ಮೂಡುಬಿದಿರೆ ತಾಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ
Sunday, August 31, 2025
ಮೂಡುಬಿದಿರೆ: ದ.ಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೂಡುಬಿದಿರೆ ತಾಲೂಕು ಪಂಚಾಯತ್, ಪುರಸಭೆ, ಯುವಜನ ಒಕ್ಕೂಟ, ಹಾಗೂ ವಿವಿಧ ಸಂಘ ಸಂಸ್ಥೆಗಳು ಇವರ ಸಂಯುಕ್ತ ಆಶ್ರಯದಲ್ಲಿ ಮೂಡುಬಿದಿರೆ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ-2025 ಸ್ವರಾಜ್ಯ ಮೈದಾನದ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಿತು.
ಪುರಸಭಾಧ್ಯಕ್ಷೆ ಜಯಶ್ರೀ ಕೇಶವ್ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಕಣ್ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ಹಾಗೂ ಕ್ರೀಡಾಪಟುಗಳಿಗೂ ಪ್ರೋತ್ಸಾಹ ನೀಡುವಂತಹ ಕೆಲಸಗಳು ಆಗಬೇಕಾಗಿದೆ ಎಂದ ಅವರು ಕ್ರೀಡಾಪಟುಗಳಿಗೆ ತರಬೇತಿ ನೀಡಲು ಗ್ರಾಮ ಪಂಚಾಯತ್, ಪುರಸಭೆ ವ್ಯಾಪ್ತಿಯಲ್ಲಿ ತರಬೇತಿ ಕೇಂದ್ರಗಳನ್ನು ತೆರೆಯುವ ಅವಶ್ಯಕತೆಯಿದೆ ಎಂದು ಹೇಳಿದರು.
ಮಾಜಿ ಕ್ರೀಡಾ ಸಚಿವ ಅಭಯಚಂದ್ರ ಜೈನ್ ಕ್ರೀಡಾ ಧ್ವಜಾರೋಹಣಗೊಳಿಸಿ ಮಾತನಾಡಿ, ಇಡೀ ಕರ್ನಾಟಕದಲ್ಲಿ ತಾಲೂಕಿನಲ್ಲಿ ಸಿಂಥೆಟಿಕ್ ಟ್ರಾಕ್ನ್ನೊಳಗೊಂಡ ಸುಸಜ್ಜಿತವಾದ ಕ್ರೀಡಾಂಗಣವಿರುವುದು ಮೂಡುಬಿದಿರೆಯಲ್ಲಿ ಮಾತ್ರ. ಆದರೆ ಈ ಕ್ರೀಡಾಂಗಣವು ಮೋಹನ್ ಆಳ್ವರ ಕ್ರೀಡಾಭಿಮಾನದಲ್ಲಿ ಅಂದಿನಿಂದ ಇಂದಿನವರೆಗೂ ನಿರ್ವಹಣೆಯನ್ನು ಮಾಡುತ್ತಿರುವುದು ಶ್ಲಾಘನೀಯ ಎಂದ ಅವರು ಕ್ರೀಡಾಂಗಣದ ವೀಕ್ಷಕರ ಗ್ಯಾಲರಿಯ ಮೇಲ್ಛಾವಣಿಯ ಶೀಟ್ಗಳು ಗಾಳಿಮಳೆಗೆ ಹಾರಿ ಹೋಗಿದೆ ಅದನ್ನು ಸರಿಪಡಿಸಿ ಇಡೀ ಕ್ರೀಡಾಂಗಣಕ್ಕೆ ವಿಶೇಷ ಅನುದಾನದಲ್ಲಿ ಕ್ರೀಡಾಂಗಣವನ್ನು ಸುಸಜ್ಜಿತಗೊಳಿಸಲು ಕರ್ನಾಟಕ ಸರ್ಕಾರಕ್ಕೆ ಒತ್ತಾಯಿಸಿ ಸರಿಪಡಿಸುವ ವ್ಯವಸ್ಥೆಯನ್ನು ಮಾಡಲಾಗುವುದೆಂದು ಭರವಸೆಯಿತ್ತರು.
ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಕುಸುಮಾಧರ್, ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್, ಜಿಲ್ಲಾ ಯುವಜನ ಕ್ರೀಡಾ ಇಲಾಖೆಯ ಸರಸ್ವತಿ ಪುತ್ರನ್, ನಾಗೇಶ್ ಉಪಸ್ಥಿತರಿದ್ದರು.
ಕ್ರೀಡಾಕೂಟದ ನೋಡಲ್ ಅಧಿಕಾರಿ ನವೀನ್ ಚಂದ್ರ ಅಂಬೂರಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ವಿವಿಧ ರನ್ನಿಂಗ್ ರೇಸ್ನಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಕ್ರೀಡಾ ಪದಕ ನೀಡಿ ಗೌರವಿಸಲಾಯಿತು.
