ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಬಯಲುಗೊಳಿಸಲು ಎನ್‌ಐಎ, ಸಿಬಿಐ, ಇಡಿ ತನಿಖೆ ನಡೆಸಬೇಕು: ಹರಿಕೃಷ್ಣ ಬಂಟ್ವಾಳ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯನ್ನು ಕೇರಳದ ಮಲಪ್ಪುರಂ ಮಾಡಲು ಮುಸ್ಲಿಂ ಲೀಗ್ ರಹಸ್ಯ ಯೋಜನೆ ರೂಪಿಸಿದೆ. ಅದರ ಭಾಗವಾಗಿ ಹಿಂದುಗಳ ಶ್ರದ್ಧಾಕೇಂದ್ರ ಧರ್ಮಸ್ಥಳವನ್ನು ನಾಶಮಾಡಲು ಷಡ್ಯಂತ್ರ ಮಾಡಲಾಗಿದೆ. ಧರ್ಮಸ್ಥಳದ ವಿರುದ್ಧ ರೂಪಿಸಿರುವ ಷಡ್ಯಂತ್ರವನ್ನು ಬಯಲುಗೊಳಿಸಲು ಎನ್‌ಐಎ, ಸಿಬಿಐ, ಇಡಿ ತನಿಖೆ ನಡೆಸಬೇಕು ಎಂದು ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಆಗ್ರಹಿಸಿದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಂ ಅಭ್ಯರ್ಥಿಗೆ ಅವಕಾಶ ನೀಡಲು ಮುಸ್ಲಿಂಲೀಗ್ ಪಕ್ಷವು ಕಾಂಗ್ರೆಸ್ ಜತೆಗೂಡಿದೆ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳದ ಹೆಸರು ಕೆಡಿಸಲಾಗುತ್ತಿದೆ. ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ ರೂಪಿಸುವಲ್ಲಿ ಕೇರಳದ ಜಿಹಾದಿ ಶಕ್ತಿಗಳು ಹಾಗೂ ತಮಿಳುನಾಡಿನ ಸಂಸದರೊಬ್ಬರ ಕೈವಾಡವಿದ್ದು, ಎರಡೂ ರಾಜ್ಯಗಳವರ ಒತ್ತಡದಿಂದ ಧರ್ಮಸ್ಥಳದಲ್ಲಿ ಅನಾಮಿಕನ ದೂರಿನ ತನಿಖೆಗೆ ಎಸ್‌ಐಟಿ ರಚಿಸಲಾಗಿದೆ. ಅನನ್ಯಾ ಭಟ್ ಎಂಬ ಹುಡುಗಿಯೇ ಇಲ್ಲ ಎಂಬ ಮಾಹಿತಿಗಳಿವೆ. ಜತೆಗೆ ಸಮೀರ್ ಎಂಬ ಯೂಟ್ಯೂಬರ್‌ಗೆ ವಿದೇಶದಿಂದ ಹಣ ಬಂದಿದೆ. ಸಮೀರ್‌ನನ್ನು ಬಂಧಿಸಿ, ಮಂಪರು ಪರೀಕ್ಷೆ ನಡೆಸಬೇಕು. ಈ ಎಲ್ಲ ಷಡ್ಯಂತ್ರವನ್ನು ಬಹಿರಂಗಗೊಳಿಸಲು ಎನ್‌ಐ, ಸಿಬಿಐ, ಇಡಿ ತನಿಖೆಯ ಅಗತ್ಯವಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಧರ್ಮಸ್ಥಳದ ದೂರುದಾರ ಅನಾಮಿಕ ಆರಂಭದಲ್ಲಿ ಮಾನವನ ತಲೆಬುರುಡೆಯನ್ನು ಎಲ್ಲಿಂದ ತಂದಿದ್ದಾನೆ ಎಂಬ ಬಗ್ಗೆ ಇದುವರೆಗೆ ತನಿಖೆ ಆಗಿಲ್ಲ. ಈ ಬಗ್ಗೆ ತನಿಖೆ ನಡೆಸಬೇಕು. ಧರ್ಮಸ್ಥಳದಲ್ಲಿ ಉತ್ಖನಕ್ಕೆ ನ್ಯಾಯಾಲಯ ಆದೇಶ ನೀಡಿದೆಯೇ ಎಂಬುದನ್ನು ತಿಳಿಸಬೇಕು. ಉಳ್ಳಾಲದ ಧಾರ್ಮಿಕ ಸ್ಥಳದಲ್ಲಿ ಉತ್ಖನನಕ್ಕೆ ಒತ್ತಾಯಿಸಿದರೆ ಕಾಂಗ್ರೆಸ್ ಸರಕಾರ ಅನುಮತಿ ನೀಡುತ್ತದೆಯೇ ಎಂದು ಅವರು ಪ್ರಶ್ನಿಸಿದರು.
ಚಿಕ್ಕಮಗಳೂರಿನ ದತ್ತಪೀಠದಲ್ಲಿ ಗೋರಿಗಳಿವೆ ಎಂದು ಹೇಳಲಾಗುತ್ತಿದೆ. ಅವು ದೇಶವನ್ನು ದರೋಡೆ ಮಾಡಲು ಬಂದವರ ಗೋರಿಗಳು ಎಂಬ ಸಂಶಯವಿದೆ. ಈ ಬಗ್ಗೆ ದತ್ತಪೀಠದಲ್ಲಿ ಉತ್ಖನನ ನಡೆಸಿ ರಾಜ್ಯ ಸರಕಾರ ಜನರಿಗೆ ಸತ್ಯ ತಿಳಿಸಬೇಕು ಎಂದರು.
ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರು ಸೋಲಲು ದ.ಕ. ಜನರು ಕಾರಣ ಎಂಬ ಬಿ.ಕೆ. ಹರಿಪ್ರಸಾದ್ ಅವರ ಹೇಳಿಕೆ ಖಂಡನೀಯ. ಜನಾರ್ದನ ಪೂಜಾರಿ ಅವರು ಸೋಲಲು ಕಾಂಗ್ರೆಸ್ ಪಕ್ಷವೇ ಕಾರಣ. ಅವರು ಚುನಾವಣಗೆ ಸ್ಪರ್ಧಿಸಿದ್ದ ವೇಳೆ ಕಾಂಗ್ರೆಸ್‌ನಲ್ಲಿ ಕೆಲ ಗುಂಪುಗಳಿದ್ದವು. ಆ ಗುಂಪಿನ ಮುಖಂಡರಿಂದಲೇ ಪೂಜಾರಿ ಅವರಿಗೆ ಸೋಲಾಯಿತು ಎಂದು ಹೇಳಿದರು.
ಅವಮಾನ ಖಂಡನೀಯ..
ಧರ್ಮಸ್ಥಳದ ವಿಚಾರದಲ್ಲಿ ಕೇಂದ್ರದ ಮಾಜಿ ಸಚಿವ ಜನಾರ್ದನದ ಪೂಜಾರಿ ಅವರು ನೀಡಿದ ಹೇಳಿಕೆಗೆ ಸಂಬಂಽಸಿ ಪುತ್ತೂರಿನ ಕಾಂಗ್ರೆಸ್ ಮುಖಂಡ ಮಹಮ್ಮದ್ ಆಲಿ ಅವರು ನಾರಾಯಣಗುರು ಅವರನ್ನು ಅವಮಾನಿಸಿರುವುದು ಖಂಡನೀಯ. ಕಾಂಗ್ರೆಸ್‌ನಲ್ಲಿ ನಾರಾಯಣಗುರು ಅವರ ಬಗ್ಗೆ ಮಾತನಾಡುವವರು ಈ ಕುರಿತು ಧ್ವನಿ ಎತ್ತಲಿ. ನಾರಾಯಣಗುರು ಅವರನ್ನು ಕಾಂಗ್ರೆಸ್ ಗೌರವಿಸುವುದೇ ಹೌದಾದರೆ ಮಹಮ್ಮದ್ ಆಲಿ ಅವರನ್ನು ಕಾಂಗ್ರೆಸ್‌ನಿಂದ ಉಚ್ಚಾಟಿಸಲಿ ಎಂದು ಹೇಳಿದರು.
ಜನಾರ್ದನ ಪೂಜಾರಿ ಅವರು ಧರ್ಮಸ್ಥಳದ ಪಾವಿತ್ರ್ಯತೆ ಧಕ್ಕೆ ಉಂಟುಮಾಡುತ್ತಿರುವುದನ್ನು ತಡೆಯಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ ಅವರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಮುಸ್ಲಿಂ, ಕ್ರೈಸ್ತ ಮತೀಯರಿಗೆ ಪೂಜಾರಿ ಅವರು ಅವಮಾನ ಮಾಡಿಲ್ಲ ಎಂದರು.
ಬಿಜೆಪಿ ಮಹಿಳಾ ಮೋರ್ಚಾ ದ.ಕ. ಜಿಲ್ಲಾಧ್ಯಕ್ಷೆ ಮಂಜುಳಾ ರಾವ್, ಒಬಿಸಿ ಮೋರ್ಚಾ ದ.ಕ. ಜಿಲ್ಲಾಧ್ಯಕ್ಷ ಮಹೇಶ್ ಜೋಗಿ, ಬಿಜೆಪಿ ಜಿಲ್ಲಾ ವಕ್ತಾರರಾದ ರಾಜಗೋಪಾಲ ರೈ, ಅರುಣ್ ಜಿ. ಶೇಟ್ ಉಪಸ್ಥಿತರಿದ್ದರು.