ನಾಳೆ ಬಿಜೆಪಿಯಿಂದ ‘ಧರ್ಮಸ್ಥಳ ಚಲೋ, ಧರ್ಮದೆಡೆಗೆ ನಮ್ಮ ನಡಿಗೆ’ ಬೃಹತ್ ಸಮಾವೇಶ: ಸಂಸದ ಕ್ಯಾ. ಬ್ರಿಜೇಶ್ ಚೌಟ
ಅವರು ಇಂದು ಧರ್ಮಸ್ಥಳದಲ್ಲಿ ಶ್ರೀಸನ್ನಿಧಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕೋಟ್ಯಾಂತರ ಭಕ್ತಾದಿಗಳ ಭಾವನೆಗಳಿಗೆ ಧಕ್ಕೆಯಾಗುವಂತೆ ಷಡ್ಯಂತ್ರ ರೂಪಿಸಿ ಮಾಡುವ ಅಪಪ್ರಚಾರ ಹಾಗೂ ಸುಳ್ಳು ವದಂತಿಯನ್ನು ಬಿಜೆಪಿ ಸಹಿಸುವುದಿಲ್ಲ. ಈಗಾಗಲೇ ಎಸ್ಐಟಿಯಲ್ಲಿರುವ ಪ್ರಕರಣವನ್ನು ಎನ್ಐಎಗೆ ನೀಡುವ ಮೂಲಕ ಇದರ ಹಿಂದಿರುವ ದುಷ್ಟಶಕ್ತಿಗಳನ್ನು ಬಯಲಿಗೆಳೆಯಬೇಕೆಂಬುದು ಸಮಾವೇಶದ ಉದ್ದೇಶವಾಗಿದೆ ಎಂದರು.
ಪಿಎಫ್ಐ ನೇರವಾಗಿ ರಾಷ್ಟ್ರೀಯ ವಿರೋಧಿ ಚಟುವಟಿಕೆಯಲ್ಲಿ ತೊಡಗಿತ್ತು. ಎಸ್ಡಿಪಿಐ ಅದರ ಮುಖವಾಣಿಯಾಗಿದೆ. ಅವುಗಳು ಹಿಂದೂ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಅವುಗಳನ್ನು ಕಾಂಗ್ರೆಸ್ ಸರ್ಕಾರ ಬೆಂಬಲಿಸುತ್ತಿದೆ. ಆದುದರಿಂದ ಪ್ರಕರಣವನ್ನು ಎನ್ಐಎ ತನಿಖೆಗೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಪ್ರಕರಣದ ಬಗ್ಗೆ ಹೊರರಾಜ್ಯಗಳ ಜನರ ಆಸಕ್ತಿ ಹಾಗೂ ಬೇರೆ ಕಡೆಗಳಿಂದ ಹಣವರ್ಗಾವಣೆ ಆಗಿರುವ ಶಂಕೆ ಇದೆ. ತನಿಖೆ ನಡೆಯುತ್ತಿರುವ ಆಯಾಮ ಮತ್ತು ಅಧಿಕಾರಿಗಳ ನಡವಳಿಕೆ ಕಂಡಾಗ ಇದಕ್ಕೆ ಸರ್ಕಾರದ ಮಾರ್ಗದರ್ಶನ ಇದೆ ಎಂಬ ಶಂಕೆ ಮೂಡಿ ಬರುತ್ತದೆ. ಇದಕ್ಕೆ ಜನಾಂದೋಲನದ ಮೂಲಕ ಸ್ಪಷ್ಟ ಉತ್ತರ ನೀಡುತ್ತೇವೆ ಎಂದು ಹೇಳಿದರು.
ಸಮಾವೇಶದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶೋಭಾ ಕರಂದ್ಲಾಜೆ, ಕರ್ನಾಟಕದ ಉಸ್ತುವಾರಿ ಸುಧಾಕರ್ ರೆಡ್ಡಿ ಸೇರಿದಂತೆ ಹಲವು ನೇತಾರರು ಭಾಗವಹಿಸುವರು ಎಂದು ತಿಳಿಸಿದರು.
ಬಿಜೆಪಿಯ ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ, ಮಾಜಿ ಸಚಿವ ರೇಣುಕಾಚಾರ್ಯ ಮಾತನಾಡಿ, ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಬಿಜೆಪಿಯ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಮತ್ತು ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್ ಧರ್ಮಸ್ಥಳ ಉಪಸ್ಥಿತರಿದ್ದರು.