ಸರ್ಕಾರದ ಬೊಕ್ಕಸದಿಂದಲೇ ಪಿಂಚಣಿ ಕೊಡಿ: ಶಾಸಕ ಕಾಮತ್ ಆಗ್ರಹ
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ತನ್ನ ತಪ್ಪನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದು, ‘ಆ ನಿರ್ಧಾರ ನಮ್ಮದಲ್ಲ, ಹಿಂದಿನ ಸರ್ಕಾರದ್ದು’ ಎಂದು ಬಾಲಿಶ ಹೇಳಿಕೆ ನೀಡಿ ಜನತೆಯ ಮುಂದೆ ಇನ್ನಷ್ಟು ಬೆತ್ತಲಾಗುತ್ತಿದೆ ಎಂದು ಟೀಕಿಸಿದರು.
ಬಿಜೆಪಿ ಅವಧಿಯ ಕರೆಂಟ್ ಬಿಲ್ಲುಗಳಲ್ಲಿ ಪಿಂಚಣಿ ಹಾಗೂ ಗ್ರ್ಯಾಚುಟಿ ಹೆಸರಿನಲ್ಲಿ ಒಂದೇ ಒಂದು ರೂಪಾಯಿ ಸಹ ಸಂಗ್ರಹ ಮಾಡಿಲ್ಲ. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಜನರನ್ನು ಲೂಟಿ ಮಾಡುತ್ತಿದ್ದು ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯ ಕರೆಂಟ್ ಬಿಲ್ಲುಗಳಲ್ಲಿ ಪರೀಕ್ಷಿಸಿಕೊಳ್ಳಬಹುದು. ಸಂಶಯವಿದ್ದರೆ ಕಾಂಗ್ರೆಸ್ ನಾಯಕರೂ ಸಹ ತಮ್ಮ ಮನೆಯ ಬಿಲ್ ಪರೀಕ್ಷಿಸಿಕೊಂಡು ಜನತೆಯ ದಿಕ್ಕು ತಪ್ಪಿಸುವ ಹೇಳಿಕೆ ನೀಡಿದ್ದಕ್ಕೆ ಬಹಿರಂಗ ಕ್ಷಮೆಯಾಚಿಸಲಿ ಎಂದರು.
900 ಗೆ ಸಿಗುತ್ತಿದ್ದ ಸ್ಮಾರ್ಟ್ ಮೀಟರ್‌ಗೆ 10,000 ಯಾಕೆ ಎಂದು ಹೈಕೋರ್ಟ್ ಸಹ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಹೆಚ್ಚುವರಿ ಭದ್ರತಾ ಠೇವಣಿ ಹೆಸರಿನಲ್ಲಿ ಉಚಿತ ವಿದ್ಯುತ್ ಪಡೆಯುತ್ತಿರುವವರಿಂದಲೂ ಸಾವಿರಾರು ರೂಪಾಯಿ ಲೂಟಿ ಮಾಡಲಾಗುತ್ತಿದೆ. ಸರ್ಕಾರ ಒಂದು ಕೈಯಲ್ಲಿ ಸವಲತ್ತು ಕೊಟ್ಟ ಹಾಗೆ ಮಾಡಿ ಇನ್ನೊಂದು ಕೈಯಿಂದ ಕಿತ್ತುಕೊಂಡರೆ ಏನು ಪ್ರಯೋಜನ? ಲೋಡ್ ಶೆಡ್ಡಿಂಗ್ ನಿಂದಾಗಿ ಸಾರ್ವಜನಿಕರು, ರೈತರು, ಕೈಗಾರಿಕೆಗಳು, ವಿದ್ಯಾರ್ಥಿಗಳು, ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಶಾಸಕ ಕಾಮತ್ ಹೇಳಿದರು.
ಕೆಂಪು ಕಲ್ಲು ಮತ್ತು ಮರಳು ಸಮಸ್ಯೆಯಿಂದಾಗಿ ಜಿಲ್ಲೆಯಲ್ಲಿ ಸಮಸ್ಯೆ ಇನ್ನಷ್ಟು ಹೆಚ್ಚಾಗಿದ್ದು ರಾಜ್ಯ ಕಾಂಗ್ರೆಸ್ ಸರ್ಕಾರ ಇನ್ನೂ ಸಹ ಸ್ಪಂದಿಸುತ್ತಿಲ್ಲ. ದ.ಕ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಬಿಜೆಪಿ ನೇತೃತ್ವದಲ್ಲಿ ಹೋರಾಟ ನಡೆದು ಕೊನೆಗೆ ಜಿಲ್ಲಾ ಬಿಜೆಪಿ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದರೂ ಈ ಗೊಂದಲವನ್ನು ಬಗೆಹರಿಸದೇ ದಕ್ಷಿಣ ಕನ್ನಡ ಜಿಲ್ಲೆಯ ಜನತೆಯನ್ನು ಸಂಪೂರ್ಣ ಕಡೆಗಣಿಸಿರುವುದು ಖಂಡನೀಯ ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ದಕ್ಷಿಣ ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು ಪ್ರಮುಖರಾದ ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್, ಸಂಜಯ್ ಪ್ರಭು, ಮುರುಳಿ ಹೊಸಮಜಲು, ಗಂಗಾಧರ್ ಸಾಲ್ಯಾನ್ ಉಪಸ್ಥಿತರಿದ್ದರು.