ಜಿಲ್ಲೆಯಲ್ಲಿ ಕೆಂಪು ಕಲ್ಲು-ಮರಳಿಗೆ ಅಭಾವ-ಸಭೆ ನಡೆಸದ ಸಚಿವರು: ಸತೀಶ್ ಕುಂಪಲ ಆರೋಪ

ಜಿಲ್ಲೆಯಲ್ಲಿ ಕೆಂಪು ಕಲ್ಲು-ಮರಳಿಗೆ ಅಭಾವ-ಸಭೆ ನಡೆಸದ ಸಚಿವರು: ಸತೀಶ್ ಕುಂಪಲ ಆರೋಪ


ಮಂಗಳೂರು: ದ.ಕ. ಜಿಲ್ಲೆಯಲ್ಲಿ ಮರಳು ಹಾಗೂ ಕೆಂಪುಕಲ್ಲು ಅಭಾವ ತೀವ್ರವಾಗಿದ್ದು, ಇದರ ನಿವಾರಣೆಗೆ ಮುಖ್ಯಮಂತ್ರಿಗಳು ಭರವಸೆ ನೀಡಿದರೂ ಮಂಗಳೂರಿಗೆ ಆಗಮಿಸಿದ್ದ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಂದು ಸಭೆ ಕೂಡ ನಡೆಸಿಲ್ಲ. ಇದು ಕಾರ್ಮಿಕರ ಹಾಗೂ ಜಿಲ್ಲೆಯ ಜನತೆ ಬಗ್ಗೆ ರಾಜ್ಯ ಸರ್ಕಾರಕ್ಕೆ ಇರುವ ಕಾಳಜಿ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಆರೋಪಿಸಿದ್ದಾರೆ.

ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಹಿತಕರ ಘಟನೆ ವೇಳೆ ಎಲ್ಲರನ್ನು ವಿಶ್ವಾಸಕ್ಕೆ  ತೆಗೆದುಕೊಂಡು ಶಾಂತಿ ಸಮಿತಿ ಸಭೆ ನಡೆಸಿರುವುದು ಯಶಸ್ವಿಯಾಗಿತ್ತು. ಅದೇ ರೀತಿ ಮರಳು ಮತ್ತು ಕೆಂಪುಕಲ್ಲು ಸಮಸ್ಯೆ ಕಳೆದ ಮೂರು ತಿಂಗಳಿಂದ ಇದ್ದರೂ ಅದ ನ್ನು ಬಗೆಹರಿಸುವ ಪ್ರಯತ್ನ ಇನ್ನೂ ನಡೆದಿಲ್ಲ. ಇದರಿಂದಾಗಿ ನೂರಾರು ಕಾರ್ಮಿಕರ ಬದುಕು ಸಂಕಷ್ಟದಲ್ಲಿದೆ. ಈ ವಿಚಾರವನ್ನು ಬಿಜೆಪಿ ನಿಯೋಗ ಬೆಂಗಳೂರಿನಲ್ಲಿ ಗಣಿ  ಇಲಾಖೆಯ ಅಧಿಕಾರಿಗಳ ಗಮನಕ್ಕೂ ತಂದಿದೆ. ಅಲ್ಲದೆ ಎಲ್ಲ ತಾಲೂಕುಗಳಲ್ಲಿ ಪ್ರತಿಭಟನೆ ಕೂಡ ನಡೆಸಿದೆ. ಇಷ್ಟಾದರೂ ಮಂಗಳೂರಿನಲ್ಲಿ ಜನಪ್ರತಿನಿಧಿಗಳ ಸಭೆ  ನಡೆಸಿ ಇತ್ಯರ್ಥಪಡಿಸುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಆಸಕ್ತಿ ತೋರಿಸುತ್ತಿಲ್ಲ ಎಂದು ಆರೋಪಿಸಿದರು. 

ಗ್ರಾ.ಪಂ.ಗೆ ಅಧಿಕಾರ ನೀಡಿ:

ಸ್ಯಾಂಡ್ ಬಜಾರ್ ಆಪ್‌ನಲ್ಲಿ ಕೋರಿಕೆ ಸಲ್ಲಿಸಿದರೆ ಹೇರಳ ಮರಳು ಸಿಗುತ್ತದೆ. ಮರಳಿನ ಕೊರತೆ ಇಲ್ಲ ಎಂದು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ  ಸಮಜಾಯಿಸಿ ನೀಡುತ್ತಿದೆ. ಅಕ್ರಮ ಮರಳುಗಾರಿಕೆ ಇದ್ದರೆ ಅದನ್ನು ಮಟ್ಟಹಾಕಲು ಕ್ರಮ ಕೈಗೊಳ್ಳಬೇಕು. ಪ್ರಸಕ್ತ ಸ್ಯಾಂಡ್ ಬಜಾರ್ ಆಪ್ ಮೂಲಕ ಖರೀದಿಸುವ ಮರಳು ಕಾಮಗಾರಿ ನಡೆಸುವ ಗುಣಮಟ್ಟದಲ್ಲಿ ಇರುವುದಿಲ್ಲ. ಇಲ್ಲಿ ಕಟ್ಟಡ ನಿರ್ಮಾಣಕ್ಕೆ ಕೆಂಪುಕಲ್ಲು ಬೇಕೇಬೇಕು. ಹೊರ ಜಿಲ್ಲೆಗೂ ಇಲ್ಲಿನ ಭೌಗೋಳಿಕತೆಗೂ ವ್ಯತ್ಯಾಸ  ಇದೆ. ಹಾಗಾಗಿ ಕರಾವಳಿಗೆ ಪ್ರತ್ಯೇಕ ಮರಳು ನೀತಿ ಬೇಕು. ಅಲ್ಲದೆ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಇರುವ ಮರಳು ಬ್ಲಾಕ್‌ಗಳಲ್ಲಿ ಮರಳುಗಾರಿಕೆಗೆ ಅನುಮತಿ  ನೀಡುವಂತೆ ನಿಯಮವನ್ನು ಸರಳೀಕರಣಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಮಾತನಾಡಿ, ಕರಾವಳಿಯಲ್ಲಿ ಭೌಗೋಳಿಕವಾಗಿ ಮರಳು ತೆಗೆಯದಿದ್ದರೆ ಪ್ರವಾಹ ಉಂಟಾಗುತ್ತದೆ. ಆದರೆ ಈಗ  ಮರಳುಗಾರಿಕೆಗೆ ತಡೆ ನೀಡುವ ಮೂಲಕ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ. ಮರಳುಗಾರಿಕೆ ಹಾಗೂ ಕೆಂಪುಕಲ್ಲು ಸಮಸ್ಯೆ ತಕ್ಷಣ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಬೇಕು  ಎಂದು ಆಗ್ರಹಿಸಿದರು. 

ಶಾಸಕರಾದ ಡಾ. ಭರತ್ ಶೆಟ್ಟಿ, ಭಾಗೀರಥಿ ಮುರುಳ್ಯ, ಕಿಶೋರ್ ಕುಮಾರ್, ಮುಖಂಡರಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ್, ವಸಂತ ಪೂಜಾರಿ  ಮತ್ತಿತರರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article