
ಕ್ರೈಸ್ತ ಸನ್ಯಾಸಿಗಳ ಬಂಧನ: ಆ.4ರಂದು ಪ್ರತಿಭಟನೆ
ಮಂಗಳೂರು: ಛತ್ತೀಸ್‌ಗಢದಲ್ಲಿ ಕೇರಳದ ಸಿಸ್ಟರ್ ಮೇರಿ ಇಮ್ಯಾಕ್ಯುಲೇಟ್ ಅಸ್ಸಿಸಿಯ ಸದಸ್ಯರಾದ ಸಿ. ವಂದನಾ ಫ್ರಿನ್ಸಿಸ್ ಮತ್ತು ಅಂಗಮಾಲಿಯ ಸಿಸ್ಟರ್ ಪ್ರೀತಿ ಮೇರಿ ಎಂಬವರನ್ನು ಹಾಗೂ ಇತರ ಮೂವರು ಮಹಿಳೆಯರನ್ನು ಬಂಧಿಸಲಾಗಿದ್ದು, ಅವರ ಬಿಡುಗಡೆಗೆ ಆಗ್ರಹಿಸಿ ಕ್ಯಾಥೋಲಿಕ್ ಸಭಾ ಮಂಗಳೂರು ಪ್ರದೇಶ ನೇತೃತ್ವದಲ್ಲಿ ಆ. 4ರಂದು ಸಂಜೆ 4ಕ್ಕೆ ನಗರದ ಮಿನಿ ವಿಧಾನ ಸೌಧದ ಎದುರು ಪ್ರತಿಭಟನಾ ಸಭೆ ನಡೆಯಲಿದೆ ಎಂದು ಕ್ಯಾಥೋಲಿಕ್ ಸಭಾ ಮಂಗಳೂರು ಪ್ರದೇಶ ಕೇಂದ್ರೀಯ ಅಧ್ಯಕ್ಷ ಸಂತೋಷ್ ಡಿಸೋಜ ತಿಳಿಸಿದರು.
ಮನೆ ಕೆಲಸಕ್ಕಾಗಿ ಮಹಿಳೆಯರನ್ನು ಕರೆದೊಯ್ಯುತ್ತಿದ್ದ ವೇಳೆ ಮತಾಂತರ ಆರೋಪ ಹೊರಿಸಿ ಬಂಧಿಸಿರುವುದು ಖಂಡನೀಯ. ಬಂಧಿತರನ್ನು ತಕ್ಷಣ ಬಿಡುಗಡೆ ಮಾಡಬೇಕು. ಹಾಗೂ ಅವರನ್ನು ಬಂಧಿಸಲು ಕಾರಣರಾದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಆಯೋಜಿಸಲಾಗಿದೆ. ವಿವಿಧ ಸಂಸ್ಥೆಗಳ ಧರ್ಮಗುರುಗಳು, ಗಣ್ಯರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಇಂತಹ ಸುಳ್ಳು ಆರೋಪ ಹೊರಿಸಿ ದೌರ್ಜನ್ಯ ನಡೆಸುವಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, 2024-25ರಲ್ಲಿ ಈ ರೀತಿಯಾಗಿ 834 ಮಂದಿ ಮೇಲೆ ದೌರ್ಜನ್ಯ ಎಸಗಲಾಗಿದೆ. 2014ರ ನಂತರ ಇಂತಹ ಪ್ರಕರಣಗಳು ಹೆಚ್ಚಾಗುತ್ತಾ ಸಾಗಿವೆ ಎಂದುಸಾರ್ವಜನಿಕ ಸಂಪರ್ಕ ಅಽಕಾರಿ ಪೌಲ್ ರೋಲಿ ಡಿಕೋಸ್ತ ಆರೋಪಿಸಿದರು.
ಪ್ರಧಾನ ಕಾರ್ಯದರ್ಶಿ ವಿಲ್ಮಾ ಮೊಂತೆರೊ, ಕೋಶಾಧಿಕಾರಿ ಫ್ರಾನ್ಸಿಸ್ ಮೊಂತೆರೊ, ನಿಕಟಪೂವ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಉಪಸ್ಥಿತರಿದ್ದರು.