ಮಂಗಳೂರಲ್ಲಿ ದಿನವಿಡೀ ಟ್ರಾಫಿಕ್ ಜಾಮ್
Thursday, August 14, 2025
ಮಂಗಳೂರು: ಮಂಗಳೂರು ನಗರದಲ್ಲಿ ಗುರುವಾರ ದಿನವಿಡೀ ಟ್ರಾಫಿಕ್ ಜಾಮ್ ತಲೆದೋರಿದೆ. ಬೆಳಗ್ಗಿನಿಂದ ಆರಂಭವಾದ ಸಂಚಾರ ದಟ್ಟಣೆ ರಾತ್ರಿ ವರೆಗೂ ಮುಂದುವರಿದೇ ಇತ್ತು. ಇದರಿಂದಾಗಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು.
ಶುಕ್ರವಾರ ಮೊದಲನೇ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ. ಹೀಗಾಗಿ ಮಂಗಳೂರು ನಗರಕ್ಕೆ ಸ್ವಂತ ವಾಹನದಲ್ಲಿ ಖರೀದಿಗೆ ಆಗಮಿಸುವವರ ಸಂಖ್ಯೆ ವಿಪರೀತವಾಗಿತ್ತು. ಒಂದೆಡೆ ಖರೀದಿಯ ಭರಾಟೆಯಾದರೆ, ಇನ್ನೊಂದೆಡೆ ಒಮ್ಮೆಲೇ ಸ್ವಂತ ವಾಹನಗಳು ನಗರ ಪ್ರವೇಶಿಸಿದ ಕಾರಣ ಮಂಗಳೂರಿನ ಪಿವಿಎಸ್, ಬಂಟ್ಸ್‌ಹಾಸ್ಟೆಲ್, ಎಂ.ಜಿ.ರೋಡ್, ಕಂಕನಾಡಿ, ಪಂಪ್‌ವೆಲ್, ಬಿಜೈ, ಕುದ್ರೋಳಿ, ಬಲ್ಮಠ ಸೇರಿದಂತೆ ವಿವಿಧ ಕಡೆಗಳಲ್ಲಿ ಟ್ರಾಫಿಕ್ ಜಾಮ್ ತಲೆದೋರಿತ್ತು.
ಅರ್ಧ ಗಂಟೆಯಿಂದ ಒಂದು ಗಂಟೆ ವರೆಗೂ ಪಂಪ್‌ವೆಲ್, ಕಂಕನಾಡಿಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಹಗಲು ಹೊತ್ತು ಸುರಿದ ಮಳೆಯಿಂದ ಕೂಡ ಸಂಚಾರ ದಟ್ಟಣೆ ಮತ್ತಷ್ಟು ಬಿಗಡಾಯಿಸಿತು. ಶಾಲಾ ಕಾಲೇಜು ಮತ್ತು ಕಚೇರಿ ಕೆಲಸದಿಂದ ನಿರ್ಗಮಿಸುವವರು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದರು. ವಾಹನಗಳು ಒಳ ರಸ್ತೆಗಳಲ್ಲಿ ಸಂಚರಿಸಲು ಸಹ ಪರದಾಟ ನಡೆಸಬೇಕಾಯಿತು. ದಿನಪೂರ್ತಿ ಸಂಚಾರಿ ಪೊಲೀಸರು ಸುಗಮ ವಾಹನ ಸಂಚಾರಕ್ಕೆ ಹರಸಾಹಸ ಪಟ್ಟರು.





