ಮಂಜುನಾಥ ಸ್ವಾಮಿ ಕ್ಷೇತ್ರದ ಪಾವಿತ್ರ್ಯತೆ ಹಾಳಾಗಿಲ್ಲ: ದಿನೇಶ್ ಗುಂಡೂರಾವ್
ಅವರು ಇಂದು ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿ, ಕ್ಷೇತ್ರದಲ್ಲಿ ಅಗೆದಿಲ್ಲ. ಕಾಡಿನಲ್ಲಿ ಅಗೆದಿರುವುದು. ಬಿಜೆಪಿಯವರು ಅನಗತ್ಯವಾಗಿ ತಿರುಚಿ ಉದ್ದೇಶಪೂರ್ವಕವಾಗಿ ಹೆಸರು ಹಾಳು ಮಾಡುತ್ತಿದ್ದಾರೆ. ನಿಜಾಂಶ ಹೊರಬಂದರೆ ಸಾಕು. ದೇವರ ಭಕ್ತರು ಯಾರೂ ಅಷ್ಟುಸುಲಭವಾಗಿ ಕ್ಷೇತ್ರದ ಮೇಲಿನ ನಂಬಿಕೆ ಕಳೆದುಕೊಳ್ಳುವುದಿಲ್ಲ. ಅದಕ್ಕಾಗಿ ಈ ರೀತಿಯಾಗಿ ಪ್ರತಿಬಿಂಬಿಸುವ ಅಗತ್ಯವಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸಚಿವ ದಿನೇಶ್ ಗುಂಡೂರಾವ್ ಈ ಪ್ರತಿಕ್ರಿಯೆ ನೀಡಿದರು.
ಬಿಜೆಪಿಯವರು ರಾಜಕೀಯ ಲಾಭ ನೋಡುವವರು. ಅವರಿಗೆ ಇಂತಹದ್ದೇ ವಿಷಯಗಳು ಬೇಕು. ಮೊದಲು 10 ದಿನ ಏನೂ ಮಾತನಾಡಿಲ್ಲ. ಈಗ ವಿಷಯಗಳು ಹೊರ ಬರುತ್ತಿರುವಾಗ ಅದನ್ನು ತಮ್ಮ ರಾಜಕೀಯ ಲಾಭಕ್ಕೆ ಹೇಗೆ ಉಪಯೋಗಿಸಿಕೊಳ್ಳಬಹುದು ಎಂಬುದು ಅವರ ಲೆಕ್ಕಾಚಾರ. ನಮಗೆ ಅದು ಬೇಕಾಗಿಲ್ಲ. ನಮಗೆ ಸತ್ಯಾಂಶ ಹೊರಬರಬೇಕು. ಬಿಜೆಪಿಯವರದ್ದು ಇದು ಹಳೆಯ ಚಾಳಿ. ಧಾರ್ಮಿಕ ವಿಚಾರವನ್ನು ಉಪಯೋಗಿಸಿಕೊಳ್ಳುವುವುದೇ ಅವರ ಚಾಳಿ. ಬಿಜೆಪಿ ಮತ್ತು ಸಂಘ ಪರಿವಾರ ಅಪಪ್ರಚಾರದಲ್ಲೇ ನಂಬಿಕೆ ಇರಿಸಿದವರು ಎಂದರು.
ಎಸ್‌ಐಟಿಗೆ ಬೇರೆ ಬೇರೆ ದೂರುಗಳು ದಾಖಲಾಗುತ್ತಿದ್ದು, ಅದರ ತನಿಖೆಯನ್ನು ನಡೆಸಲಿದೆಯೇ ಎಂಬ ಪ್ರಶ್ನೆಗೆ, ದೂರು ಯಾರೂ ಕೊಡಬಹುದು. ತನಿಖೆ ನಡೆಸುವ ಬಗ್ಗೆ ಎಸ್‌ಐಟಿ ನಿರ್ಧರಿಸಲಿದೆ. ದೇಶದಲ್ಲಿ ಇಷ್ಟುದೊಡ್ಡ ಸುದ್ದಿ ಆದಾಗ ಒಳ್ಳೆಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆಗೆ ರಾಜ್ಯ ಸರಕಾರ ಮುಂದಾಗಿದೆ. ಅಪಪ್ರಚಾರ ಮಾಡುವವರಿಗೆ ಸಣ್ಣ ವಿಷಯ ಸಾಕು. ಸತ್ಯವೇ ಎಲ್ಲದಕ್ಕೂ ಉತ್ತರ ಕೊಡುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.