ಕರಾವಳಿಯಲ್ಲಿ ಆರೆಂಜ್ ಅಲರ್ಟ್
Thursday, August 14, 2025
ಮಂಗಳೂರು: ಕರಾವಳಿಯಲ್ಲಿ ಗುರುವಾರ ಹಗುರದಿಂದ ಉತ್ತಮ ಮಳೆಯಾಗಿದೆ. ದ.ಕ. ಜಿಲ್ಲೆಯಾದ್ಯಂತ ಇಡೀ ದಿನ ಬಿಡುವಿಲ್ಲದೆ ಮಳೆ ಸುರಿಯತೊಡಗಿತ್ತು. ಕೆಲವು ದಿನಗಳಿಂದ ಮಳೆ ದೂರವಾಗಿದ್ದು, ಈಗ ಮತ್ತೆ ಎಲ್ಲೆಡೆ ಮಳೆಯ ವಾತಾವರಣ ಕಂಡುಬಂದಿದೆ. ಹವಾಮಾನ ಇಲಾಖೆ ಗುರುವಾರ ಇಲ್ಲಿ ಎಲ್ಲೋ ಅಲರ್ಟ್ ಘೋಷಿಸಿತ್ತು. ಆ.15ರಂದು ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ದ.ಕ. ಜಿಲ್ಲೆಯಲ್ಲಿ ಗುರುವಾರ ನಸುಕಿನ ಜಾವದಿಂದಲೇ ಜಿಟಿಜಿಟಿ ಮಳೆ ಕಾಣಿಸಿತ್ತು. ಬೆಳಗ್ಗೆ ಸ್ವಲ್ಪ ಹೊತ್ತು ಮಳೆಗೆ ಬಿಡುವು ಹೊರತುಪಡಿಸಿದರೆ ಇಡೀ ದಿನ ಹಗುರದಿಂದ ಮಳೆ ಸುರಿಯತೊಡಗಿತ್ತು. ಗ್ರಾಮಾಂತರ ಪ್ರದೇಶದಲ್ಲಿ ಅಷ್ಟಾಗಿ ನಿರಂತರ ಮಳೆಯಾಗದಿದ್ದರೂ ಮಂಗಳೂರಿನಲ್ಲಿ ಸಂಜೆ ವರೆಗೆ ಬಿಡದೆ ಮಳೆ ಸುರಿದಿದೆ. ಸಂಜೆ ಬಳಿಕ ಮಳೆ ಕಡಿಮೆಯಾಗಿದ್ದು, ಮಳೆಯ ವಾತಾವರಣ ಮುಂದುವರಿದಿತ್ತು. ದ.ಕ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗಿನ ಮಾಹಿತಿಯಂತೆ ಕಳೆದ 24 ಗಂಟೆಗಳಲ್ಲಿ 57.1ಮಿಮಿ ಮಳೆ ದಾಖಲಾಗಿತ್ತು.
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜೆಲ್ಲೆಗಳಾದ್ಯಂತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಮಧ್ಯ ಬಿಡುವಿನ ಅವಧಿ ಕಡಿಮೆ ಇರಲಿದೆ. ಈಗಿನಂತೆ ಆಗಸ್ಟ್ 17ರಿಂದ 20ರ ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಸ್ವಲ್ಪ ಹೆಚ್ಚಿರುವ ಸಾಧ್ಯತೆಗಳಿವೆ.ನಂತರ ಬಿಸಿಲಿನ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.