ಧರ್ಮಸ್ಥಳ ಪ್ರಕರಣ: ಕಲ್ಲೇರಿ ರಹಸ್ಯಕ್ಕೆ ಟ್ವಿಸ್ಟ್
ಧರ್ಮಸ್ಥಳ: ಕಳೆದ ಒಂದು ತಿಂಗಳಿನಿಂದ ಸದ್ದು ಮಾಡುತ್ತಿರುವ ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣದ ಕಲ್ಲೇರಿ ರಹಸ್ಯಕ್ಕೆ ಟ್ವಿಸ್ಟ್ ಸಿಕ್ಕಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಾಟ್ ನಂಬರ್ 15 ರಲ್ಲಿ ಅನಾಮಿಕ ದೂರುದಾರ ಶವ ಹೂತಿದ್ದನ್ನು ಸ್ಥಳೀಯರು ಕಂಡಿರುವುದಾಗಿ ಎಸ್‌ಐಟಿ ಅಧಿಕಾರಿಗಳು ಇಂದು ಸ್ಥಳೀಯರಲ್ಲಿ ನಡೆಸಿದ ವಿಚಾರಣೆಯಲ್ಲಿ ತಿಳಿಸಿದ್ದಾರೆ.
ಸ್ಪಾಟ್ ನಂಬರ್ 15ಕ್ಕೆ ಸಂಬಂಧಿಸಿದಂತೆ ಎಸ್‌ಐಟಿಯವರು ಓರ್ವನನ್ನು ಸಾಕ್ಷಿಯನ್ನಾಗಿ ವಿಚಾರಿಸಿದಾಗ ಧರ್ಮಸ್ಥಳ ಗ್ರಾಮದ ಬೋಳಿಯಾರ್ ಅರಣ್ಯ ಪ್ರದೇಶದಲ್ಲಿದ್ದ ಸ್ಪಾಟ್ ನಂಬರ್ ೧೫ಯಲ್ಲಿ ಹೂತಿರುವುದನ್ನು ನೋಡಿರುವುದಾಗಿ ತಿಳಿಸಿದ್ದಾರೆ.
ಆದರೆ ಪಾಯಿಂಟ್ ನಂಬರ್ 15 ಹಾಗೂ ಅಕ್ಕಪಕ್ಕದಲ್ಲಿ ಮತ್ತೆರಡು ಕಡೆ ಸ್ಥಳ ಪರಿಶೋಧನೆ ನಡೆಸಿದರೂ ಇಲ್ಲಿಯ ತನಕ ಯಾವುದೇ ಕಳೇಬರ ಪತ್ತೇಯಾಗಿರಲಿಲ್ಲ. ಆದರೆ 2010ರಲ್ಲಿ ಬಾಲಕಿಯ ಶವ ಹೂತಿದ್ದಾಗಿ ದೂರುದಾರ ಎಸ್‌ಐಟಿಗೆ ತಿಳಿಸಿದ್ದ. ಸ್ಥಳ ಪರಿಶೋಧನೆ ನಡೆಸಿದಾಗ ಕಳೇಬರ ಸಿಗದೇ ಇದ್ದಾಗ ಸ್ಥಳೀಯರನ್ನು ಕೇಳುವಂತೆ ಅನಾಮಿಕ ವಾದಿಸಿದ್ದ ಎನ್ನಲಾಗುತ್ತಿದೆ.
ಶವ ಹೂತ ನಂತರ ನೀರು ಕುಡಿಯಲು ಹಾಗೂ ಸಲಕರಣೆಗಳನ್ನು ತೊಳೆಯಲು ಸ್ಥಳೀಯ ಮನೆಗೆ ಹೋಗಿದ್ದಾಗಿ ದೂರುದಾರ ಹೇಳಿದ್ದು, ಸ್ಥಳೀಯರಿಗೆ ಶವ ಹೂತ ವಿಚಾರ ಗೊತ್ತಿದೆ ಅಂತ ಅನಾಮಿಕ ವಾದಿಸಿದ್ದ. ಇದು ಮುಸುಕುದಾರಿಯ ಮನವಿಯಂತೆ ವಿಚಾರಣೆ ಸಂದರ್ಭದಲ್ಲಿ ಸಿಕ್ಕಿದ ಮಹತ್ವದ ಸುಳಿವು ಆಗಿದ್ದು, ಅನಾಮಿಕ ಶವ ಹೂತಿದ್ದು ನಿಜ ಎಂದು ಸ್ಥಳಿಯರು ಒಪ್ಪಿಕೊಂಡಿದ್ದು, ಪೊಲೀಸರ ಸಮ್ಮುಖದಲ್ಲೆ ದಫನ ನಡೆದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಗುಂಡಿ ಅಗೆಯುವ ಕೆಲಸಕ್ಕೆ ತಾತ್ಕಾಲಿಕ ಬ್ರೇಕ್:
ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣದಲ್ಲಿ ಗುಂಡಿ ಅಗೆಯುವ ಕೆಲಸಕ್ಕೆ ತಾತ್ಕಾಲಿಕ ಬ್ರೇಕ್ ನೀಡಲಾಗಿದೆ. 17 ಸ್ಪಾಟ್‌ನಲ್ಲಿ ಗುಂಡಿ ತೆಗೆದ ಕಾರ್ಮಿಕರನ್ನು ಕರೆಸಿದ್ದ ಎಸ್‌ಐಟಿ, ಬೆಳ್ತಂಗಡಿ ಎಸ್‌ಐಟಿ ಪೊಲೀಸ್ ಠಾಣೆಯಲ್ಲಿ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದೆ.
ಗುಂಡಿ ತೆಗೆಯಲು ಬಂದವರನ್ನು ಎಸ್‌ಐಟಿ ಕಾರ್ಯಾಚರಣೆ ವಿಚಾರದಲ್ಲಿ ಸಹಿ ಮಾಡಿಸಿಕೊಂಡು ಕಳುಹಿಸಿದೆ. ಈ ಕಾರ್ಯಚರಣೆಗೆ ಧರ್ಮಸ್ಥಳ, ಬೆಳ್ತಂಗಡಿ ವೇಣೂರು ಭಾಗದ ಕಾರ್ಮಿಕರನ್ನು ಬಳಸಲಾಗಿದ್ದು, ಉತ್ತರ ಭಾರತದ ಕಾರ್ಮಿಕರು ಸೇರಿದಂತೆ ಸ್ಥಳೀಯರಿಂದ ಶೋಧ ಕಾರ್ಯ ನಡೆಸಲಾಗಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಇಂದು ಕೇಸ್ ಬಗ್ಗೆ ಮೀಟಿಂಗ್ ನಡೆಯಲಿದ್ದು, ಮೀಟಿಂಗಲ್ಲಿ ತೀರ್ಮಾನವಾದ ನಂತರ ಅಗತ್ಯವಿದ್ದರೆ ಮತ್ತೆ ಕಾರ್ಮಿಕರನ್ನು ಕರೆಸುತ್ತೇವೆ ಎಂಬುವುದಾಗಿ ಎಸ್‌ಐಟಿ ತಿಳಿಸಿದ್ದು, ಎಲ್ಲಾ ಕಾರ್ಮಿಕರಿಂದ ಸಹಿ ಪಡೆದು ಠಾಣೆಯಿಂದ ಕಳುಹಿಸಿದೆ.
ಧರ್ಮಸ್ಥಳ ಪ್ರವೇಶಿಸಿದ ನೂರಾರು ಕಾರುಗಳು:
ಧರ್ಮಸ್ಥಳ ಕ್ಷೇತ್ರಕ್ಕೆ ಬಿಜೆಪಿ ನೈತಿಕ ಬೆಂಬಲ ಸೂಚಿಸಿದ್ದು, ಆದುದರಿಂದ ಇಂದು ಧರ್ಮಸ್ಥಳಕ್ಕೆ ನೂರಾರು ಕಾರುಗಳು ಪ್ರವೇಶಿಸಿವೆ. ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ನೇತೃತ್ವದಲ್ಲಿ ಈ ಕಾರುಗಳು ಬರುತ್ತಿವೆ. ಧರ್ಮಸ್ಥಳದ ಜೊತೆ ನಾವಿದ್ದೇವೆಂದು ನೈತಿಕ ಬೆಂಬಲ ಘೋಷಿಸಿದ್ದ ಎಸ್.ಆರ್. ವಿಶ್ವನಾಥ್ ಅವರ ನೇತೃತ್ವದ ತಂದದ ಕಾರುಗಳು ಇಂದು ಧರ್ಮಸ್ಥಳ ದೇಗುಲದ ದ್ವಾರ ಪ್ರವೇಶ ಮಾಡಿದ್ದು, ಆದುದರಿಂದ ಮುನ್ನೆಚ್ಚರ ಕ್ರಮವಾಗಿ ಧರ್ಮಸ್ಥಳದ ದೇಗುಲದ ದ್ವಾರ ಬಾಗಿಲಿನಲ್ಲಿ ಬಿಗಿ ಪೊಲೀಸ್ ಭದ್ರತೆ ಕಂಡುಬಂತು.
ಆರ್‌ಟಿಐನಿಂದ ಮಾಹಿತಿ:
ಧರ್ಮಸ್ಥಳ ಆಸುಪಾಸಿನಲ್ಲಿ 1987ರಿಂದ 2025ರ ಅವಧಿಯಲ್ಲಿ 279 ಅನಾಥ ಶವಗಳನ್ನು ಹೂಡಲಾಗಿದೆ ಎಂಬ ಮಾಹಿತಿ ಆರ್‌ಟಿಐ ಮೂಲಕ ಬಹಿರಂಗವಾಗಿದೆ.
ಇವುಗಳಲ್ಲಿ ಹೆಚ್ಚಿನವು ಆತ್ಮಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದೆ ಎಂದು ಆರ್‌ಟಿಐ ಅರ್ಜಿಗೆ ಧರ್ಮಸ್ಥಳ ಗ್ರಾಮ ಪಂಚಾಯಿತಿಯ ಸಾರ್ವಜನಿಕ ಮಾಹಿತಿ ಅಧಿಕಾರಿ ನೀಡಿದ ಉತ್ತರದಿಂದ ತಿಳಿದು ಬಂದಿದೆ. ಮತ್ತೊಂದೆಡೆ ಅನಾಮಿಕನ ದೂರಿನ ಹಿನ್ನೆಲೆಯಲ್ಲಿ ಎಸ್‌ಐಟಿ ತನಿಖೆ ತೀವ್ರಗೊಂಡಿದೆ.