ಮೇಯಲು ಬಿಟ್ಟಿದ್ದ ಹಸು ಕಳವುಗೈದು ಅಕ್ರಮವಾಗಿ ವಧೆ, ಕುರುಹು ಪತ್ತೆ
ಬಂಟ್ವಾಳ: ಮೇಯಲು ಬಿಟ್ಟ ಸ್ಥಳದಿಂದ ದನವೊಂದನ್ನು ಕಳವುಗೈದು ನೇತ್ರಾವತಿ ನದಿತೀರದಲ್ಲಿ ಅಕ್ರಮವಾಗಿ ವಧೆಗೈದ ಘಟನೆಯೊಂದು ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ತುಂಬೆಯಲ್ಲಿ ನಡೆದಿದೆ.
ವಳವೂರು ನಡಿಬೆಟ್ಟು ನಿವಾಸಿ ಕಾರ್ತಿಕ್ ಎಂಬವರಿಗೆ ಸೇರಿದ ದನವೊಂದನ್ನು ಯಾರೋ ಕಳ್ಳರು ಕಳವುಗೈದು ಬಳಿಕ ವಧೆ ಮಾಡಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಗಸ್ಟ್ 15 ರಂದು ಸಂಜೆ ವೇಳೆ ಮೇಯುತ್ತಿದ್ದ ದನವನ್ನು ಕಳವು ಮಾಡಿ ಬಳಿಕ ವಧೆ ಮಾಡಲಾಗಿದೆ ಎಂದು ದನದ ಮಾಲೀಕರು ಶಂಕೆ ವ್ಯಕ್ತಪಡಿಸಿದ್ದಾರೆ.
ಮೂರು ಹಸುಗಳನ್ನು ಪ್ರತಿನಿತ್ಯ ಮೇಯಲು ಬಿಡುವ ಸ್ಥಳದಲ್ಲಿ ಬಿಟ್ಟಿದ್ದು, ಈ ಪೈಕಿ ಒಂದು ಹಸುವನ್ನು ಕಳವು ಮಾಡಲಾಗಿತ್ತು.ವಾಪಾಸ್ ತರಲು ಹೋದಾಗ ಮೂರು ದನಗಳ ಪೈಕಿ ಸುಮಾರು ೭ ವರ್ಷದ ಒಂದು ದನ ಕಾಣೆಯಾಗಿತ್ತು.
ಇದರ ಮೌಲ್ಯ ಸುಮಾರು 25 ಸಾವಿರ ರೂ.ಆಗಿದೆಯೆಂದು ಹೇಳಲಾಗಿದೆ. ಕಾಣೆಯಾದ ದನದ ಹುಡುಕಾಟ ನಡೆಸಿದಾಗ ನೇತ್ರಾವತಿ ನದಿಗೆ ಸಂಪರ್ಕಿಸುವ ತೋಡು ಬದಿಯಲ್ಲಿ ಪೊದೆಯಲ್ಲಿ ದನವನ್ನು ವಧೆ ಮಾಡಿರುವ ಕುರುಹುಗಳು ಪತ್ತೆಯಾಗಿವೆ. ಕಾಣೆಯಾದ ದನದ ಮೈಬಣ್ಣ ಹೋಲುವ ಚರ್ಮ ಸಹಿತ ಇತರೆ ಕಳೆಬರಹ ಅಲ್ಲಿ ದೊರೆತಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.