ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿ ಜಿಲ್ಲಾ ಮಟ್ಟದ ಕೃಷ್ಣ ವೇಷ ಸ್ಪರ್ಧೆ ‘ಕೃಷ್ಣಮಯ-2025’

ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿ ಜಿಲ್ಲಾ ಮಟ್ಟದ ಕೃಷ್ಣ ವೇಷ ಸ್ಪರ್ಧೆ ‘ಕೃಷ್ಣಮಯ-2025’


ಮಂಗಳೂರು: ಶಕ್ತಿನಗರದಲ್ಲಿರುವ ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿರುವ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಕೃಷ್ಣ ವೇಷ ಸ್ಪರ್ಧೆ ‘ಕೃಷ್ಣಮಯ-2025’ನ್ನು ಹೊಸದಿಂಗಂತ ದಿನ ಪತ್ರಿಕೆ ಮಂಗಳೂರು ಇದರ ಸ್ಥಳೀಯ ಸಂಪಾದಕ ಪ್ರಕಾಶ್ ಇಳಂತಿಲ ಅವರು ಕೃಷ್ಣವೇಶಧಾರಿ ಮಕ್ಕಳೊಂದಿಗೆ ಬೆಣ್ಣೆ ತುಂಬಿದ ಮಡಕೆಯನ್ನು ಒಡೆಯುವುದರ ಮೂಲಕ ಉದ್ಘಾಟಿಸಿದರು.


ಬಳಿಕ ಅವರು ಮಾತನಾಡಿ, ‘ಶ್ರೀ ಕೃಷ್ಣನದು ಪೂರ್ಣಾವತಾರ, ಅವನ ವೇಷವನ್ನು ಮಕ್ಕಳಿಗೆ ತೊಡಿಸುವುದೆಂದರೆ ನಮ್ಮ ಮನಸ್ಸನ್ನು ಮಗುವಿನ ಮನಸ್ಸನ್ನಾಗಿಸುವುದು ಎಂದರ್ಥ. ಇದರ ಮೂಲಕ ನಾವು ಜೀವನದಲ್ಲಿ ಆನಂದವನ್ನು ಪಡೆಯಬಹುದು. ಕೃಷ್ಣ ಪ್ರಜ್ಞೆಯನ್ನು ರೂಢಿಸಿಕೊಳ್ಳಬೇಕು. ಸಹಸ್ರ ವರ್ಷಗಳ ಇತಿಹಾಸ ಇರುವ ಸಂಸ್ಕಾರ ಸಂಸ್ಕೃತಿ ನಮ್ಮದು. ಅದನ್ನು ನಾವು ಮರೆತು ಗುಲಾಮರಾಗಿ ಬದುಕುತ್ತಿದ್ದೇವೆ. ಸುಕೃತಿಯನ್ನು ಮರೆತು ವಿಕೃತಿಯನ್ನು ಮೆರೆಯುತ್ತಿದ್ದೇವೆ. ವಿಕೃತಿಯನ್ನು ಬಿಟ್ಟು ಸುಕೃತಿಯನ್ನು ಪಡೆಯಬೇಕಾದರೆ ಕೃಷ್ಣನನ್ನು ನಾವು ಆರಾಧಿಸಬೇಕಾಗಿದೆ ಎಂದು ಹೇಳಿದರು.


ಇದು ಕೇವಲ ಕೃಷ್ಣ ವೇಷ ಸ್ಪರ್ಧೆ ಮಾತ್ರ ಅಲ್ಲ. ನಮ್ಮ ವಾತಾವರಣವನ್ನು ಕೃಷ್ಣಮಯವಾನ್ನಾಗಿಸುವ ಸಂದರ್ಭ. ನಾವು ಮತ್ತೆ ನಮ್ಮ ಸನಾತನ ಸಂಸ್ಕೃತಿಯ ಬೇರಿಗೆ ಹೋಗಬೇಕಾಗಿದೆ. ಜಗತ್ತಿಗೆ ಮಂಗಳವನ್ನು ಉಂಟುಮಾಡಲು ನಾವು ಕೃಷ್ಣ ಪ್ರಜ್ಞೆಯನ್ನು ರೂಢಿಸಕೊಳ್ಳಬೇಕು. ನಾವು ನಮ್ಮ ಇತಿಹಾಸದಿಂದ ಪಾಠ ಕಲಿಯುವುದರೊಂದಿಗೆ ಇತಿಹಾಸವನ್ನು ನಿರ್ಮಾಣ ಮಾಡಲು ಸಾಧ್ಯ. ನಮ್ಮ ಸಂಸ್ಕೃತಿಯ ಮೂಲವನ್ನು ಮತ್ತೆ ಪ್ರಜ್ಞಾಪೂರ್ವಕವಾಗಿ ಪಡೆದುಕೊಂಡು ತಾಯಿ ಭಾರತಿಯನ್ನು ಜಗನ್ಮಾತೆಯನ್ನಾಗಿಸಬೇಕಾಗಿದೆ. ಈ ಶಕ್ತಿ ವಿದ್ಯಾ ದೇಗುಲ ಸಕಲ ಮೂಲ ಸೌಕರ್ಯಗಳನ್ನು ಹೊಂದಿಕೊಂಡು, ಮಕ್ಕಳಿಗೆ ಸಂಸ್ಕೃತಿಯ ಪ್ರಜ್ಞೆಯನ್ನು ನೀಡುವ ಶಿಕ್ಷಣವನ್ನು ನೀಡುತ್ತಿದೆ ಹಾಗಾಗಿ ಕೆ.ಸಿ. ನಾಕ್ ಅವರಿಗೆ ಅಭಿನಂದನೆಗಳು. ಎಲ್ಲರಿಗೂ ಶ್ರೀ ಕೃಷ್ಣನು ಒಳ್ಳೆಯದನ್ನು ಮಾಡಲಿ ಎಂದು ಶುಭ ಹಾರೈಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಕೆ.ಸಿ. ನಾಕ್ ಮಾತನಾಡಿ, ‘ಈ ಕೃಷ್ಣಮಯವು ನಮ್ಮ ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ನಡೆಯುವ ಅತ್ಯಮೂಲ್ಯವಾದ ಕಾರ್ಯಕ್ರಮವಾಗಿದೆ. ಈ ಶಾಲೆ ನಿರ್ಮಾಣವಾದದ್ದೇ ಆ ಶ್ರೀ ಕೃಷ್ಣನ ಪ್ರೇರಣೆಯಿಂದ. ಈ ಕಾರಣದಿಂದ ಜಿಲ್ಲಾ ಮಟ್ಟದ ಸ್ಪರ್ಧೆ ನನಗೆ ವಿಶೇವಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅತೀ ಹೆಚ್ಚು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಶಾಲಾ ಶಿಕ್ಷಕರು ಎಲ್ಲರು ಕೂಡಿಕೊಂಡು ಇದರ ಯಶಸ್ಸಿಗೆ ಶ್ರಮ ಪಟ್ಟಿದ್ದಾರೆ. ಭಕ್ತಿಯಿಂದ ದುಡಿದರೆ ಮಾಡುವ ಕೆಲಸದಲ್ಲಿ ಯಶಸ್ಸು ಸಿಗುತ್ತೆ ಎನ್ನುವುದಕೆ 7 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಜಿಲ್ಲಾ ಮಟ್ಟದ ಕೃಷ್ಣ ವೇಷ ಸ್ಪರ್ಧೆ ಉತ್ತಮವಾದ ಉದಾಹರಣೆ ಎಂದರು.


ಇದು ಈಗ ಆರಂಭ ಇನ್ನು ಮುಂದಿನ ದಿನಗಳಲ್ಲಿ ಮಕ್ಕಳು ದೇಶದ ಸಂಪತ್ತಾಗಿಸಲು ಸರ್ವ ಪ್ರಯತ್ನವನ್ನು ನಾವು ಮಾಡುತ್ತೇವೆ. ಮುಂದಿನ ವರ್ಷಕ್ಕೆ ಇನ್ನು ಅಧಿಕ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸುವಂತಾಗಲಿ ಈ ಸ್ಪರ್ಧಾ ಕೂಟದಲ್ಲಿ ಅವಕಾಶವನ್ನು ಪಡೆದುಕೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು.


ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್ ಮೂರ್ತಿ ಹೆಚ್., ಉಪ ಪ್ರಾಂಶುಪಾಲ ನಟೇಶ್ ಆಳ್ವ ಉಪಸ್ಥಿತರಿದ್ದರು. ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್ ಸ್ವಾಗತಿಸಿ, ಶಿಕ್ಷಕಿ ಪ್ರೇಮಲಾತಾ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.






Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article