‘ಅವಶ್ಯಕತೆಗೆ ತಕ್ಕಂತೆ ಧ್ವನಿವರ್ಧಕ ಬಳಕೆಗೆ ಅವಕಾಶ ನೀಡಿ’
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭ ಕಾನೂನು, ನಿಯಮಗಳ ನೆಪವೊಡ್ಡಿ ಕಾರ್ಯಕ್ರಮಗಳಲ್ಲಿ ಧ್ವನಿವರ್ಧಕ ಬಳಕೆಗೆ ಪೊಲೀಸರು ಅಡ್ಡಿ ಉಂಟುಮಾಡಿದ್ದಾರೆ. ಸಾರ್ವಜನಿಕ ಕಾರ್ಯಕ್ರಮಗಳಿಗೆ ಸೇರುವ ಜನಸಂಖ್ಯೆ, ಸ್ಥಳ ಹಾಗೂ ಕಾರ್ಯಕ್ರಮದ ಅವಶ್ಯಕತೆಗೆ ತಕ್ಕಂತೆ ಧ್ವನಿವರ್ಧಕ ಬಳಕೆಗೆ ಅವಕಾಶ ನೀಡದಿದ್ದರೆ ಆ. 21ರಿಂದ ಸಾರ್ವಜನಿಕ ಕಾರ್ಯಕ್ರಮಗಳಿಗೆ ಧ್ವನಿವರ್ಧಕ ಒದಗಿಸುವುದಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಸಂಘದ ಅಧ್ಯಕ್ಷ ಧನರಾಜ್ ಶೆಟ್ಟಿ ಹೇಳಿದರು.
ಇತ್ತೀಚೆಗೆ ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭ ನಗರದ ಉರ್ವಸ್ಟೋರ್, ಬಂಟ್ವಾಳ ಸಹಿತ ಹಲವೆಡೆ ಡಿಜೆ ಬಳಕೆ ಆರೋಪದಲ್ಲಿ ಕಾರ್ಯಕ್ರಮಗಳಲ್ಲಿ ಧ್ವನಿವರ್ಧಕ ಬಳಕೆಗೆ ಪೊಲೀಸರು ತಡೆಯುಂಟುಮಾಡಿದ್ದಾರೆ. ಕೆಲವೆಡೆ ಧ್ವನಿವರ್ಧಕ ವ್ಯವಸ್ಥೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಡಿಜೆ ಬಳಕೆ ಬಗೆಗಿನ ಗೊಂದಲದಿಂದ ಸಮಸ್ಯೆ ಉಂಟಾಗಿದೆ. ಇದರಿಂದಾಗಿ ನಮಗೆ ಹಾಗೂ ಕಾರ್ಯಕ್ರಮ ಆಯೋಜಕರಿಗೆ, ಕಲಾವಿದರಿಗೆ ತೊಂದರೆಯಾಗಿದೆ. ಇನ್ನು ಮುಂದೆ ದೀಪಾಲಂಕಾರ ಮಾತ್ರ ಮಾಡುತ್ತೇವೆ. ಧ್ವನಿವರ್ಧಕ ಬಳಕೆಗೆ ಅವಕಾಶ ನೀಡುವ ಬಗ್ಗೆ ಪೊಲೀಸ್ ಇಲಾಖೆ ಸ್ಪಷ್ಟವಾಗಿ ಲಿಖಿತವಾಗಿ ನಿಯಮಗಳನ್ನು ತಿಳಿಸಿದ ಬಳಿಕವೇ ಸಾರ್ವಜನಿಕ ಕಾರ್ಯಕ್ರಮಗಳಿಗೆ ಧ್ವನಿವರ್ಧಕ ಒದಗಿಸುತ್ತೇವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಸಂಘದಲ್ಲಿ 1300ಕ್ಕಿಂತ ಅಽಕ ಮಂದಿ ಸದಸ್ಯರಿದ್ದು, ಎಲ್ಲರೂ ಧ್ವನಿವರ್ಧಕ ಮತ್ತು ದೀಪಾಲಂಕಾರ ಉದ್ಯೋಗವನ್ನು ನಂಬಿ ಬದುಕುತ್ತಿದ್ದಾರೆ. ಇದರೊಂದಿಗೆ 6000ಕ್ಕೂ ಅಽಕ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಧ್ವನಿವರ್ಧಕ ಬಳಕೆಗೆ ಪೊಲೀಸ್ ಇಲಾಖೆಯ ತಡೆಯಿಂದ ಇವರೆಲ್ಲರಿಗೂ ತೊಂದರೆಯಾಗಿದೆ. ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ದೊಡ್ಡ ಸಂಖ್ಯೆಯ ಕಲಾವಿದರಿದ್ದು, ಅವರ ಪ್ರತಿಭಾ ಪ್ರದರ್ಶನಕ್ಕೆ, ಕಲಾವೃತ್ತಿಗೆ ಪೂರಕವಾಗಿ ಧ್ವನಿವರ್ಧಕ ಒದಗಿಸಲು ಅವಕಾಶ ಇಲ್ಲದ ಕಾರಣ ಕಲಾವಿದರೂ ಕಾರ್ಯಕ್ರಮ ನೀಡಲಾಗದು. ಅವರ ಆದಾಯಕ್ಕೂ ತಡೆಯಾಗಲಿದೆ ಎಂದರು.
ಸಂಘದ ಸ್ಥಾಪಕಾಧ್ಯಕ್ಷ ಅಶೋಕ್‌ಕುಮಾರ್ ಬಿ. ಮಾತನಾಡಿ, ಕಾರ್ಯಕ್ರಮಗಳಿಗೆ ಸಮಯ ನಿಗದಿ ಮಾಡುವುದನ್ನು ನಾವು ಒಪ್ಪಿಕೊಳ್ಳುತ್ತೇವೆ. ನಿರ್ದಿಷ್ಟ ಜನರಿಗೆ ಬೇಕಾದಷ್ಟು ಸೌಂಡ್ ಸಿಸ್ಟಮ್ ಅಳವಡಿಕೆಗೆ ಅವಕಾಶ ನೀಡಬೇಕು ಎಂದರು.
ಸಂಘದ ಜಿಲ್ಲಾ ಗೌರವಾಧ್ಯಕ್ಷ ರಾಜಶೇಖರ ಶೆಟ್ಟಿ ವಿಟ್ಲ, ಶಾಮಿಯಾನ ಮಾಲಕರ ಸಂಘದ ಜಿಲ್ಲಾಧ್ಯಕ್ಷ ಬಾಬು ಕೆ. ವಿಟ್ಲ, ಸುದರ್ಶನ್, ನಿಶಿತ್ ಪೂಜಾರಿ, ದೇವರಾಜ್ ಉಪಸ್ಥಿತರಿದ್ದರು.