ಚಿನ್ನದ ವ್ಯಾಪಾರಿಯ ಅಪಹರಣ: 350ಗ್ರಾಂ. ಚಿನ್ನ ದರೋಡೆ
ಮಂಗಳೂರು: ಕೇರಳದ ಚಿನ್ನದ ಮಳಿಗೆಯಿರುವ ವ್ಯಾಪಾರಿಯೊಬ್ಬರನ್ನು ತಂಡವೊಂದು ಮಂಗಳೂರಿನಿಂದ ಕಾರಿನಲ್ಲಿ ಅಪಹರಣಗೈದು ಸುಮಾರು 350ಗ್ರಾಂ ಚಿನ್ನವನ್ನು ದರೋಡೆಗೈದ ಘಟನೆ ಆ.13ರಂದು ನಡೆದಿದೆ.
ಕೇರಳ ನಿವಾಸಿ, ಚಿನ್ನದ ವ್ಯಾಪಾರಿ ಶ್ರೀಹರಿ ದರೋಡೆಗೊಳಗಾದವರು.
ಪ್ರಕರಣ ವಿವರ:
ಶ್ರೀಹರಿಯವರು ಆ.13ರಂದು ಬೆಳಗ್ಗೆ 7ಗಂಟೆ ಸುಮಾರಿಗೆ 350ಗ್ರಾಂ ಚಿನ್ನದ ಗಟ್ಟಿಯನ್ನು ಹಿಡಿದುಕೊಂಡು ರೈಲಿನ ಮೂಲಕ ಕೇರಳದಿಂದ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ್ದಾರೆ. ರೈಲು ನಿಲ್ದಾಣದಿಂದ ಹೊರಬಂದು ಕೈರಾಲಿ ಹೊಟೇಲ್ ಬಳಿ ಆಟೋವೊಂದಕ್ಕೆ ಕಾಯುತ್ತಿದ್ದಾಗ 24ಬಿಹೆಚ್8102ಜಿ ನಂಬ ರ್ನ ಇನೋವಾ ಕಾರಿನಲ್ಲಿ ಆಗಮಿಸಿದ ತಂಡ ಶ್ರೀ ಹರಿ ಅವರ ಬಳಿ ‘ನಾವು ಕಸ್ಟಮ್ಸ್ ಅಧಿಕಾರಿಗಳು, ನಿಮ್ಮನ್ನು ಪರಿಶೀಲನೆ ಮಾಡಲು ಬಂದಿದ್ದೇವೆ. ಕಾರಿನಲ್ಲಿ ಕುಳಿತುಕೊಳ್ಳಿಱ ಎಂದು ಗದರಿಸಿದ್ದಾರೆ.
ಇದಕ್ಕೆ ಚಿನ್ನದ ವ್ಯಾಪಾರಿ ಒಪ್ಪದಿದ್ದಾಗ ಬಲವಂತವಾಗಿ ಕಾರಿನಲ್ಲಿ ಕುಳ್ಳಿರಿಸಿ ಕರೆದೊಯ್ದಿದ್ದಾರೆ. ಬಳಿಕ ಉಡುಪಿ ಮೂಲಕ ಕುಮಟಾ ಶಿರಸಿಗೆ ಕರೆದುಕೊಂಡು ಹೋಗಿ ಸುಮಾರು 35ಲಕ್ಷ ರೂ. ಮೌಲ್ಯದ 350ಗ್ರಾಂ ಚಿನ್ನದ ಗಟ್ಟಿಯನ್ನು ದರೋಡೆ ಮಾಡಿದ್ದಾರೆ. ಇದಾದ ಬಳಿಕ ಚಿನ್ನದ ವ್ಯಾಪಾರಿಯನ್ನು ಶಿರಸಿಯಲ್ಲೇ ರಸ್ತೆಯ ಅಂತ್ರವಳ್ಳಿ ಎಂಬ ಊರಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಘಟನೆಯಿಂದ ಆಘಾತಕ್ಕೊಳಗಾದ ಚಿನ್ನದ ವ್ಯಾಪಾರಿ ಬಳಿಕ ಮಂಗಳೂರಿಗೆ ಬಂದು ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ.
ಬಲವಾದ ಕ್ಲೂ ಲಭ್ಯ:
ಚಿನ್ನದ ವ್ಯಾಪಾರಿ ದರೋಡೆಗೆ ಸಂಬಂಧಿಸಿ ತನಿಖೆ ಕೈಗೆತ್ತಿಕೊಂಡ ಪಾಂಡೇಶ್ವರ ಪೊಲೀಸರಿಗೆ ದರೋಡೆಕೋರರ ಬಗ್ಗೆ ಬಲವಾದ ಸಾಕ್ಷ್ಯ ಲಭಿಸಿದ್ದು, ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವ ಸಾಧ್ಯತೆಯಿದೆ.
ಪರಿಚಿತರಿಂದಲೇ ಕೃತ್ಯ:
ಶ್ರೀಹರಿ ಅವರ ವ್ಯವಹಾರ ಹಾಗೂ ಚಲನಚಲನದ ಬಗ್ಗೆ ಗೊತ್ತಿರುವ ವ್ಯಕ್ತಿಗಳೇ ಈ ದರೋಡೆ ಸಂಚಿನ ಹಿಂದಿರುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಪೊಲೀಸ್ ತನಿಖೆ ಮುಂದುವರಿದಿದೆ.