
ಇಸ್ಕಾನ್‌ನಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ
ಮಂಗಳೂರು: ಕುಳಾಯಿಯ ಕೋಡಿಕೆರೆ ಇಸ್ಕಾನ್ ಶ್ರೀ ರಾಧಾ ಗೋವಿಂದ ದೇವಸ್ಥಾನದ ವತಿಯಿಂದ 9 ದಿನಗಳ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಆ.9ರಿಂದ 17ರ ವರೆಗೆ ಜರುಗಲಿದೆ ಎಂದು ದೇವಸ್ಥಾನದ ಅಧ್ಯಕ್ಷ ನಾಮನಿಷ್ಠ ದಾಸ್ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ಸವದ ಪ್ರಮುಖ ಆಕರ್ಷಣೆಯಾಗಿ ದೇವಸ್ಥಾನದಲ್ಲಿ ಭಗವಾನ್ ಶ್ರೀಕೃಷ್ಣನ ಭವ್ಯ ಅಭಿಷೇಕ, ರಥೋತ್ಸವ, ಡೋಲೋತ್ಸವ, ಗೋ ಪೂಜೆ, ಪ್ರವಚನಗಳು, ಮಧ್ಯರಾತ್ರಿ ಆರತಿ, ಭಕ್ತಿ ಸಂಕೀರ್ತನೆ, ನಾಟಕಗಳು, ಮಕ್ಕಳ ಸ್ಪರ್ಧೆಗಳು, ಪ್ರಸಾದ ವಿತರಣೆಗಳು ನಡೆಯಲಿವೆ ಎಂದರು.
ಆ.9ರಂದು ಬೆಳಗ್ಗೆ 8ಕ್ಕೆ ಬಲರಾಮ ಜಯಂತಿ, ಸಂಜೆ 4 ಗಂಟೆಗೆ ಸುರತ್ಕಲ್ ಜಂಕ್ಷನ್‌ನಿಂದ ಇಸ್ಕಾನ್ ದೇವಸ್ಥಾನದ ವರೆಗೆ ರಥೋತ್ಸವ, ಆ.10ರಿಂದ 15ರ ವರೆಗೆ ಪ್ರತಿದಿನ ಸಂಜೆ ಡೋಲೋತ್ಸವ, ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳು ನಡೆಯಲಿದೆ. ಆ.16ರಂದು ಸಂಜೆ 6ರಿಂದ ಕೃಷ್ಣ ಜನ್ಮಾಷ್ಟಮಿ ಮಧ್ಯರಾತ್ರಿಯ ತನಕ ಸಾಗಲಿದೆ. ಆ.17ರಂದು ಬೆಳಗ್ಗೆ 10ಕ್ಕೆ ಶ್ರೀ ಪ್ರಭುಪಾದರ ವ್ಯಾಸ ಪೂಜೆ ನಡೆಯಲಿದೆ ಎಂದರು.
ಗೀತಾ ಅಧ್ಯಯನಕ್ಕೆ ಕಾಲೇಜು: ಕೋವಿಡ್ ಸಮಯದಲ್ಲಿ ಆನ್ಲೈನ್ನಲ್ಲಿ ಗೀತಾ ಅಧ್ಯಯನ ಕೋರ್ಸ್ ಆರಂಭಿಸಲಾಗಿತ್ತು. ಮೂಲಕ 13 ಭಾಷೆಯಲ್ಲಿ ಹತ್ತು ಲಕ್ಷದಷ್ಟುಭಕ್ತರು ಇದರಲ್ಲಿ ಭಾಗವಹಿಸಿದ್ದರು. ಅವರು ನೀಡಿದ ದಾನದ ಮೂಲಕ ಕುಳಾಯಿಯ ಶ್ರೀ ರಾಧಾ ಗೋವಿಂದ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ಇದೀಗ ಮುಂದುವರಿದು 9 ಕೋ.ರೂ. ವೆಚ್ಚದಲ್ಲಿ ನಿವಾಸೀಯ ಗೀತಾ ಕಾಲೇಜು ನಿರ್ಮಾಣವಾಗುತ್ತಿದ್ದು, ಈಗಾಗಲೇ 1.5 ಕೋ.ರೂ. ವೆಚ್ಚದಲ್ಲಿ ಕಾಮಗಾರಿ ನಡೆದಿದೆ ಎಂದರು.
ದೇವಸ್ಥಾನದ ಪ್ರಮುಖರಾದ ಶ್ರೀವಾಸ ದಾಸ, ಧರಣೇಶ್ವರಿ ಮಾತಾಜಿ ಹಾಗೂ ಸದಾಕೃಷ್ಣ ದಾಸ ಉಪಸ್ಥಿತರಿದ್ದರು.