ರಾಜ್ಯ ಸರ್ಕಾರದಿಂದ ತಾರತಮ್ಯ ನೀತಿ: ಸತೀಶ್ ಕುಂಪಲ

ರಾಜ್ಯ ಸರ್ಕಾರದಿಂದ ತಾರತಮ್ಯ ನೀತಿ: ಸತೀಶ್ ಕುಂಪಲ


ಮಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಪೋಸ್ಟ್‌ಗಳು ಹರಿದಾಡುತ್ತಿದ್ದು, ಇದರ ವಿರುದ್ಧ ಪೊಲೀಸರು ಸ್ವಯಂ ಆಗಿ ಕೇಸು ದಾಖಲಿಸದೆ ಸುಮ್ಮನಾಗಿರುವುದು ಖೇದಕರ. ಇದು ಸರ್ಕಾರದ ಹಿಂದುಗಳ ಶ್ರದ್ಧಾಕೇಂದ್ರಗಳ ಮೇಲೆ ಪ್ರಹಾರ ಉಂಟಾದಾಗ ತಾರತಮ್ಯ ನೀತಿ ಅನುಸರಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಆರೋಪಿಸಿದ್ದಾರೆ.

ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ತಿಂಗಳ ಹಿಂದೆ ಈ ಜಿಲ್ಲೆಯಲ್ಲಿ ಅಹಿತಕರ ಘಟನೆಗಳು  ನಡೆದಾಗ ಹಿಂದುಗಳ ಮೇಲೂ ಪೊಲೀಸರು ಸ್ವಯಂ ಆಗಿ ಕೇಸು ದಾಖಲಿಸಿದ್ದಾರೆ. ಈಗ ಅದೇ ಹಿಂದುಗಳ ಧಾರ್ಮಿಕ ನಂಬಿಕೆಯ ದೇವಸ್ಥಾನಗಳ ವಿರುದ್ಧ  ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಹಾಕುತ್ತಿದ್ದರೂ ದ.ಕ. ಪೊಲೀಸರು ಯಾಕೆ ಸುಮ್ಮನೆ ಇದ್ದಾರೆ? ಈ ಹಿಂದೆ ಕೊರಗಜ್ಜನ ಕಟ್ಟೆಗೆ ಅವಮಾನ ಆದಾಗ  ಕೂಡ ಬಿಜೆಪಿ ಹೋರಾಟ ನಡೆಸಿತ್ತು. ಹಿಂದು ಧಾರ್ಮಿಕ ಕೇಂದ್ರಗಳಿಗೆ ತೊಂದರೆಯಾದಾಗ ಬಿಜೆಪಿ ನ್ಯಾಯಕ್ಕಾಗಿ ಹೋರಾಟ ನಡೆಸಲಿದೆ ಎಂದರು. 

ಅನಾಮಿಕನ ಮಂಪರು ಪರೀಕ್ಷೆ ನಡೆಸಿ:

ಧರ್ಮಸ್ಥಳ ಗ್ರಾಮದಲ್ಲಿ ಅನಾಥ ಶವಗಳನ್ನು ಹೂಳಲಾಗಿದೆ ಎಂದು ಆರೋಪಿಸಿ ಎಸ್‌ಐಟಿ ತನಿಖೆಗೆ ಕಾರಣರಾಗಿರುವ ಅನಾಮಿಕನ ಬಗ್ಗೆ ಶಂಕೆ ಇದೆ. ಆದ್ದರಿಂದ ಆತನ  ಮಂಪರು ಪರೀಕ್ಷೆ ನಡೆಸಬೇಕು. ಅನಾಥ ಶವಗಳ ವಿಚಾರಕ್ಕೆ ಸಂಬಂಧಿಸಿ ಎಸ್‌ಐಟಿ ತನಿಖೆಗೆ ಎಡಪಂಥೀಯರು ಒತ್ತಡ ಹಾಕಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವರೇ  ಬಹಿರಂಗವಾಗಿ ಹೇಳಿದ್ದಾರೆ. ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅವಹೇಳನ ಮಾಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಸದನದಲ್ಲಿ ಗೃಹ ಸಚಿವರು ಎಚ್ಚರಿಕೆ ನೀಡಿದ್ದಾರೆ. ಈ  ವಿದ್ಯಮಾನದ ಹಿಂದೆ ಎಡಪಂಥೀಯರ ಕೈವಾಡ ಬಗ್ಗೆ ಉಪ ಮುಖ್ಯಮಂತ್ರಿಗಳೂ ಮಾತನಾಡಿದ್ದಾರೆ. ಹೀಗಾಗಿ ಇಡೀ ಪ್ರಕರಣದ ಹಿಂದೆ ಎಡಪಂಥೀಯರ ಹುನ್ನಾರದ ಶಂಕೆ  ಬಲವಾಗಿದೆ. ಹಾಗಾಗಿ ಎಸ್‌ಐಟಿ ತನಿಖೆಯ ಬಗ್ಗೆ ಮಧ್ಯಂತರ ವರದಿ ಬಹಿರಂಗಪಡಿಸಬೇಕು. ಜನತೆಗೆ ಇರುವ ಗೊಂದಲವನ್ನು ನಿವಾರಿಸಬೇಕು ಎಂದು ಅವರು ಒತ್ತಾಯಿಸಿದರು.

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ಧ ಕೂಡ ಜಾಲತಾಣಗಳಲ್ಲಿ ಅವಹೇಳನ ಪೋಸ್ಟ್‌ಗಳು ಕಂಡುಬರುತ್ತಿದ್ದು, ಇದರ ವಿರುದ್ಧವೂ  ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಮುಖಂಡರಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ್, ಸಂಜಯ ಪ್ರಭು, ಅರುಣ್ ಶೇಟ್, ಸುಧಾಕರ್ ಅಡ್ಯಾರ್, ಮಹೇಶ್, ವಸಂತ ಪೂಜಾರಿ ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article