ಧರ್ಮಸ್ಥಳ ಪ್ರಕರಣ: ಎಸ್‌ಐಟಿ ತನಿಖೆ ವಿಸ್ತರಣೆ ಸಾಧ್ಯತೆ
ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಮೃತದೇಹಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಪ್ರಕರಣದ ತನಿಖೆ ವಿಸ್ತರಿಸಲು ವಿಶೇಷ ತನಿಖಾ ತಂಡ (ಎಸ್‌ಐಟಿ)ಮುಂದಾಗಿದೆ ಎನ್ನಲಾಗಿದೆ.
ಧರ್ಮಸ್ಥಳ ಸುತ್ತಮುತ್ತಲ ಪ್ರದೇಶಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಅನುಮಾನಾಸ್ಪದ ಸಾವುಗಳ ಬಗ್ಗೆ ಉಲ್ಲೇಖಿಸಿದ 7 ವರ್ಷಗಳ ಹಿಂದಿನ ಸಮಿತಿಯೊಂದರ ವರದಿಯನ್ನು ಪರಿಶೀಲಿಸಲು ಎಸ್‌ಐಟಿ ಮುಂದಾಗಿದೆ ಎನ್ನಲಾಗುತ್ತಿದೆ.
ಧರ್ಮಸ್ಥಳಕ್ಕೆ ಬಂದು ನಾಪತ್ತೆಯಾಗಿದ್ದಾರೆ ಎಂದು ನೆರೆಯ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ಹಾಗೂ ಗೋವಾದಂತಹ ರಾಜ್ಯಗಳಲ್ಲಿ ದಾಖಲಾಗಿರುವ ನಾಪತ್ತೆ ದೂರುಗಳನ್ನು ಆಧರಿಸಿ ದಾಖಲಾಗಿರುವ ಎಫ್‌ಐಆರ್‌ಗಳನ್ನೂ ಎಸ್‌ಐಟಿ ಪರಿಶೀಲಿಸಲಿದೆ ಎಂದು ಮೂಲಗಳೂ ತಿಳಿಸಿವೆ. ಆ ಮೂಲಕ, ಸಾಕ್ಷಿ ದೂರುದಾರನ ಬಂಧನವಾಗಿರುವುದರಿಂದ, ಎಸ್‌ಐಟಿ ತನಿಖೆ ಅಂತ್ಯಗೊಳ್ಳಲಿದೆ ಎಂಬ ವರದಿಗಳನ್ನು ಈ ಮೂಲಗಳು ಅಲ್ಲಗಳೆದಿವೆ.
ಮಹಿಳೆಯರು ಹಾಗೂ ಬಾಲಕಿಯರ ಮೇಲಿನ ಲೈಂಗಿಕ ಕಿರುಕುಳವನ್ನು ತಡೆಯಲು ಮಾಜಿ ಶಾಸಕ ವಿ.ಎಸ್.ಉಗ್ರಪ್ಪ ನೇತೃತ್ವದಲ್ಲಿ ರಚಿಸಲಾಗಿದ್ದ ಸಮಿತಿಯು ಧರ್ಮಸ್ಥಳದ ಸುತ್ತಮುತ್ತ ಮಹಿಳೆಯರು ನಾಪತ್ತೆಯಾಗಿರುವ ಹಲವು ನಿದರ್ಶನಗಳನ್ನು ತನ್ನ 5,000 ಪುಟಗಳ ವರದಿಯಲ್ಲಿ ಉಲ್ಲೇಖಿಸಿತ್ತು.
ನಾಪತ್ತೆಯಾಗಿರುವ ಮಹಿಳೆಯರು ಹಾಗೂ ಬಾಲಕಿಯರ ಪತ್ತೆಗೆ ವಿಶೇಷ ಪೊಲೀಸ್ ಪಡೆಯನ್ನು ರಚಿಸಬೇಕು ಹಾಗೂ ಅಸಹಜ ಸಾವುಗಳ ನಿದರ್ಶನಗಳು ಅತಿ ಹೆಚ್ಚಿರುವ ಬೆಳ್ತಂಗಡಿ ತಾಲೂಕಿನಲ್ಲಿ ವಿಶೇಷ ಪೊಲೀಸ್ ಘಟಕವನ್ನು ಸ್ಥಾಪಿಸಬೇಕು ಎಂದು ಈ ಸಮಿತಿ ಶಿಫಾರಸು ಮಾಡಿತ್ತು.
ಇದಲ್ಲದೆ, 1995ರಿಂದ 2014ರ ನಡುವೆ ಯಾವುದಾದರೂ ಯಾತ್ರಿಕರ ಧರ್ಮಸ್ಥಳದಲ್ಲಿ ಕಣ್ಮರೆಯಾಗಿದ್ದಾರೆಯೇ ಎಂಬ ವರದಿಗಳನ್ನೂ ಎಸ್‌ಐಟಿ ಪರಿಶೀಲಿಸಲಿದೆ. ಮೂಲಗಳ ಪ್ರಕಾರ, ಈಗಿನ ದೂರುದಾರರಲ್ಲದೆ, ಸೂಕ್ತ ಮರಣೋತ್ತರ ಪರೀಕ್ಷೆ ನಡೆಸದೆ ಅನುಮಾನಾಸ್ಪದವಾಗಿ ಹೂಳಲಾಗಿರುವ ಮೃತದೇಹಗಳ ಕುರಿತು ದಾಖಲಾಗಿರುವ ದೂರುಗಳ ಕುರಿತೂ ಎಸ್‌ಐಟಿ ಪರಿಶೀಲಿಸಲಿದೆ.
ಹಲವಾರು ಸ್ಥಳಗಳನ್ನು ಅಗೆದಾಗ ಸಿಕ್ಕಿದ ಕೆಲವು ಅವಶೇಷಗಳ ವಿಧಿವಿಜ್ಞಾನ ವರದಿಗಳಿಗಾಗಿ ಕಾಯಲಾಗುತ್ತಿದೆ. ಶಂಕಿತ ಸ್ಥಳಗಳಲ್ಲಿ ಅವಶೇಷಗಳ ಹುಡುಕಾಟ ಮುಂದುವರಿಯಲಿದೆ. ನೆರೆಯ ರಾಜ್ಯಗಳಿಂದ ಬಂದು ಧರ್ಮಸ್ಥಳದಲ್ಲಿ ನಾಪತ್ತೆಯಾಗಿರುವವರ ಬಗ್ಗೆಯೂ ನಾವು ಪರಿಶೀಲಿಸುತ್ತೇವೆ ಎಂದು ಮೂಲಗಳು ತಿಳಿಸಿರುವ ಬಗ್ಗೆ ವರದಿಯಾಗಿದೆ. ಈ ಪ್ರದೇಶದ ಮಣ್ಣು ಹೆಚ್ಚು ಆಮ್ಲೀಯವಾಗಿದ್ದು, 15 ವರ್ಷಗಳಿಗೂ ಹಿಂದಿನ ದೇಹಗಳ ಅಸ್ಥಿಪಂಜರದ ಅವಶೇಷಗಳು ಉಳಿದಿರುವ ಸಾಧ್ಯತೆ ಕಡಿಮೆ. ಆದರೆ, ಮೃತದೇಹ ಕೊಳೆತ ನಂತರ ಮಣ್ಣಿನಲ್ಲಿ ಫಾಸ್ಫೇಟ್‌ಗಳು, ನೈಟ್ರೇಟ್‌ಗಳು, ಲಿಪಿಡ್‌ಗಳು ಮತ್ತು ಡಿಎನ್‌ಎ ಮೊದಲಾದ ಅಂಶಗಳು ದಶಕಗಳವರೆಗೆ ಉಳಿಯುವ ಸಾಧ್ಯತೆ ಇದೆ. ಆದರೆ, ಅಂತಹ ರಾಸಾಯನಿಕಗಳ ಕುರುಹುಗಳು ಇತರ ನೈಸರ್ಗಿಕ ಕಾರಣಗಳಿಂದಲೂ ಮಣ್ಣಿನಲ್ಲಿ ಉಂಟಾಗುವ ಸಾಧ್ಯತೆಯೂ ಇದೆ.