
ಬ್ಯೂಟಿ ಪಾರ್ಲರ್ ಮಾಲಕಿಯಿಂದ ಮಹಿಳೆಗೆ ದೌರ್ಜನ್ಯ, ಬೆದರಿಕೆ
ಮಂಗಳೂರು: ನಗರದ ಬ್ಯೂಟಿಪಾರ್ಲರ್ನ ಮಾಲಕಿ ತನ್ನ ಮೇಲೆ ಹಲ್ಲೆ ನಡೆಸಿ, ತನ್ನ ಬೆತ್ತಲೆ ವೀಡಿಯೋ ಮಾಡಿ ಬೆದರಿಕೆ ಮಾಡಿರುವುದಾಗಿ ಸಂತ್ರಸ್ತ ಮಹಿಳೆಯೊಬ್ಬರು ಮಾಧ್ಯಮದೆದುರು ಆರೋಪ ಮಾಡಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಆರೋಪ ಮಾಡಿರುವ ಮಹಿಳೆ, ಕಳೆದ ಒಂದೂವರೆ ತಿಂಗಳ ಹಿಂದೆ ನಗರದ ಹಂಪನಕಟ್ಟೆ ಮತ್ತು ಜ್ಯೋತಿ ಸರ್ಕಲ್ ನಡುವಿನ ಯುನಿಸೆಕ್ಸ್ ಬ್ಯೂಟಿಪಾರ್ಲರ್ನಲ್ಲಿ ಬ್ಯೂಟಿಶಿಯನ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಾಗಿ ಹೇಳಿದರು.
ಬ್ಯೂಟಿಶಿಯನ್ ಕೋರ್ಸ್ ಮಾಡಿಕೊಂಡಿರುವ ತಾನು ಕೆಲಸಕ್ಕೆ ಸೇರುವ ಸಂದರ್ಭ ಆ ಬ್ಯೂಟಿಪಾರ್ಲರ್ನ ಮಾಲಕರು, ಬರುವ ಗ್ರಾಹಕರೊಂದಿಗೆ ಆತ್ಮೀಯವಾಗಿದ್ದುಕೊಂಡು ಅವರು ಬಯಸುವ ಸೇವೆಯನ್ನು ಒದಗಿಸುವಂತೆ ಮತ್ತು ಅವರಿಂದ 500ರೂ.ನಿಂದ 1000 ರೂ.ವರೆಗೆ ಸೇವಾ ಭತ್ತೆಯಾಗಿ ಪಡೆಯಲು ಅವಕಾಶ ನೀಡಿದ್ದರು. ಕಳೆದ ಸೋಮವಾರ ಪರಿಚಯದ ಪುರುಷ ಗ್ರಾಹಕರೊಬ್ಬರು ಬಂದು ಮಸಾಜ್ ಮಾಡಿಸಿಕೊಂಡ ಸಂದರ್ಭ ಮಾತನಾಡಿದ್ದನ್ನು ವಾಯ್ಸ್ ರೆಕಾರ್ಡ್ ಮಾಡಿಕೊಂಡು ಮಾಲಕರಿಗೆ ನೀಡಿದ್ದಾರೆ. ಆ ಸಂದರ್ಭ ಪಾರ್ಲರ್ನ ಮಾಲಕರ ಪತ್ನಿ ಬಂದು ನನಗೆ ಹಲ್ಲೆ ನಡೆಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿ ನನ್ನ ಬೆತ್ತಲೆ ವೀಡಿಯೋ ಮಾಡಿ ಬೆದರಿಕೆಯೊಡ್ಡಿದರು. ಮರುದಿನ ನನ್ನ ಪತಿಯನ್ನು ಕರೆಸಿ ವೀಡಿಯೋ ತೋರಿಸಿ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ. ಮೂರು ವರ್ಷದ ಮಗುವನ್ನೂ ಹೊಂದಿರುವ ನಾನು ಈ ಬಗ್ಗೆ ನೊಂದು ಆತ್ಮಹತ್ಯೆಗೂ ಮುಂದಾಗಿದ್ದೆ. ಆ ಸಂದರ್ಭ ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಅವರನ್ನು ಸಂಪರ್ಕಿಸಿ ನಡೆದ ವಿಚಾರ ತಿಳಿಸಿದ್ದು, ಬಂದರು ಠಾಣೆಯಲ್ಲಿ ದೂರು ನೀಡಿದ್ದೇನೆ ಎಂದು ಮಹಿಳೆ ಕಣ್ಣೀರು ಹಾಕುತ್ತಾ ವಿವರ ನೀಡಿದರು.
ಅಲ್ಲಿ ಕೆಲಸ ಮಾಡುವ ಇತರ ಯುವತಿ, ಯುವಕರ ಮೇಲೂ ಇಂತಹ ಹಲ್ಲೆ, ಬೆದರಿಕೆ ನೀಡುವ ಕಾರ್ಯ ನಡೆಯುತ್ತಿದೆ. ಆದರೆ ಮರ್ಯಾದೆ ಹಾಗೂ ಉದ್ಯೋಗ ಕಳೆದುಕೊಳ್ಳುವ ಭಯದಿಂದ ಯಾರೂ ಮಾತನಾಡುವುದಿಲ್ಲ. ನಾನು ಮಾನಸಿಕವಾಗಿ ನೊಂದಿದ್ದೇನೆ. ಈ ರೀತಿಯ ಪರಿಸ್ಥಿತಿಯ ಯಾವ ಮಹಿಳೆಗೂ ಬರಬಾರದು ಎಂದು ಆಕೆ ಹೇಳಿದರು.
ದೂರು..:
‘ಬ್ಯೂಟಿಪಾರ್ಲರ್ ಹೆಸರಿನಲ್ಲಿ ಈ ಬ್ಯೂಟಿಪಾರ್ಲರ್ನಲ್ಲಿ ಮಸಾಜ್ ದಂಧೆ ನಡೆಸಲಾಗುತ್ತಿರುವುದು ಸಂತ್ರಸ್ತೆ ಮಹಿಳೆಯ ಹೇಳಿಕೆಯಿಂದ ವ್ಯಕ್ತವಾಗಿದೆ. ಹೊಟ್ಟೆಪಾಡಿಗೆ ಕೆಲಸಕ್ಕೆ ಬರುವ ಮಹಿಳೆ ಹಾಗೂ ಯುವತಿಯರಿಗೆ ಬೆದರಿಕೆಯ ಮೂಲಕ ಮಸಾಜ್ ದಂಧೆ ನಡೆಸಲಾಗುತ್ತಿದೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ’ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಹೇಳಿದರು.