ಸುಭಾಶ್‌ಚಂದ್ರ ಬೋಸ್ ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ವಿಶಿಷ್ಟ ಪಾತ್ರ ವಹಿಸಿದ್ದರು: ಸಚಿವ ದಿನೇಶ್ ಗುಂಡೂರಾವ್
ಅವರು ಇಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ, ವಿವಿ ಕಾಲೇಜು ಮತ್ತು ಮಹಾತ್ಮ ಗಾಂಧಿ ಪ್ರತಿಷ್ಠಾನ(ರಿ) ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಲೇಖಕ ಪ್ರೊ. ಕೆ.ಈ. ರಾಧಾಕೃಷ್ಣ ಅವರು ಅನುವಾದಿಸಿರುವ ನೇತಾಜಿ ಸುಭಾಶ್‌ಚಂದ್ರ ಬೋಸರ ಮೂರು ಕೃತಿಗಳನ್ನು ಭಾನುವಾರ ನಡೆದ ಸಮಾರಂಭದಲ್ಲಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ನೇತಾಜಿ ಸುಭಾಷ್‌ಚಂದ್ರ ಬೋಸ್ ಧೈರ್ಯಶಾಲಿ. ಅಸಾಧಾರಣ ನಾಯಕತ್ವದ ಮೂಲಕ ಭಾರತದ ಇತಿಹಾಸದಲ್ಲಿ ಶಾಶ್ವತ ಸ್ಥಾನ ಪಡೆದಿರುವ ನೇತಾಜಿ ಅವರ ಬದುಕು, ಸಾಧನೆಯನ್ನು ನಾವು ಅರಿಯಬೇಕಾಗಿದೆ ಎಂದ ಅವರು ಕಿರಿಯ ವಯಸ್ಸಿನಲ್ಲೇ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ನೇತಾಜಿ ಅವರೊಬ್ಬ ಕ್ರಾಂತಿಕಾರಿ ನಾಯಕ. ಅವರ ಬಗ್ಗೆ ಪ್ರಕಟಗೊಂಡಿರುವ ಕೃತಿಗಳನ್ನು ನಾವು ಓದಬೇಕಾಗಿದೆ ಎಂದರು.
ವಿಶೇಷ ಅತಿಥಿಯಾಗಿದ್ದ ಕೋಲ್ಕತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಟ್ರಸ್ಟ್‌ನ ನಿರ್ದೇಶಕ (ಸುಭಾಷ್ ಚಂದ್ರ ಬೋಸ್ ಸಹೋದರ ಶರತ್‌ಚಂದ್ರ ಬೋಸ್ ಮೊಮ್ಮಗ) ಪ್ರೊ. ಸುಮಂತ್ರ ಬೋಸ್ ಮಾತನಾಡಿ, ನೇತಾಜಿ ಅವರು ಭಾರತದ ಸ್ವಾತಂತ್ರ್ಯ ಚಳವಳಿಯ ಅತ್ಯಂತ ದೂರದೃಷ್ಟಿಯ ನಾಯಕರಲ್ಲಿ ಒಬ್ಬರಾಗಿದ್ದರು. ಗಾಂಧೀಜಿ ಮತ್ತು ನೇತಾಜಿ ಅವರ ಹೋರಾಟದ ಹಾದಿ ಭಿನ್ನವಾಗಿದ್ದರೂ ಇಬ್ಬರದ್ದೂ ಧ್ಯೇಯ ಒಂದೇ ಆಗಿತ್ತು ಎಂದರು.
ನೇತಾಜಿ ಬಗ್ಗೆ ಕನ್ನಡದಲ್ಲಿ ಕೃತಿಗಳ ಕೊರತೆ ಇತ್ತು. ಪ್ರೊ.ಕೆ.ಈ. ರಾಧಾಕೃಷ್ಣ ಅವರು ಮೂರು ಪುಸ್ತಕಗಳನ್ನು ಅನುವಾದಿಸುವ ಮೂಲಕ ಈ ಕೊರತೆಯನ್ನು ನಿವಾರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಲ್. ಧರ್ಮ ಸಮಾರಮಭದ ಅಧ್ಯಕ್ಷತೆ ವಹಿಸಿದ್ದರು.
ಸುಭಾಷ್‌ಚಂದ್ರ ಬೋಸ್‌ರ ‘ಒಂದು ಅಪೂರ್ವ ಆತ್ಮಕಥೆ, ಅಸಾಮಾನ್ಯ ದಿನಚರಿ, ಭಾರತೀಯ ಹೋರಾಟ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿರುವ ಲೇಖಕ ಪ್ರೊ. ಕೆ. ರಾಧಾಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಹುಶ್ರುತ ವಿದ್ವಾಂಸ ನಾರಾಯಣ ಯಾಜಿ ಕೃತಿಗಳ ಪರಿಚಯಿಸಿದರು.
ನಿವೃತ್ತ ಸೇನಾಧಿಕಾರಿ ಕ್ಯಾ. ಗಣೇಶ್ ಕಾರ್ಣಿಕ್, ಬೆಂಗಳೂರಿನ ನೇತಾಜಿ ಸುಭಾಶ್ಚಂದ್ರ ಬೋಸ್ ಟ್ರಸ್ಟ್‌ನ ಅಧ್ಯಕ್ಷ ಎಂ. ರಾಜಕುಮಾರ್, ಬೆಂಗಳೂರು ಸನ್ ಸ್ಟಾರ್ ಪಬಿಷರ್ಸ್‌ನ ಡಿ.ಎನ್. ಶೇಖರ್ ರೆಡ್ಡಿ, ಉಪಸ್ಥಿತರಿದ್ದರು.
ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಡಾ.ಗಣಪತಿ ಗೌಡ ಸ್ವಾಗತಿಸಿ, ಮಹಾತ್ಮ ಗಾಂಧಿ ಪ್ರತಿಷ್ಠಾನದ ಕಲ್ಲೂರು ನಾಗೇಶ ವಂದಿಸಿದರು. ಉಪನ್ಯಾಸಕಿ ಡಾ. ಶಮಾ ಕಾರ್ಯಕ್ರಮ ನಿರೂಪಿಸಿದರು.