದು, ನಾಲ್ಕು ಮಂದಿ ಶಿಕ್ಷಕಿಯರಿದ್ದಾರೆ. ಅದರಲ್ಲಿ ಓರ್ವ ಶಿಕ್ಷಕಿಯನ್ನು ನಿಯೋಜನೆ ಮೇರೆಗೆ ಕಳುಹಿಸಲಾಗಿದೆ. ಮುಖ್ಯ ಶಿಕ್ಷಕಿಯನ್ನು ಏಕಾಏಕಿ ವರ್ಗಾವಣೆಗೊಳಿಸುವುದರಿಂದ ಶಾಲೆಯ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ. ಸರಕಾರದ ಈ ನಡೆ ಸರಿಯಲ್ಲ ಎಂದು  ಪೋಷಕರು ಆರೋಪಿಸಿದ್ದಾರೆ.

ಕಳೆದ ವರ್ಷ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಸಂತ ಮುದಿಮಾರ ಮತ್ತಿತರರು ಶಾಲಾಭಿವೃದ್ಧಿಗೆ ಶಾರ್ದೂಲ ವೇಷ ಹಾಕಿ ನಿಧಿ ಸಂಗ್ರಹಣೆ ಮಾಡಿ ಗಮನ ಸೆಳೆದಿದ್ದರು.

ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಜಿ.ಪಂ. ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ಅವರು ಪೋಷಕರ ಅಹವಾಲನ್ನು ಆಲಿಸಿ ಸ್ಥಳದಲ್ಲಿದ್ದ ಬಂಟ್ವಾಳ ಪ್ರಭಾರ ಕ್ಷೇತ್ರಶಿಕ್ಷಣಾಧಿಕಾರಿ ನೋಣಯ್ಯ ನಾಯ್ಕ್ ಅವರ ಜತೆ ಮಾತುಕತೆ ನಡೆಸಿದರು. ಸರಕಾರದ ಆದೇಶದ ಮೇರೆಗೆ ಇಲಾಖೆಯ ಮೇಲಾಧಿಕಾರಿಗಳ ಸೂಚನೆಯಂತೆ ಕನ್ನಡ ಭಾಷಾ ಶಿಕ್ಷಕಿಯನ್ನು ಹೆಚ್ಚುವರಿ ಎಂದು ಪರಿಗಣಿಸಿ ವರ್ಗಾವಣೆಗೊಳಿಸಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದರು.

ಬಳಿಕ ದ.ಕ. ಜಿಲ್ಲಾ ಉಪನಿರ್ದೇಶಕರ ಜತೆ ದೂರವಾಣಿ ಮೂಲಕ ಮಾತನಾಡಿದ ತುಂಗಪ್ಪ ಬಂಗೇರ ಸಮಸ್ಯೆಯನ್ನು ವಿವರಿಸಿದರು. ಅವರು ಈ ಬಗ್ಗೆ ಪರಿಶೀಲನೆ ನಡೆಸುವುದಾಗಿಯೂ ಭರವಸೆ ನೀಡಿದ ಹಿನ್ನಲೆಯಲ್ಲಿ ಪೋಷಕರು ಪ್ರತಿಭಟನೆ ಹಿಂಪಡೆದರು. ಬಳಿಕ ಪೋಷಕರು ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಶಾಲಭಿವೃದ್ಧಿ ಸಮಿತಿ ಅಧ್ಯಕ್ಷ ವಸಂತ ಮುದಿಮಾರ ಹಾಗೂ ಸದಸ್ಯರು, ಸ್ಥಳೀಯ ಪ್ರಮುಖರಾದ ರಾಮಕೃಷ್ಣ ಮಯ್ಯ, ಸುದರ್ಶನ ಬಜ, ಮೋನಪ್ಪ ಪೂಜಾರಿ ಹಾಗೂ ಪೋಷಕರು ಉಪಸ್ಥಿತರಿದ್ದರು. ಸಿಆರ್‌ಪಿ ರವಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಪುಷ್ಪರಾಜ್ ಅವರು ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರೊಂದಿಗೆ ಚರ್ಚಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article