ಕರಾವಳಿಯಲ್ಲಿ 48 ಗಂಟೆಗಳ ಕಾಲ ರೆಡ್ ಅಲರ್ಟ್
ಮಂಗಳೂರು: ಕರಾವಳಿಯಲ್ಲಿ ಭಾನುವಾರ ಮೋಡಕವಿದ ವಾತಾವರಣವಿದ್ದು, ಇಡೀ ದಿನ ಬಿಟ್ಟುಬಿಟ್ಟು ಸಾಧಾರಣ ಮಳೆಯಾಗಿದೆ. ಮುಂದಿನ 48 ಗಂಟೆಗಳ ಕಾಲ ಉತ್ತಮ ಮಳೆ ಸಧ್ಯತೆಯಿರುವುದರಿಂದ ಹವಾಮಾನ ಇಲಾಖೆ ಸೋಮವಾರ ಹಾಗೂ ಮಂಗಳವಾರ ರೆಡ್ ಅಲರ್ಟ್ ಘೋಷಿಸಿದೆ.
ಗ್ರಾಮೀಣ ಭಾಗದಲ್ಲಿ ಶನಿವಾರ ರಾತ್ರಿ ಇಡೀ ಸುರಿದ ಸಾದಾರಣ ಮಳೆ ಭಾನುವಾರ ಬೆಳಗ್ಗಿನ ವರೆಗೂ ಮುಂದುವರಿದಿತ್ತು. ದ.ಕ. ಜಿಲ್ಲೆಯಾದ್ಯಂತ ಮಧ್ಯಾಹ್ನ ವರೆಗೆ ಮೋಡ, ಮಳೆ ಕಂಡುಬಂದಿತ್ತು. ಮಧ್ನಾಹ್ನ ಮಳೆ ದೂರವಾದರೂ ಮೋಡ ಇದ್ದೇ ಇತ್ತು. ಮಂಗಳೂರಿನಲ್ಲಿ ಮಧ್ಯಾಹ್ನ ಹಾಗೂ ಸಂಜೆ ಉತ್ತಮ ಮಳೆಯಾಗಿದೆ. ಸೋಮವಾರ ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜೆಲ್ಲೆಗಳಾದ್ಯಂತ ಮಧ್ಯಾಹ್ನ ನಂತರ, ಸಂಜೆ, ರಾತ್ರಿ ಉತ್ತಮ ಮಳೆಯ ಮುನ್ಸೂಚೆನೆ ಇದೆ. ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಅಲ್ಲಲ್ಲಿ ಭಾರಿ ಮಳೆಯ ಸಾಧ್ಯತೆಗಳಿವೆ. ಈಗಿನಂತೆ ಆಗಸ್ಟ್ 20ರ ತನಕ ಮಳೆ ಮುಂದುವರಿಯುವ ಮುನ್ಸೂಚೆನೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಂಜು ಕವಿತ ವಾತಾವರಣ:
ಮಂಗಳೂರಿನಲ್ಲಿ ದಿನದ ಗರಿಷ್ಠ ತಾಪಮಾನ 29.3 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 23.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಸಂಜೆ ವೇಳೆ ನಗರ ಸುತ್ತಮುತ್ತ ಮಂಜುಕವಿದ ವಾತಾವರಣ ಕಂಡುಬಂದಿದೆ.ಗ್ರಾಮೀಣ ಭಾಗದಲ್ಲಿ ರಾತ್ರಿ ವೇಳೆ ಮಂಜು ಆವರಿಸಿದ್ದು, ರಾತ್ರಿ ಹಾಗೂ ಬೆಳಗ್ಗೆ ಮಳೆಯ ಜೊತೆಗೆ ಚಳಿಯಿಂದ ಕೂಡಿದ ವಾತಾವರಣ ಕಂಡುಬಂದಿದೆ.
ಅರಬ್ಬಿ ಸಮುದ್ರದಲ್ಲಿ ಗಾಳಿ- ಎಚ್ಚರಿಕೆ
ದ.ಕ. ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗಿನವರೆಗೆ 46 ಮಿಲಿ ಮೀಟರ್ ಮಳೆ ದಾಖಲಾಗಿದೆ. ಬೆಳ್ತಂಗಡಿಯಲ್ಲಿ 60.4 ಮಿ.ಮೀ, ಬಂಟ್ವಾಳ 39.5 ಮಂಗಳೂರು 23.1, ಪುತ್ತೂರು 28.9, ಸುಳ್ಯ 43.4, ಮೂಡುಬಿದಿರೆ 27.8, ಕಡಬ 65.5, ಮೂಲ್ಕಿ 21.4, ಉಳ್ಳಾಲ 18.4 ಮಳೆಯಾಗಿದೆ. ಅರಬ್ಬಿ ಸಮುದ್ರದಲ್ಲಿ ಗಾಳಿಯ ಪ್ರಮಾಣ ಗಂಟೆಗೆ 40ಕಿ.ಮೀ ನಿಂದ 45ಕಿ.ಮೀ ವರೆಗೆ ಹೆಚ್ಚಳವಾಗಿರುವುದರಿಂದ ಮೀನುಗಾರರಿಗೆ ಹಾಗೂ ಸಮುದ್ರ ಆಸುಪಾಸಿನ ನಿವಾಸಿಗಳು ಎಚ್ಚರಿಕೆಯಲ್ಲಿರುವಂತೆ ಜಿಲ್ಲಾಡಳಿತ ಸೂಚಿಸಿದೆ. ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಭಾನುವಾರ ಗರಿಷ್ಠ 30.5 ಡಿಗ್ರಿ ಸೆಲ್ಸಿಯಸ್, ಕನಿಷ್ಠ 22.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಸೋಮವಾರ ವೇಳೆ ತುಸು ಏರಿಳಿಕೆಯಾಗುವ ಸಾಧ್ಯತೆ ಇದೆ.