ಹಳೆ ಬಂದರು ಡ್ರೈನೇಜ್ ಅವ್ಯವಸ್ಥೆ, ರಸ್ತೆ ದುರವಸ್ಥೆ, ಪಾಲಿಕೆ ನಿರ್ಲಕ್ಷ್ಯತೆ ಖಂಡಿಸಿ ಪ್ರತಿಭಟನೆ

ಹಳೆ ಬಂದರು ಡ್ರೈನೇಜ್ ಅವ್ಯವಸ್ಥೆ, ರಸ್ತೆ ದುರವಸ್ಥೆ, ಪಾಲಿಕೆ ನಿರ್ಲಕ್ಷ್ಯತೆ ಖಂಡಿಸಿ ಪ್ರತಿಭಟನೆ


ಮಂಗಳೂರು: ಹಳೇಬಂದರು ರಸ್ತೆ ಡ್ರೈನೇಜ್ ಅವ್ಯವಸ್ಥೆ ಮತ್ತು ರಸ್ತೆ ದುರವಸ್ಥೆ ಖಂಡಿಸಿ ಡಿವೈಎಫ್‌ಐ ಬಂದರು ಘಟಕ ಮತ್ತು ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ಹಳೆ ಬಂದರು ಕಾರ್ಮಿಕರ ಕಟ್ಟೆ ಬಳಿ ಪ್ರತಿಭಟನೆ ನಡೆಯಿತು.


ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಬಂದರು ಶ್ರಮಿಕರ ಸಂಘದ ಗೌರವಧ್ಯಕ್ಷ ಸುನಿಲ್ ಕುಮಾರ್ ಬಜಾಲ್ ಅವರು ಮಂಗಳೂರಿನ ಆರ್ಥಿಕತೆಗೆ ಜನ್ಮ ನೀಡಿದ ಹಳೆ ಬಂದರು ಸಗಟು ಮಾರುಕಟ್ಟೆ ಪರಿಸರ ಅನೇಕ ಮೂಲಭೂತ ಸಮಸ್ಯೆಯಿಂದ ಕೂಡಿದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಮೊದಲು ಅಭಿವೃದ್ಧಿ ಆಗಬೇಕಾದ ಪ್ರದೇಶದಲ್ಲಿ ಸಮಸ್ಯೆಗಳು ತಾಂಡವವಾಡುತ್ತಿದೆ. ಮಂಗಳೂರು ಸ್ಮಾರ್ಟ್ ಸಿಟಿ ಮೀನುಗಾರಿಕಾ ಪ್ರದೇಶಾಭಿವೃದ್ಧಿ ಆಧಾರಿತ ಯೋಜನೆ ಆಗಿದ್ದರೂ ಬಂದರು ಪ್ರದೇಶದಲ್ಲೇ ಸ್ಮಾರ್ಟ್ ಸಿಟಿ ಯೋಜನೆ ವೈಫಲ್ಯ ಕಂಡಿದೆ ಎಂದು ಅವರು ಟೀಕಿಸಿದರು.


ಡಿವೈಎಫ್‌ಐ ಜಿಲ್ಲಾಧ್ಯಕ್ಷರೂ, ಬಂದರು ಶ್ರಮಿಕರ ಸಂಘದ ಅಧ್ಯಕ್ಷ ಬಿ.ಕೆ. ಇಮ್ತಿಯಾಜ್ ಮಾತನಾಡಿ, ಬಂದರು ವಾರ್ಡಿನ ಗೋಲಿಕಟ್ಟೆ ಬಜಾರಿನಿಂದ ಪೋರ್ಟ್ ರಸ್ತೆವರೆಗಿನ ರಸ್ತೆಯಲ್ಲಿ ಹಾದುಹೋಗುವ ಡ್ರೈನೇಜ್ ಮ್ಯಾನ್ ಹೋಲ್‌ಗಳು ತುಂಬಿ ತ್ಯಾಜ್ಯ ನೀರು ರಸ್ತೆಯಲ್ಲೇ ಹರಿದು ಪಾದಚಾರಿಗಳು ನಡೆದಾಡಲು ಕಷ್ಟ ಪಡುತ್ತಿದ್ದಾರೆ. ಶಾಲಾ ಮಕ್ಕಳು, ನಗರಕ್ಕೆ ಕೆಲಸಕ್ಕೆ ಹೋಗುವ ಮಹಿಳೆಯರು, ಬಂದರು ಸಗಟು ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ತ್ಯಾಜ್ಯ ನೀರಿನಲ್ಲೇ ನಡೆದಾಡುವ ಕೆಟ್ಟ ಪರಿಸ್ಥಿತಿ ಇದೆ. 

ಎರಡು ತಿಂಗಳ ಹಿಂದೆ ಡ್ರೈನೇಜ್ ಸರಿಪಡಿಸಲಿಕ್ಕಾಗಿ ರಸ್ತೆಯಲ್ಲಿ ತೋಡಿರುವ ಬೃಹತ್ ಗುಂಡಿಗಳನ್ನು ಮುಚ್ಚದೆ ಇರುವುದರಿಂದ ದ್ವಿಚಕ್ರ ಸವಾರರು, ಪಾದಚಾರಿಗಳು ಗುಂಡಿಗೆ ಬಿದ್ದು ಕೈ ಕಾಲು ಮುರಿದುಕೊಂಡಿದ್ದಾರೆ ಪಾಲಿಕೆಯ ನಿರ್ಲಕ್ಷ್ಯತನದಿಂದಾಗಿ ಸಾರ್ವಜನಿಕರು, ಕಾರ್ಮಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪಾಲಿಕೆ ಅಧಿಕಾರಿಗಳು ಕಾರ್ಮಿಕರು, ಮತ್ತು ಡಿವೈಎಫ್‌ಐ ಕಾರ್ಯಕರ್ತರು ಸಿದ್ದಾರಾಗುತ್ತಿದ್ದಂತೆ ಪ್ರತಿಭಟನೆ ಸ್ಥಳಕ್ಕೆ ಬಂದ ನಗರಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ನರೇಶ್ ಶೆಣೈ ಅವರು ಸಮಸ್ಯೆ ಪರಿಹಾರದ ಬಗ್ಗೆ ಭರವಸೆ ನೀಡಿದರೂ ಪಟ್ಟು ಬಿಡದ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿ ಸಮಸ್ಯೆ ಪರಿಹಾರಕ್ಕೆ ವಾರದ ಗಡುವು ನೀಡಿದರು. ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ಅಧಿಕಾರಿಗಳು ಒಂದು ವಾರದ ಒಳಗೆ ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದರು.

ಮಸ್ಯೆ ಪರಿಹಾರ ಆಗದಿದ್ದರೆ ಪಾಲಿಕೆಗೆ ಕೈಗಾಡಿ ಜಾಥಾ:

ಡ್ರೈನೇಜ್ ಗುಂಡಿ ತೋಡಿ ಸಾರ್ವಜನಿಕರಿಗೆ, ಕಾರ್ಮಿಕರಿಗೆ ತ್ಯಾಜ್ಯ ನೀರಿನಲ್ಲಿ ನಡೆದಾಡಿಸಿ ಮಂಗಳೂರಿನಲ್ಲಿ ಮತ್ತೆ ಪೈಲೇರಿಯಾ (ಆನೆಕಾಲು) ರೋಗ ಹರಡುವ ಭೀತಿಯಿದೆ, ತ್ಯಾಜ್ಯ ನೀರು ನದಿಗೆ ಬಿಡುತ್ತಿರುವುದರಿಂದ ನದಿಯ ಎರಡೂ ಬದಿಯಲ್ಲಿರುವ ಬೆಂಗರೆ ಮತ್ತು ಬಂದರು, ಕುದ್ರೋಳಿ, ಹೊಯಿಗೆ ಬಜಾರ್ ಪ್ರದೇಶದಲ್ಲಿ ಡೆಂಗ್ಯೂ, ಮಲೇರಿಯಾ ಪ್ರಕರಣಗಳು ವ್ಯಾಪಾಕವಾಗಿ ಪತ್ತೆಯಾಗುತ್ತಿದೆ.

ಡ್ರೈನೇಜ್ ಸಮಸ್ಯೆ ಸರಿಪಡಿಸದಿದ್ದರೆ ಬಂದರು ಹಮಾಲಿ ಕಾರ್ಮಿಕರು ಬಳಸುವ ನೂರಾರು ಕೈಗಾಡಿ ಜಾಥಾ ನಡೆಸಿ ಪಾಲಿಕೆಗೆ ಮುತ್ತಿಗೆ ಹಾಕಲಾಗುವುದು ಎಂದು ಬಂದರು ಶ್ರಮಿಕರ ಸಂಘದ ಅಧ್ಯಕ್ಷರೂ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ತಿಳಿಸಿದ್ದಾರೆ

ಡಿವೈಎಫ್‌ಐ ಜಿಲ್ಲಾ ಮುಖಂಡರಾದ ನವೀನ್ ಕೊಂಚಾಡಿ, ತಯ್ಯುಬ್ ಬೆಂಗ್ರೆ, ಪಿ.ಜಿ ರಫೀಕ್, ಹನೀಫ್ ಬೆಂಗ್ರೆ, ಬಂದರು ಘಟಕದ ಪ್ರಮುಖರಾದ ನೌಫಲ್ ಬಂದರ್,ಶಫೀರ್, ನೌಷಾದ್, ರಿಫಾಝ್, ಆಫ್ರಾಝ್, ಶಫೀಕ್, ರಿಹಾನ್, ಬಂದರು ಶ್ರಮಿಕರ ಸಂಘದ ನಾಯಕರಾದ ಫಾರೂಕ್ ಉಳ್ಳಾಲಬೈಲ್, ಶಿವಾನಂದ ಪೆರುಮಾಲ್, ಲೋಕೇಶ್ ಶೆಟ್ಟಿ, ಹರೀಶ್ ಕೆರೆಬೈಲ್, ಸಿದ್ದಿಕ್ ಬೆಂಗರೆ, ರಫೀಕ್, ಮಜೀದ್ ಉಳ್ಳಾಲ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article