ಮಸಾಜ್ ಹೆಸರಿನಲ್ಲಿ ಅನೈತಿಕ ದಂಧೆ: ಕೇರಳ ಮಾದರಿ ಕಾನೂನಿಗೆ ಆಗ್ರಹ
ಮಂಗಳೂರು: ಸೆಲೂನ್, ಯುನಿಸೆಕ್ಸ್ ಬ್ಯೂಟಿಪಾರ್ಲರ್, ಆಯುರ್ವೇದಿಕ್ ಸೆಂಟರ್ ಸೇರಿದಂತೆ ಕೆಲವೆಡೆ ಮಸಾಜ್ ಹೆಸರಿನಲ್ಲಿ ನಡೆಯುವ ಅನೈತಿಕ ದಂಧೆಗೆ ಕಡಿವಾಣ ಹಾಕಲು ರಾಜ್ಯದಲ್ಲಿ ಕೇರಳ ಮಾದರಿಯ ಕಾನೂನು ಜಾರಿಗೊಳಿಸಬೇಕು ಎಂದು ವಕೀಲ ಮನೋರಾಜ್ ರಾಜೀವ ಆಗ್ರಹಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ, ಕಾನೂನು ಸಚಿವರು ಹಾಗೂ ಪ್ರತಿಪಕ್ಷ ನಾಯಕರಿಗೆ ಜಿಲ್ಲಾಽಕಾರಿ ಮೂಲಕ ಮನವಿ ಸಲ್ಲಿಸುತ್ತಿದ್ದು, ಜನಪ್ರತಿನಿಽಗಳು ಅಽವೇಶನದಲ್ಲಿ ಈ ಬಗ್ಗೆ ಸೂಕ್ತ ಕ್ರಮ ವಹಿಸಿ ಕಾನೂನು ಜಾರಿಗೊಳಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಯುನಿಸೆಕ್ಸ್ ಬ್ಯೂಟಿ ಪಾರ್ಲರ್‌ಗಳಲ್ಲಿ ಮಹಿಳೆಯರಿಂದ ಪುರುಷರಿಗೆ ಮಸಾಜ್ ನೆಪದಲ್ಲಿ ಅನೈತಿಕ ದಂಧೆ ನಡೆಸಲಾಗುತ್ತಿರುವ ದೂರುಗಳಿವೆ. ಆಯುರ್ವೇದಿಕ್ ಸೆಂಟರ್‌ಗಳಲ್ಲಿಯೂ ಯಾವ ರೀತಿಯಲ್ಲಿ ಮಸಾಜ್ ಮಾಡಬೇಕು, ಅನುಸರಿಸಬೇಕಾದ ನಿಯಮಗಳು, ವ್ಯವಸ್ಥೆ ಹೇಗಿರಬೇಕು ಎಂಬ ಬಗ್ಗೆ ಯಾವುದೇ ಕಾನೂನು ಕೇರಳ ರಾಜ್ಯದಲ್ಲಿ ಹೊರತುಪಡಿಸಿ ದೇಶದ ಎಲ್ಲಿಯೂ ಇಲ್ಲ. ಹಾಗಾಗಿ ಕೆಲವೊಂದು ಯುನಿಸೆಕ್ಸ್ ಬ್ಯೂಟಿಪಾರ್ಲರ್‌ಗಳಲ್ಲಿ ಯುವತಿಯರಿಂದ ಯುವಕರಿಗೆ ಸೇವೆಯನ್ನು ಒದಗಿಸುವ ನೆಪದಲ್ಲಿ ಪೊಲೀಸರಿಂದ ದಾಳಿ ನಡೆಸಿ ತೊಂದರೆ ನೀಡುವ ಪ್ರಕ್ರಿಯೆಯೂ ನಡೆಯುತ್ತದೆ. ಇದರಿಂದ ಅಲ್ಲಿ ಕೆಲಸ ಮಾಡುವ ಯುವತಿಯರಿಗೆ ಮಾತ್ರವಲ್ಲದೆ, ಅಲ್ಲಿ ತಮ್ಮ ಸೌಂದರ್ಯವರ್ಧನೆಗಾಗಿ ತೆರಳುವ ಯುವತಿಯರು ಹಾಗೂ ಅವರ ಕುಟುಂಬದವರ ಮೇಲೂ ಪರಿಣಾಮ ಬೀರುತ್ತದೆ. ಹೊಟ್ಟೆಪಾಡಿಗಾಗಿ ಉದ್ಯೋಗ ನಡೆಸುವ ಅಂತಹ ಸಂಸ್ಥೆಗಳವರೂ ತೊಂದರೆ ಅನುಭವಿಸಬೇಕಾಗುತ್ತದೆ. ಇದಕ್ಕಾಗಿ ರಾಜ್ಯ ಸರಕಾರ ಸೂಕ್ತ ಕಾನೂನು ಜಾರಿಗೊಳಿಸಬೇಕು. ಕಾನೂನು ಜಾರಿಯಾದರೆ ಮಸಾಜ್ ಹೆಸರಿನಲ್ಲಿ ಕೆಲವರು ನಡೆಸುವ ಅಕ್ರಮ ಚಟುವಟಿಕೆಗಳಿಗೂ ಕಡಿವಾಣ ಬೀಳಲಿದೆ ಎಂದರು.
ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯ ಅಗತ್ಯವಿದೆ. ಆದರೆ ಅದಕ್ಕೆ ಕನಿಷ್ಠ 40 ಎಕರೆ ಜಾಗ, 300 ಕೋಟಿಯಷ್ಟು ಹಣದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಲಯದ ಪರಿಮಿತಿಯೊಳಗೆ ಕೆಲವೊಂದು ರಿಟ್ ಪಿಟಿಶನ್‌ಗಳ ನ್ಯಾಯದಾನಕ್ಕೆ ಜಿಲ್ಲಾ ನ್ಯಾಯಾಲಯದ ಹಿರಿಯ ನ್ಯಾಯಾಽಶರಿಗೆ ಹೆಚ್ಚುವರಿ ಅಽಕಾರ ನೀಡಿದರೆ ಸಾಕಷ್ಟು ಪ್ರಕರಣಗಳನ್ನು ಜಿಲ್ಲಾ ನ್ಯಾಯಾಲಯದ ಮೂಲಕ ಬಗೆಹರಿಸಬಹುದಾಗಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಕಾನೂನು ಸಚಿವರು, ಪ್ರತಿಪಕ್ಷದ ನಾಯಕರಿಗೆ ಮನವಿಯನ್ನು ಸಲ್ಲಿಸುತ್ತಿರುವುದಾಗಿ ಹೇಳಿದರು.
ವಕೀಲರಾದ ನಂದಿನಿ ಅಖಿಲ್, ರೋಶನಿ ಸ್ವರಭ್, ಶಿಶಿರ್ ಭಂಡಾರಿ ಉಪಸ್ಥಿತರಿದ್ದರು.