
ಸರಕಾರಿ ಶಾಲೆಯಲ್ಲಿ ಸ್ಟೆಮ್, ರೊಬೋಟಿಕ್ಸ್ ಕಾರ್ಯಕ್ರಮ
ಈ ಕಾರ್ಯಕ್ರಮವು ಗ್ರಾಮೀಣ ಮಕ್ಕಳಿಗೆ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (ಸ್ಟೆಮ್)ದಲ್ಲಿ ನಿರಂತರ ಭವಿಷ್ಯಕ್ಕೆ ಸಿದ್ಧವಾದ ಕಲಿಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ, ಸೃಜನಶೀಲತೆಯನ್ನು ಪ್ರಾಯೋಗಿಕ ಅನ್ವಯಿಕೆಯೊಂದಿಗೆ ಸಂಯೋಜಿಸುತ್ತದೆ.
ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷ ದಾಮೋದರ್ ನೆತ್ತರಕೆರೆ ಅವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಮಾರಂಭವು, ಪುಟಾಣಿ ವಿದ್ಯಾರ್ಥಿನಿಯೊಬ್ಬಳು ಸಾಂಕೇತಿಕ ದೀಪ ಬೆಳಗಿಸುವುದರೊಂದಿಗೆ ಪ್ರಾರಂಭವಾಯಿತು. ಇದು ಕಾರ್ಯಕ್ರಮದ ಸಬಲೀಕರಣ ಮತ್ತು ಸಮಾನಾವಕಾಶದ ಉದ್ದೇಶವನ್ನು ಪ್ರತಿಬಿಂಬಿಸಿತು.
ಆರನೆಯ ಹಾಗೂ ಏಳನೆಯ ತರಗತಿಯ ಒಟ್ಟು 50 ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ಅನ್ವಯಿಸುತ್ತದೆ. ಪರ್ಯಾಯ ಶನಿವಾರಗಳಲ್ಲಿ ಎರಡು ಗಂಟೆಗಳ ಕಾಲ ನಡೆಯುವ ತರಗತಿಗಳನ್ನು ಡ್ರೀಮ್ ಕಿಟ್ ಇನ್ನೋವೇಶನ್ (ಡಿಟಿಐ ಲ್ಯಾಬ್ಜ್ ಪ್ರೈವೇಟ್ ಲಿಮಿಟೆಡ್) ಸಂಸ್ಥೆಯ ಪರಿಣತ ತರಬೇತುದಾರರು ನಡೆಸಲಿದ್ದಾರೆ. ಕೋಡಿಂಗ್, ರೊಬೋಟಿಕ್ಸ್, ಎಲೆಕ್ಟ್ರಾನಿಕ್ಸ್, ಆಪ್ ಅಭಿವೃದ್ಧಿ ಮತ್ತು ಸ್ವಯಂ ನಿರ್ಮಾಣ ಯೋಜನೆಗಳ ಮಾಡ್ಯೂಲ್ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ವಿವಿಧ ಮಾಧ್ಯಮಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಆಪ್, ರೊಬೋಟ್ ಮತ್ತು ಸೃಜನಾತ್ಮಕ ಮಾದರಿಗಳನ್ನು ನಿರ್ಮಿಸಲಿದ್ದಾರೆ. ವರ್ಷದ ಕೊನೆಯ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಪೋಷಕರು ಮತ್ತು ಸಮುದಾಯಕ್ಕೆ ತಮ್ಮ ಯೋಜನೆಗಳನ್ನು ಪ್ರದರ್ಶಿಸುವುದರೊಂದಿಗೆ ಕೊನೆಗೊಳ್ಳಲಿದೆ.
ತಮ್ಮ ಪರಿಚಯಾತ್ಮಕ ಭಾಷಣದಲ್ಲಿ, ಟ್ರಸ್ಟಿ ಶರ್ಮಿಳಾ ಅಮೀನ್ ಅವರು ಸ್ಟೆಮ್ ಕಲಿಕೆಯ ಮಹತ್ವವನ್ನು ವಿವರಿಸಿದರು. ‘ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಕೋಡಿಂಗ್ ಅಥವಾ ರೊಬೋಟ್ ನಿರ್ಮಿಸಲು ಪ್ರಾರಂಭಿಸಿದಲ್ಲಿ ಅವರು ಸವಾಲುಗಳನ್ನು ಪರಿಹರಿಸುವ ಮನೋಸ್ಥಿತಿಯನ್ನು ಬೆಳೆಸುತ್ತಾರೆ. ಆ ಆತ್ಮವಿಶ್ವಾಸ ಜೀವನಪಯಂತ ಉಳಿಯುತ್ತದೆ’ ಎಂದು ಹೇಳಿದರು.
ಈ ಉಪಕ್ರಮಕ್ಕಾಗಿ ಶಾಲೆಯನ್ನು ಆಯ್ಕೆ ಮಾಡಿದ್ದಕ್ಕಾಗಿ ಪ್ರಾಂಶುಪಾಲೆ ಸಿಲ್ವಿಯಾ ಬ್ರಾಗ್ಸ್ ಗುಡ್ ಫಾರ್ ಗುಡ್ ಟ್ರಸ್ಟ್‌ಗೆ ಕೃತಜ್ಞತೆ ಸಲ್ಲಿಸಿದರು.
ಈ ಅವಕಾಶ ವಿದ್ಯಾರ್ಥಿಗಳ ಆತ್ಮವಿಶ್ವಾಸ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದರು. ಟ್ರಸ್ಟ್ ಅಧ್ಯಕ್ಷ ಅಕ್ಷಯ್ ಸುವರ್ಣ ಅವರು ಈ ಕಾರ್ಯಕ್ರಮವನ್ನು ತಮ್ಮ ಶೈಕ್ಷಣಿಕ ಕ್ಯಾಲೆಂಡರ್‌ನಲ್ಲಿ ಸಂಯೋಜಿಸಿದ್ದಕ್ಕಾಗಿ ಶಾಲೆಗೆ ಧನ್ಯವಾದ ಅರ್ಪಿಸುತ್ತಾ, ‘ಗುಡ್ ಫಾರ್ ಗುಡ್ ಟ್ರಸ್ಟ್ ಕೇವಲ ಅಲ್ಪಾವಧಿಯ ಚಟುವಟಿಕೆಗಳಿಗಷ್ಟೇ ಸೀಮಿತವಾಗಿಲ್ಲ. ಪ್ರತಿಯೊಬ್ಬ ಮಗುವಿಗೂ ಚಿಂತನೆ, ನಾವೀನ್ಯತೆ ಮತ್ತು ತಂತ್ರಜ್ಞಾನಾಧಾರಿತ ಭವಿಷ್ಯದಲ್ಲಿ ಯಶಸ್ವಿಯಾಗುವ ಸಾಮರ್ಥ್ಯ ನೀಡುವ ಉದ್ದೇಶದಿಂದ ಈ ದೀರ್ಘಾವಧಿ ಕಾರ್ಯಕ್ರಮ ರೂಪಿಸಲಾಗಿದೆ’ ಎಂದು ಹೇಳಿದರು.
ಶಿಕ್ಷಕಿ ಮೋಹಿನಿ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಟ್ರಸ್ಟ್ ಉಪಾಧ್ಯಕ್ಷ ಸತ್ಯರಾಜ್, ಕಾರ್ಯದರ್ಶಿ ಈಶಾನ್ ಅಂಚನ್, ಜಂಟಿ ಕಾರ್ಯದರ್ಶಿ ಸಚಿತ್, ಪಿಆರ್ ಮುಖ್ಯಸ್ಥ ಎಲ್ಡೆನ್ ಡಿ’ಸೋಜಾ ಮತ್ತು ಲಾಜಿಸ್ಟಿಕ್ಸ್ ಮುಖ್ಯಸ್ಥ ಗುರುಮೂರ್ತಿ ಉಪಸ್ಥಿತರಿದ್ದರು.