ಇತಿಹಾಸ ತಿಳಿಯದವನು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ: ಡಾ. ಉದಯ್ ಕುಮಾರ್ ಇರ್ವತ್ತೂರು

ಇತಿಹಾಸ ತಿಳಿಯದವನು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ: ಡಾ. ಉದಯ್ ಕುಮಾರ್ ಇರ್ವತ್ತೂರು


ಮಂಗಳೂರು: ಸಹಕಾರ ಚಳುವಳಿಗಳಿಂದ ಇಂದು ಸಹಕಾರಿ ಸಂಸ್ಥೆ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು. ಈ ಚಳುವಳಿಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಆಗಬೇಕು. ಅದಕ್ಕಾಗಿ ಅಧ್ಯಾಯನ ನಡೆಸಿ ಇತಿಹಾಸವನ್ನು ಸಂಸ್ಕರಿಸಬೇಕು. ಇತಿಹಾಸ ತಿಳಿಯದವನು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ ಎಂದು ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ ವಿಶ್ರಾಂತ ಪ್ರಾಂಶುಪಾಲ ಡಾ. ಉದಯ್ ಕುಮಾರ್ ಇರ್ವತ್ತೂರು ಹೇಳಿದರು.


ಅವರು ಇಂದು ನಗರದ ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯುನಿಯನ್ ಲಿಮಿಟೆಡ್, ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಸಹಕಾರಿ ಪಿತಾಮಹ ದಿ. ಮೊಳಹಳ್ಳಿ ಶಿವರಾಮ್ ಅವರ ೧೪೫ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಉಪನ್ಯಾಸ ನೀಡಿದರು.


ದ.ಕ. ಜಿಲ್ಲೆಗೆ ಗಾಂಧಿಜೀ ಅವರು ಮೂರು ಬಾರಿ ಭೇಟಿ ನೀಡಿದ್ದಾರೆ. ಅವರು ಸ್ವದೇಶಿ, ಸಹಕಾರ ಹಾಗೂ ಸಮಾಜಿಕ ಪರಿವರ್ತನೆಯ ಮಂತ್ರವನ್ನು ಇಟ್ಟುಕೊಂಡು ದೇಶಾಧ್ಯಂತ ಸಂಚರಿಸಿದರು. ಆದರೆ ಮೊಳಹಳ್ಳಿ ಶಿವರಾಮ್ ಅವರು ಈ ಮೂರನ್ನು ಮೊದಲೇ ಮಾಡಿದ್ದರು. 1909ರಲ್ಲಿಯೇ ಸಹಕಾರ ಕ್ಷೇತ್ರವನ್ನು ಕಟ್ಟಿದರು. ಮಾತ್ರವಲ್ಲ ಇದರೊಂದಿಗೆ ಶಿಕ್ಷಣ ಹಾಗೂ ಸ್ಥಳೀಯ ಆಡಳಿತದ ಬಗ್ಗೆಯೂ ಒತ್ತು ನೀಡಿದ್ದರು ಎಂದು ಹೇಳಿದರು.

ಕೆಳಮಟ್ಟದಲ್ಲಿಯೇ ಸಹಕಾರ ಚಳುವಳಿಯನ್ನು ನಡೆಸುವ ನಿಟ್ಟಿನಲ್ಲಿ ಶಾಲೆ-ಕಾಲೇಜುಗಳಲ್ಲಿ ಸಹಕಾರಿ ಸ್ಟೇಷನರಿ ಲೈಬ್ರರಿಯನ್ನು ಸ್ಥಾಪಿಸಿದ ಅವರು ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಆಹಾರ ಸಮಸ್ಯೆ ಉಂಟಾದ ಸಂದರ್ಭದಲ್ಲಿ ಆಹಾರ ಕಿಟ್ ವಿತಿರಿಸುವಂತಹ ಮಹಾನ್ ಕಾರ್ಯವನ್ನು ಮಳಹಳ್ಳಿ ಶಿವರಾಮ್ ಅವರು ಮಾಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ, ಕ್ಯಾಂಪ್ಕೋದ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ನಮ್ಮ ಸಹಕಾರಿ ಕ್ಷೇತ್ರ ಇಷ್ಟು ಎತ್ತರಕ್ಕೆ ಬೆಳೆಯಲು ಮಳಹಳ್ಳಿ ಶಿವರಾಮ್ ಅವರು ಹಾಕಿಕೊಟ್ಟ ಅಡಿಪಾಯ ಹಾಗೂ ಮಾರ್ಗದರ್ಶನವೇ ಕಾರಣ. ಶಿವರಾಮ್ ಅವರನ್ನು ಶಿಕ್ಷಣ ಕ್ಷೇತ್ರ ಮತ್ತು ಸ್ಥಳೀಯ ಆಡಳಿತದವರು ಮರೆತಿದ್ದಾರೆ. ಆದರೆ ಪ್ರತೀ ವರ್ಷ ನಾವು ಮಾತ್ರ ಅವರನ್ನು ನೆನಪಿಸಿಕೊಂಡು, ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದೇವೆ ಎಂದು ಹೇಳಿದರು.

ಅವಿಭಾಜಿತ ದ.ಕ. ಜಿಲ್ಲೆಯಲ್ಲಿ ಕಳೆದ 28 ವರ್ಷಗಳಿಂದ ಸಾಲ ಪಡೆದ ರೈತರು ಶೇ.100 ರಷ್ಟು ಸಾಲ ಮರು ಪಾವತಿ ಮಾಡುತ್ತಿದ್ದಾರೆ. ರಾಜ್ಯದಲ್ಲಿಯೇ ಮರುಪಾವತಿಯಲ್ಲಿ ಮೊದಲ ಸ್ಥಾನ ಇರುವುದು ನಮ್ಮ ಅವಿಭಾಜಿತ ದ.ಕ. ಜಿಲ್ಲೆ. ನಮ್ಮ ಜಿಲ್ಲೆಯಲ್ಲಿ ಯಾರೊಬ್ಬ ರೈತರೂ ಕೃಷಿಗೆ ಸಹಕಾರ ಸಿಗಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡವರು ಒಬ್ಬರೂ ಇಲ್ಲ ಎಂದರು.

ನಮ್ಮ ಜಿಲ್ಲೆ ವಾಣಿಜ್ಯ ಬ್ಯಾಂಕ್‌ಗಳ ತವರೂರು. ಆದರೆ ಈಗ ಎಲ್ಲಾ ಬ್ಯಾಂಕ್‌ಗಳನ್ನು ವಿಲೀನವಾಗಿವೆ. ಆದರೆ ಸಹಕಾರಿ ಶಾಖೆಗಳು ಜನರ ಬಳಿಗೆ ಹೋಗಿ ಸೇವೆ ನೀಡುತ್ತಿವೆ. ಕೃಷಿಗೆ ಸಾಲ ಕೊಡುವುದರಿಂದ ನಮಗೆ ಶೇ.2 ರಷ್ಟು ನಷ್ಟವಾಗುತ್ತದೆ. ಆದರೆ ನಾವು ಮೊದಲು ಕೃಷಿಗೆ ಸಾಲ ನೀಡಿ ಬಳಿಕ ವಾಣಿಜ್ಯ ಸಾಲ ನೀಡಿ ಸರಿದೂಗುತ್ತಿದ್ದೇವೆ ಎಂದ ಅವರು ವಾಣೀಜ್ಯ ಬ್ಯಾಂಕ್‌ನಲ್ಲಿ ಭಾಷೆಯೂ ಬರುವುದಿಲ್ಲ. ಸಂಸ್ಕೃತಿಯೂ ಇಲ್ಲ ಎಂದು ಲೇವಡಿ ಮಾಡಿದರು.

ಈ ಸಂದರ್ಭದಲ್ಲಿ ಬ್ಯಾಂಕ್ ವತಿಯಿಂದ ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಸನ್ಮಾನಿಸಲಾಯಿತು. ಬ್ಯಾಂಕಿನ ಮಾಸ ಪತ್ರಿಕೆ ‘ಕರಾವಳಿ ಸಹಕಾರ’ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಬಳಿಕ ಸಂಪಾದಕರಿಗೆ ಸನ್ಮಾನಿಸಲಾಯಿತು.

ಬ್ಯಾಂಕಿನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ದ.ಕ. ಜಿಲ್ಲಾ ಸಹಕಾರಿ ಯುನಿಯನ್ ಲಿ. ಮಂಗಳೂರಿನ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೋಟ್ಟು, ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗೋಪಾಲಕೃಷ್ಣ ಭಟ್ ಕೆ. ಬ್ಯಾಂಕಿನ ನಿರ್ದೇಶಕರುಗಳು, ನಿರ್ದೇಶಕ ಮಂಡಳಿಯವರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article