ಅಮ್ಮೆಂಬಳ ಬಾಳಪ್ಪ ರಸ್ತೆ ನಾಮಕರಣದ ಫಲಕ ಅನಾವರಣ
ಮಂಗಳೂರು: ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘ ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಸಹಭಾಗಿತ್ವದಲ್ಲಿ ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಬಂಟ್ವಾಳ ಪ್ರಾಯೋಜಕತ್ವದಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವನದ ಮುಂಭಾಗದ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ತೆರಳುವ ರಸ್ತೆಗೆ ಸ್ವಾತಂತ್ರ್ಯ ಹೋರಾಟಗಾರ ಡಾ. ಅಮ್ಮೆಂಬಳ ಬಾಳಪ್ಪ ರಸ್ತೆ ನಾಮಕರಣದ ಫಲಕ ಅನಾವರಣ ಮತ್ತು ಅಭಿನಂದನಾ ಸಮಾರಂಭ ಆ.10ರಂದು ನಡೆಯಲಿದೆ.
ಬೆಳಗ್ಗೆ 9.30ಕ್ಕೆ ಸ್ಪೀಕರ್ ಯು.ಟಿ. ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್ ನಾಮ-ಲಕ ಅನಾವರಣ ಮಾಡುವರು. ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘದ ಕೋರಿಕೆಯಂತೆ ರಾಜ್ಯ ಸರಕಾರ ಪುರಭವನದ ಮುಂಭಾಗದ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ತೆರಳುವ ರಸ್ತೆಗೆ ಸ್ವಾತಂತ್ರ್ಯ ಹೋರಾಟಗಾರ ಡಾ. ಅಮ್ಮೆಂಬಳ ಬಾಳಪ್ಪ ರಸ್ತೆ ಎಂದು ನಾಮಕರಣ ಮಾಡಿ ಆದೇಶಿಸಿದೆ ಎಂದು ಮಾತೃಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಳಗ್ಗೆ 10.30ಕ್ಕೆ ಪೊಲೀಸ್‌ಲೇನ್ ನಾಸಿಕ್ ಬಿ.ಎಚ್. ಬಂಗೇರ ಸಭಾಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಸಾನಿಧ್ಯ ವಹಿಸುವರು. ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಕಿಶೋರ್‌ಕುಮಾರ್ ಪುತ್ತೂರು, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಮಂಗಳೂರು ನಗರ ಪೊಲೀಸ್ ಆಯುಕ್ತ ಸುಽರ್‌ಕುಮಾರ್ ರೆಡ್ಡಿ, ಮನಪಾ ಆಯುಕ್ತ ರವಿಚಂದ್ರ ನಾಯಕ್, ಗಣ್ಯರು ಭಾಗವಹಿಸುವರು. ಈ ವೇಳೆ ಶಾಸಕ ವೇದವ್ಯಾಸ ಕಾಮತ್, ಮಾಜಿ ಮೇಯರ್ ದಿವಾಕರ ಪಾಂಡೇಶ್ವರ ಅವರನ್ನು ಅಭಿನಂದಿಸಲಾಗುವುದು. ಬೆಳಗ್ಗೆ 10ರಿಂದ ಮಂಗಳೂರು ಸನಾತನ ನಾಟ್ಯಾಲಯದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.
ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘದ ಉಪಾಧ್ಯಕ್ಷ ನಾರಾಯಣ ಸಿ. ಪೆರ್ನೆ, ಪ್ರಧಾನ ಕಾರ್ಯದರ್ಶಿ ಕುಶಾಲಪ್ಪ ಕುಲಾಲ್, ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘ ಅಧ್ಯಕ್ಷ ಸುರೇಶ್ ಕುಲಾಲ್, ಶ್ರೀದೇವಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಸದಾಶಿವ ಕುಲಾಲ್, ಶ್ರೀ ವೀರನಾರಾಯಣ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಸುಂದರ ಕುಲಾಲ್, ಪ್ರದೀಪ್ ಅತ್ತಾವರ ಉಪಸ್ಥಿತರಿದ್ದರು.