ಧರ್ಮಸ್ಥಳ ಸಂಪೂರ್ಣ ಪ್ರಕರಣವೇ ‘ಬುರುಡೆ’: ಕುತೂಹಲಕ್ಕೆ ತೆರೆ

ಧರ್ಮಸ್ಥಳ ಸಂಪೂರ್ಣ ಪ್ರಕರಣವೇ ‘ಬುರುಡೆ’: ಕುತೂಹಲಕ್ಕೆ ತೆರೆ


ಮಂಗಳೂರು: ಭಾರೀ ಸದ್ದು ಮಾಡಿದ್ದ ಧರ್ಮಸ್ಥಳ ಗ್ರಾಮದ ಆಸುಪಾಸಿನಲ್ಲಿ ನೂರಾರು ಶವ ಹೂತಿದ್ದೇನೆ ಪ್ರಕರಣದ ಅನಾಮಿಕ ಮುಸುಕುಧಾರಿ ದೂರುದಾರನನ್ನು ಎಸ್‌ಐಟಿ ಇಂದು ಬಂಧಿಸಿದ್ದು, ಬಂಧನದ ಬೆನ್ನಲ್ಲೇ ಆತನ ಮಾಹಿತಿ ಬಹಿರಂಗಗೊಂಡು ಮುಸುಕಿನ ಹಿಂದಿನ ಕುತೂಹಲಕ್ಕೆ ತೆರೆ ಬಿದ್ದಿದೆ.

ಹಲವು ವರ್ಷಗಳ ಹಿಂದೆ ಶವಗಳನ್ನು ತಾನು ಹೂತಿದ್ದೆ ಎಂದು ಪೊಲೀಸರಿಗೆ ದೂರು ನೀಡಿ ಎಸ್‌ಐಟಿ ಅಧಿಕಾರಿಗಳೊಂದಿಗೆ ಕಳೇಬರದ ಅವಶೇಷದ ಶೋಧಕಾರ್ಯಕ್ಕೆ ಹೋಗುತ್ತಿದ್ದ ಸಾಕ್ಷಿ ಸಂರಕ್ಷಣಾ ಯೋಜನೆಯಡಿ ರಕ್ಷಣೆ ಪಡೆದಿದ್ದ  ಮುಸುಕುಧಾರಿಯನ್ನು ಸುಳ್ಳು ಮಾಹಿತಿ ನೀಡಿದ್ದ ಆರೋಪದಡಿ ಬಂಧಿಸಲಾಗಿದೆ. ಆತನನ್ನು ಬೆಳ್ತಂಗಡಿ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯಯದ ನ್ಯಾಯಾಧೀಶರಾದ ವಿಜಯೇಂದ್ರ ಟಿ. 10 ದಿನಗಳ ಕಾಲ ಎಸ್‌ಐಟಿ ವಶಕ್ಕೆ ಒಪ್ಪಿಸಿದ್ದಾರೆ.

ಮುಂದಿನ ಹತ್ತು ದಿನಗಳ ಕಾಲ ಎಸ್‌ಐಟಿ ನಡೆಸಲಿರುವ ವಿಚಾರಣೆಯಲ್ಲಿ ಇನ್ನಷ್ಟು ಮಹತ್ವದ ಅಂಶಗಳು ಬೆಳಕಿಗೆ ಬರುವ ಸಾಧ್ಯತೆ ಇದೆ. ಇಷ್ಟು ದಿನ ಸಾಕ್ಷಿ ದೂರುದಾರನಾಗಿದ್ದ ಮುಸುಕುಧಾರಿಯ ಸತತ ವಿಚಾರಣೆ ನಡೆಸಿದ್ದ ಅಧಿಕಾರಿಗಳು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಿ ಧರ್ಮಸ್ಥಳ ದೇವಸ್ಥಾನದ ವಿರುದ್ಧ ನಡೆಸಿದ ಷಡ್ಯಂತ್ರದಲ್ಲಿ ಈತ ಭಾಗಿಯಾಗಿರುವ ಬಗ್ಗೆ ಹೆಚ್ಚಿನ ತನಿಖೆಗಾಗಿ ತಮ್ಮ ಕಸ್ಟಡಿಗೆ ಕೇಳಿದ್ದರು. ಎಸ್‌ಐಟಿ ವಾದದಲ್ಲಿ ಹುರುಳಿದೆ ಎಂಬುದನ್ನು ಮನಗಂಡ ನ್ಯಾಯಾಲಯ ಆತನನ್ನು 10 ದಿನಗಳ ಕಾಲ ಎಸ್‌ಐಟಿ ಕಸ್ಟಡಿಗೆ ನೀಡಿ ಆದೇಶ ನೀಡಿದೆ.

ಗುರುತು ಪತ್ತೆ..:

ಮುಸುಕುಧಾರಿಯ ಗುರುತೇ ನಿಗೂಢವಾಗಿತ್ತು. ಆರಂಭದಲ್ಲಿ ಆತನನ್ನು ‘ಭೀಮ’ ಎಂದೇ ಕರೆಯಲಾಗುತ್ತಿದ್ದು, ಇದೀಗ ಈತ ಮಂಡ್ಯ ಜಿಲ್ಲೆಯ ಚಿಕ್ಕಬಳ್ಳಿ ಗ್ರಾಮದ ಸಿ. ಎನ್. ಚೆನ್ನಯ್ಯ ಎಂಬುದು ಬಯಲಾಗಿದೆ. ಈತ ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದ.

ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದ ವೇಳೆ ದೇವಸ್ಥಾನದ ಆಡಳಿತ ಮಂಡಳಿಯ ಸೂಚನೆಯಂತೆ ನೂರಾರು ಶವಗಳನ್ನು ಹೂತಿದ್ದೇನೆ, ಅವುಗಳಲ್ಲಿ ಹೆಚ್ಚಿನವುಗಳು ಮಹಿಳೆಯರದ್ದು ಎಂದು ಪೊಲೀಸರಿಗೆ ಲಿಖಿತ ದೂರು ನೀಡಿದ್ದ. ಈತನ ದೂರನ್ನು ಗಂಭೀರವಾಗಿ ಪರಿಗಣಿಸಿದ ಸರಕಾರ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ತನಿಖೆಯನ್ನು ಒಪ್ಪಿಸಿತ್ತು. ದೂರುದಾರ ತೋರಿಸಿದ ನೇತ್ರಾವತಿ ಸ್ನಾನಘಟ್ಟ, ಬಂಗ್ಲೆಗುಡ್ಡೆ, ಬಾಹುಬಲಿ ಬೆಟ್ಟ ಸೇರಿದಂತೆ ೧೭ ಕಡೆಗಳಲ್ಲಿ ಗುಂಡಿ ತೆಗೆದು ಕಳೇಬರದ ಅವಶೇಷಗಳಿಗಾಗಿ ಶೋಧ ನಡೆಸಲಾಗಿತ್ತು. ಆದರೆ ಒಂದೆಡೆ ಒಂದಿಷ್ಟು ಮೂಳೆಗಳು, ಮತ್ತೊಂದು ಗುಂಡಿಯಲ್ಲಿ ಪುರುಷನದ್ದು ಎನ್ನಲಾದ ಆಸ್ಥಿಪಂಜರದ ಅವಶೇಷಗಳು ದೊರೆತಿದ್ದವು. ಇವುಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು, ವರದಿ ಇನ್ನೂ ಬಂದಿಲ್ಲ.

ನಾನು ಪಾತ್ರಧಾರಿ ಮಾತ್ರ ಸೂತ್ರದಾರರು ಬೇರೆ..:

ತಮಿಳುನಾಡಿನಲ್ಲಿದ್ದ ಚೆನ್ನಯ್ಯಗೆ ಹಣದ ಆಮಿಷವೊಡ್ಡಿ ಧರ್ಮಸ್ಥಳ ವಿರೋಧಿ ತಂಡ ಕರೆದುಕೊಂಡು ಬಂದಿದೆ ಎನ್ನಲಾಗಿದೆ. 

ಚೆನ್ನಯ್ಯ ಎಸ್‌ಐಟಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.  ಮೂಲಗಳ ಪ್ರಕಾರ ಧರ್ಮಸ್ಥಳಕ್ಕೆ ಬರುವ ಮೊದಲೇ ಮೂರು ಬಾರಿ ಈತನನ್ನು ತಂಡ ಭೇಟಿ ಮಾಡಿತ್ತು.

ಡಿಸೆಂಬರ್ ಕೊನೆಯ ವಾರದಲ್ಲಿ ತಮಿಳುನಾಡಿನಲ್ಲಿದ್ದ ನನ್ನನ್ನು ಧರ್ಮಸ್ಥಳ ದೇವಸ್ಥಾನದ ವಿರೋಧಿ ತಂಡ ಸಂಪರ್ಕಿಸಿ ಮಾತುಕತೆ ನಡೆಸುವ ವೇಳೆ ಹಣದ ಆಮಿಷ ಒಡ್ಡಿದ್ದರು. ಈ ಪ್ರಕರಣದ ಮುಖ್ಯ ನಾಯಕ ನೀನು. ನಿನ್ನಿಂದಲೇ ಈ ಪ್ರಕರಣಕ್ಕೆ ರೋಚಕ ತಿರುವು ಸಿಗುತ್ತದೆ ಎಂದು ಹೇಳಿದ್ದರು.

ಯಾವುದೇ ಕಾರಣಕ್ಕೂ ನೀನು ಭಯ ಪಡುವ ಅಗತ್ಯವಿಲ್ಲ. ತನಿಖೆಯಾದ ನಂತರ ಹಲವು ಜನ ದೂರುದಾರರು ಬರುತ್ತಾರೆ. ಎಲ್ಲ ತನಿಖೆ ನಡೆಯುತ್ತದೆ ಎಂದು ಭರವಸೆ ನೀಡಿದ್ದರು.

ಆರಂಭದಲ್ಲಿ ಬೆಂಗಳೂರಿನಲ್ಲಿ ನನಗೆ ಸ್ವಲ್ಪ ತರಬೇತಿ ನೀಡಲಾಗಿತ್ತು. ಪೊಲೀಸರು ಕೇಳಿದಾಗ ಯಾವ ರೀತಿ ಉತ್ತರ ಹೇಳಬೇಕು ಎನ್ನುವುದನ್ನು ತಿಳಿಸಲಾಗಿತ್ತು. ನಂತರ ಸೂತ್ರಧಾರರು ಹೇಳಿದಂತೆ ನಾನು ಪಾತ್ರ ಮಾಡುತ್ತಿದ್ದೆ. ಅವರು ಹೇಳಿದಂತೆ ನಾನು ಮಾಹಿತಿ ನೀಡುತ್ತಿದ್ದೆ ಎಂದಿದ್ದಾನೆ ಎನ್ನಲಾಗಿದೆ. 

ಸೂತ್ರದಾರಿ ಯಾರು..:

ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯುವ ಷಡ್ಯಂತ್ರ ಇದಾಗಿದೆ ಎಂಬುದು ವಿಚಾರಣೆ ವೇಳೆ ಬಯಲಾಗಿದ್ದು, ಇದರ ಹಿಂದಿರುವ ಸೂತ್ರದಾರರಿಗೆ ಬಲೆ ಬೀಸುವ ಸಾಧ್ಯತೆ ಇದೆ. ಮುಸುಕುಧಾರಿ ಬಂಧನವಾಗಿದ್ದರೆ, ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬಿಜೆಪಿ ನಾಯಕ ಬಿ. ಎಲ್. ಸಂತೋಷ್ ನಿಂದನೆ ಪ್ರಕರಣದಲ್ಲಿ ಬಂಧಿತರಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ವಿಚಾರಣೆಗೆ ಹಾಜಗಾಗುವಂತೆ ನೋಟೀಸ್ ನೀಡಲಾಗಿದೆ. ಗಿರೀಶ್ ಮಟ್ಟೆಣ್ಣನವರ್, ಜಯಂತ್ ಟಿ. ಎಂಬವರ ಬಂಧನದ ಸಾಧ್ಯತೆ ಹೆಚ್ಚಿದೆ.  ತನ್ನ ಪುತ್ರಿ ಅನನ್ಯಾ ಭಟ್ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಾಳೆ ಎನ್ನುತ್ತಿರುವ ಸುಜಾತ ಭಟ್ ‘ಅನನ್ಯಾ ಭಟ್ ಎಂಬ ಮಗಳು ಇರಲಿಲ್ಲ, ಇದ್ದಳು ಎಂದು ಕ್ಷಣಕ್ಕೊಂದು ಗೊಂದಲಕಾರಿ ಹೇಳಿಕೆ ನೀಡುತ್ತಿದ್ದಾರೆ

ಬುರುಡೆ ಯಾರದ್ದು..

ದೂರು ನೀಡುವ ವೇಳೆ ಮುಸುಕುಧಾರಿ ತಂದಿದ್ದ ಬುರುಡೆ ಯಾರದ್ದು, ಆತನಿಗೆ ಬುರುಡೆ ನೀಡಿದವರು ಯಾರೆಂಬ ದಿಸೆಯಲ್ಲಿಯೂ ತನಿಖೆ ನಡೆಯುವ ಸಾಧ್ಯತೆ. ಆದರೆ ಮುಸುಕುಧಾರಿ ಬುರುಡೆ ರಹಸ್ಯವನ್ನು ತಿಳಿಸಿಲ್ಲ ಎನ್ನಲಾಗಿದೆ.

‘ಮೊಳಗಿದ ಶಿವತಾಂಡವ’:

ಮುಸುಕುಧಾರಿ ಬಂಧನವಾಗಿ ಒಟ್ಟು ಪ್ರಕರಣದ ಷಡ್ಯಂತ್ರ ಬಯಲಾಗುತ್ತಿದ್ದಂತೆ ಶ್ರೀ ಕ್ಷೇತ್ರದ ಧರ್ಮಸ್ಥಳದ ಸಾಮಾಜಿಕ ಜಾಲತಾಣದಲ್ಲಿ ‘ಶಿವತಾಂಡವ’ ನೃತ್ಯದ ಚಿತ್ರ ಹರಿದಾಡಿದೆ.

ಎಲ್ಲಾ ತೊಳೆದಂತಾಗಿದೆ..:

‘ಎಸ್‌ಐಟಿ ತನಿಖೆ ನಡೆಯುತ್ತಿರುವುದರಿಂದ ಹೆಚ್ಚು ಮಾತನಾಡುವುದಿಲ್ಲ. ಒಂದೊಂದೇ ಸತ್ಯ ಬಯಲಾಗುತ್ತಿದೆ, ಸಂತಸವಾಗಿದೆ. ಈಗ ಎಲ್ಲಾ ಆರೋಪಗಳಿಂದ ತೊಳೆದಂತಾಗಿದೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಹೀಗೆಯೇ ಇರಲಿ ದೇವರ ಆಶೀರ್ವಾದ ಈ ಕ್ಷೇತ್ರದ ಮೇಲಿದೆ. ಆ ಭಗವಂತ ನಮ್ಮೊಂದಿಗೆ ಇದ್ದಾರೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article