ಧರ್ಮಸ್ಥಳ ಪ್ರಕರಣ: 11,12ನೇ ಸ್ಥಳದಲ್ಲೂ ದೊರೆಯದ ಕಳೇಬರ ಅವಶೇಷ
11 ನೇ ಗುರುತು ಮಾಡಿದ ಸ್ಥಳದಲ್ಲಿ 11.30 ರಿಂದ 1.55 ರವರೆಗೆ ದೂರುದಾರನ ಜೊತೆ ಎಸ್.ಐ.ಟಿ ಅಧಿಕಾರಿಗಳು ಹಾಗೂ ಇತರ ಇಲಾಖೆಯ ಅಧಿಕಾರಿಗಳ ಜೊತೆ ಕಾರ್ಯಾಚರಣೆ ನಡೆಸಿದರೂ ಯಾವುದೇ ಅಸ್ಥಿಪಂಜರ ಪತ್ತೆಯಾಗಿಲ್ಲ
12 ನೇ ಗುರುತು ಮಾಡಿದ ಸ್ಥಳದಲ್ಲಿ 3.30 ರಿಂದ 4.35 ರವರೆಗೆ ಕಾರ್ಯಾಚರಣೆ ನಡೆಸಲಾಗಿ, ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿಲ್ಲ. ಸುಮಾರು 20 ಕಾರ್ಮಿಕರು ಶೋಧ ಕಾರ್ಯ ನಡೆಸಿದರು. ಅಗೆಯುವ ಯಂತ್ರವನ್ನೂ ಸ್ಥಳಕ್ಕೆ ತರಲಾಗಿತ್ತು.
ದೂರುದಾರ 13 ಜಾಗಗಳನ್ನು ತೋರಿಸಿದ್ದ. ಅವುಗಳಲ್ಲಿ 12 ಜಾಗಗಳಲ್ಲಿ ಮಂಗಳವಾರದವರೆಗೆ ಶೋಧ ಕಾರ್ಯ ನಡೆದಿದೆ ಸೋಮವಾರ ಆತ ತೋರಿಸಿದ್ದ 11ನೇ ಜಾಗದದಿಂದ ಸುಮಾರು 100 ಮೀ ದೂರದಲ್ಲಿ ನೆಲದ ಮೇಲೆಯೆ ಮೃತದೇಹದ ಅವಶೇಷ ಸಿಕ್ಕಿತ್ತು. ಜು.31ರಂದು ನೇತ್ರಾವದಿ ನದಿ ಪಕ್ಕದ ಕಾಡಿನಲ್ಲಿ ಆರನೇ ಜಾಗದಲ್ಲಿ ಅಗೆದಾಗ ಪುರುಷನ ಮೃತದೇಹದ ಅವಶೇಷಗಳು ಸಿಕ್ಕಿತ್ತು.
ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಹಾಗೂ ಎಸ್ಐಟಿಯ ಎಸ್ಪಿಗಳಾದ ಜಿತೇಂದ್ರ ಕುಮಾರ್ ದಯಾಮ ಹಾಗೂ ಇತರ ಅಧಿಕಾರಿಗಳು, ವಿಧಿವಿಜ್ಞಾನ ತಂಡದ ತಜ್ಞರಿದ್ದರು ಶೋಧ ಕಾರ್ಯದ ದೃಶ್ಯಗಳು ಹೊರಗಡೆ ಕಾಣಬಾರದೆಂದು ರಸ್ತೆ ಪಕ್ಕದಲ್ಲಿ ಉದ್ದಕ್ಕೂ ಹಸಿರು ಬಣ್ಣದ ಪರದೆ ಕಟ್ಟಲಾಗಿತ್ತು.
ಮೂರು ಕಳೇಬರ..
ಎಸ್ಐಟಿ ಕಾರ್ಯಾಚರಣೆಯ ವೇಳೆ ಕನಿಷ್ಠ ಮೂರು ಕಳೇಬರ ಪತ್ತೆಯಾಗಿದೆ ಅದರಲ್ಲಿ ಒಂದು ಕಳೇಬರ ಮಹಿಳೆಯದ್ದಾಗಿದೆ ಎಂದು, ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಾರೆ ಎನ್ನಲಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ಅವರ ತಾಯಿ ಸುಜಾತಾ ಭಟ್ ಅವರ ಪರ ವಕೀಲ ಮಂಜುನಾಥ್ ಎನ್ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಿನ್ನೆಯ ದಿನ ದೂರುದಾರ ಸಾಕ್ಷಿ ಗುರುತಿಸಿರುವ ಸ್ಥಳ ಸಂಖ್ಯೆ 11 ರ ಪ್ರದೇಶದಿಂದ ಸುಮಾರು 100 ಮೀಟರ್ ದೂರದ ಅರಣ್ಯ ಪ್ರದೇಶದಲ್ಲಿ, ಸುಮಾರು 100 ಅಡಿ ಎತ್ತರದ ಗುಡ್ಡದ ಮೇಲೆ, ಕನಿಷ್ಟ ಮೂರು ವ್ಯಕ್ತಿಗಳ ಕಳೇಬರಗಳು ಪತ್ತೆಯಾಗಿದ್ದು, ಅದರಲ್ಲಿನ ಒಂದು ಕಳೇಬರವು ಮಹಿಳೆಯದಾಗಿದೆ ಎಂದು ತಿಳಿದುಬಂದಿದೆ. ಸ್ಥಳದಲ್ಲಿಯೇ ಮಹಿಳೆಯ ಸೀರೆಯೂ ಪತ್ತೆಯಾಗಿದೆ ಎಂದಿದ್ದಾರೆ.
ಪ್ರಕರಣ ದಾಖಲು..
ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ಹಲವಾರು ಮೃತದೇಹಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ದೂರುದಾರ ಗುರುತಿಸಿದ ಆರನೇ ಸ್ಥಳದಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿರುವ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರನೇ ಗುರುತು ಸ್ಥಳದಲ್ಲಿ ಜು.31ರಂದು ಅಸ್ಥಿಪಂಜರ ಪತ್ತೆಯಾದ ಘಟನೆಗೆ ಸಂಬಂಧಿಸಿ ಎಸ್.ಐ.ಟಿ ತನಿಖಾಧಿಕಾರಿ ಐಪಿಎಸ್ ಜಿತೇಂದ್ರ ಕುಮಾರ್ ದಯಾಮ ಅವರು ಧರ್ಮಸ್ಥಳ ಪೊಲೀಸ್ ಠಾಣೆಗೆ ಆ.1ರಂದು ದೂರು ನೀಡಿದ್ದು, ಅದರಂತ ಯುಡಿಆರ್ ಪ್ರಕರಣ ದಾಖಲಾಗಿದೆ.
ಎಸ್ಐಟಿಗೆ ಹಸ್ತಾಂತರ..
ಅಸ್ಥಿಪಂಜರದ ಅವಶೇಷಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಎಸ್.ಐ.ಟಿ ಅಧಿಕಾರಿಗಳು ಕಳುಹಿಸಿದ್ದಾರೆ. ಈ ಮಧ್ಯೆ ದೂರುದಾರ ಗುರುತಿಸಿದ್ದ ೬ನೇ ಜಾಗದಲ್ಲಿ ಅಸ್ಥಿಪಂಜರ ಪತ್ತೆಯಾಗಿರುವ ಪ್ರಕರಣಕ್ಕೆ ಪ್ರಕರಣ ದಾಖಲಿಸಿಕೊಂಡಿರುವ ಧರ್ಮಸ್ಥಳ ಪೊಲೀಸರು ಹೆಚ್ಚಿನ ತನಿಖೆಗಾಗಿ ಅದನ್ನು ಎಸ್ಐಟಿಗೆ ಹಸ್ತಾಂತರಿಸಿದ್ದಾರೆ.