
ದಲಿತ ದೌರ್ಜನ್ಯ: ಡಿಸಿಆರ್ಇ ಪ್ರತ್ಯೇಕ ಠಾಣೆಯಲ್ಲಿ ಸಮಸ್ಯೆಗೆ ಪರಿಹಾರ ಇಲ್ಲ
ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ರವಿವಾರ ಆಯೋಜಿಲಾದ ಮಂಗಳೂರು ಪೊಲೀಸ್ ಕಮಿಷನರೇಟ್ ಹಾಗೂ ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಂದು ಕೊರತೆ ಸಭೆಯಲ್ಲಿ ದಲಿತ ಮುಖಂಡರು ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಡಿಸಿಪಿ ಮಿಥುನ್ ಹಾಗೂ ಹೆಚ್ಚುವರಿ ಎಸ್ಪಿ ಭೂಮರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಗದೀಶ್ ಪಾಂಡೇಶ್ವರ ಎಂಬವರು ಮಾತನಾಡಿ, ಅತ್ತಾವರ ಪರಿಶಿಷ್ಟ ಸಮುದಾಯ ಮಹಿಳೆಯೊಬ್ಬರಿಗೆ ವಿದೇಶದಿಂದ ವ್ಯಕ್ತಿಯೊಬ್ಬ ಮೊಬೈಲ್ಗೆ ಕರೆ ಮಾಡುವುದಲ್ಲದೆ, ವಾಟ್ಸಾಪ್ ಮೂಲಕ ಕರೆ ಮಾಡಿ ಅಶ್ಲೀಲವಾಗಿ ನಿಂದಿಸುತ್ತಿರುವ ಬಗ್ಗೆ ದೂರು ನೀಡಿದ್ದರೂ ಕ್ರಮ ಆಗಿಲ್ಲ. ಪ್ರಕರಣವನ್ನು ಡಿಸಿಆರ್ಇ ಠಾಣೆಗೆ ವರ್ಗಾಯಿಸಲಾಗಿದ್ದು, ಅಲ್ಲಿ ಈವರೆಗೂ ಆರೋಪಿಯನ್ನು ಬಂಧಿಸುವ ಕಾರ್ಯ ಆಗಿಲ್ಲ. ಠಾಣಾಧಿಕಾರಿಯಿಂದ ಬೇಜವಾಬ್ಧಾರಿಯುತ ಉತ್ತರ ಮಾತ್ರ ದೊರೆಯುತ್ತಿದೆ ಎಂದು ಆರೋಪಿಸಿದರು.
ಡಿಸಿಆರ್ಇಗೆ ಸಂಬಂಧಿಸಿ ಸೋಮವಾರ ರಾಜ್ಯ ಮಟ್ಟದ ಸಭೆ ನಡೆಯಲಿದ್ದು, 21 ಹೊಸ ಡಿಎಸ್ಪಿಗಳ ನೇಮಕದ ಬಗ್ಗೆಯೂ ಚರ್ಚೆ ಆಗಲಿದೆ. ಮುಂದೆ ಡಿಎಸ್ಪಿ ರ್ಯಾಂಕ್ನ ಅಧಿಕಾರಿಗಳು ಠಾಣೆಗೆ ಬರಲಿದ್ದಾರೆ. ಸದ್ಯ ಡಿಸಿಆರ್ಇ ಪೊಲೀಸ್ ಆಯುಕ್ತರ ವ್ಯಾಪ್ತಿಗೆ ಬಾರದ ಕಾರಣ ಸಭೆಯಲ್ಲಿ ವ್ಯಕ್ತವಾದ ಮುಖಂಡರ ಅಸಮಾಧಾನದ ಬಗ್ಗೆ ಡಿಜಿ (ಡಿಸಿಆರ್ಇ)ಗೆ ಪತ್ರ ಬರೆಯಲಾಗುವುದು ಎಂದು ಡಿಸಿಪಿ ಮಿಥುನ್ ಎಚ್.ಎನ್.ತಿಳಿಸಿದರು.
ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2024ರ ಆಗಸ್ಟ್ನಲ್ಲಿ ಚಮಾಗಾರ ರಾಮ ಎಂಬವರ ಅಂಗಡಿಯಿಂದ ಕಳವು ಆದ ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ರಮೇಶ್ ಕೋಟ್ಯಾನ್ ದೂರಿದರು. ಈ ಬಗ್ಗೆ ಮರು ಪರಿಶೀಲನೆ ಮಾಡುವುದಾಗಿ ಡಿಸಿಪಿ ರವಿಶಂಕರ್ ತಿಳಿಸಿದರು.
ಫಲಾನುಭವಿಗಳ ಆಯ್ಕೆ ಜಿಲ್ಲಾಧಿಕಾರಿ ಸಮಿತಿಯಿಂದಲೇ ಆಗಲಿ:
ಅಂಬೇಡ್ಕರ್ ನಿಗಮದಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಪದವೀಧರರಿಗೆ ಸ್ವ ಉದ್ಯೋಗಕ್ಕೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಹಿಂದೆ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿ ಮೂಲಕ ನಡೆಯುತ್ತಿತ್ತು. ಕಳೆದ 15 ವರ್ಷಗಳಿಂದ ಸ್ಥಳೀಯ ಶಾಸಕರ ಮೂಲಕ ಆಯ್ಕೆ ನಡೆಯುತ್ತಿರುವುದರಿಂದ ಸಮುದಾಯದ ಬಲಾಢ್ಯರಿಗೆ ಹಾಗೂ ಶಾಸಕರ ಆಪ್ತರನ್ನು ಈ ಯೋಜನೆಗಳಿಗೆ ಆಯ್ಕೆ ಮಾಡುವ ಪ್ರಕ್ರಿಯೆ ನಡೆಯುವುದರಿಂದ ಬಡ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ. ಇದನ್ನು ಹಿಂದಿನಂತೆಯೇ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿಯೇ ನಡೆಸಬೇಕು. ಸಭೆಯಲ್ಲಿ ವ್ಯಕ್ತವಾದ ಈ ಬೇಡಿಕೆ ಬಗ್ಗೆ ಸರಕಾರದ ಗಮನ ಸೆಳೆಯುವ ಕಾರ್ಯ ಆಗಬೇಕು ಎಂದು ದಲಿತ ಮುಖಂಡ ಎಸ್.ಪಿ. ಆನಂದ್ ಆಗ್ರಹಿಸಿದರು.
ಗಂಜಿಮಠ ಅಂಬೇಡ್ಕರ್ ಭವನದಲ್ಲಿ ಚೇರ್ಗಳೇ ಇಲ್ಲ:
ಬಜ್ಪೆ ಠಾಣಾ ವ್ಯಾಪ್ತಿಯ ಗಂಜಿಮಠದ ಅಂಬೇಡ್ಕರ್ ಭವನದಲ್ಲಿದ್ದ ಚೇರ್, ಫ್ಯಾನ್ ಕಳವಾಗಿ ಮೂರು ವರ್ಷವಾಗಿದೆ. ಕಳವು ಮಾಡಿದವರ ಇನ್ನೂ ಆಗಿಲ್ಲ. ಜತೆಗೆ ಅಲ್ಲಿ ಈಗಲೂ ಕಾರ್ಯಕ್ರಮ ನಡೆಸಲು ಚೇರ್ಗಳೇ ಇಲ್ಲ ಎಂದು ಎಸ್. ಆನಂದ್ ದೂರಿದಾಗ, ಈ ಬಗ್ಗೆ ಜಿ.ಪಂ. ಸಿಇಒ ಗಮನಕ್ಕೆ ತರುವುದಾಗಿ ಡಿಸಿಪಿ ಮಿಥುನ್ ತಿಳಿಸಿದರು.
ಐಕಳ ಗ್ರಾಮದಲ್ಲಿ ಅಕ್ರಮ ಮರಳುಗಾರಿಕೆ ಬಗ್ಗೆ 112ಗೆ ದೂರು ನೀಡಿದ ನನ್ನ ಹೆಸರನ್ನೇ ಮರಳುಗಾರಿಕೆ ನಡೆಸುವವರಿಗೆ ಸ್ಥಳೀಯ ಪೊಲೀಸರೊಬ್ಬರು ನೀಡಿದ್ದಾರೆ ಎಂದು ದಲಿತ ಮುಖಂಡರೊಬ್ಬರು ದೂರಿದರು.
ಈ ರೀತಿಯಾದರೆ, ಅಕ್ರಮಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವುದಾರೂ ಹೇಗೆ ಮಾತ್ರಲ್ಲದೆ, ದೂರು ನೀಡಿದವರ ಪ್ರಾಣಕ್ಕೆ ಹಾನಿಯಾದರ ಯಾರು ಹೊಣೆ ಎಂದು ದಲಿತ ನಾಯಕರು ಪ್ರಶ್ನಿಸಿದರು.
ಇಂತಹ ತಪ್ಪು ಆಗಬಾರದು. ಆಗಿದ್ದಲ್ಲಿ ಅಂತಹ ಅಧಿಕಾರಿಗಳ ಮೇಲೆ ತನಿಖೆ ನಡೆಸಿಕ್ರಮ ವಹಿಸಲಾಗುವುದು ಎಂದು ಡಿಸಿಪಿ ಮಿಥುನ್ ಹೇಳಿದರು.
ಡಿಸಿಪಿ ರವಿಶಂಕರ್, ಹೆಚ್ಚುವರಿ ಎಸ್ಪಿ ಎ.ಎಸ್. ಭೂಮರಡ್ಡಿ, ಡಿಸಿಆರ್ಇ ಇನ್ಸ್ಪೆಕ್ಟರ್ ವಿದ್ಯಾಧರ್ ಹಾಗೂ ಇತರ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ದಲಿತ ನಾಯಕರು ಉಪಸ್ಥಿತರಿದ್ದರು.