ಬುರುಡೆ ಪ್ರಕರಣವನ್ನು ಕೇಂದ್ರ ತನಿಖಾ ತಂಡಕ್ಕೆ ವಹಿಸಬೇಕು: ನಿಖಿಲ್ ಕುಮಾರಸ್ವಾಮಿ

ಬುರುಡೆ ಪ್ರಕರಣವನ್ನು ಕೇಂದ್ರ ತನಿಖಾ ತಂಡಕ್ಕೆ ವಹಿಸಬೇಕು: ನಿಖಿಲ್ ಕುಮಾರಸ್ವಾಮಿ


ಉಜಿರೆ: ನಾಡಿನ ಪವಿತ್ರಕ್ಷೇತ್ರ ಧರ್ಮಸ್ಥಳದ ಬಗ್ಗೆ ಮಾಧ್ಯಮಗಳಲ್ಲಿ ನಿರಂತರ ಪ್ರಕಟವಾಗುತ್ತಿರುವ ಅಪಪ್ರಚಾರ ಹಾಗೂ ಸುಳ್ಳು ವದಂತಿಗಳಿಂದ ದೇಶ-ವಿದೇಶಗಳಲ್ಲಿರುವ ಕೋಟ್ಯಾಂತರ ಭಕ್ತಾದಿಗಳಿಗೆ ತೀವ್ರ ನೋವಾಗಿದೆ. ಭಯ ಮತ್ತು ಗೊಂದಲದ ವಾತಾವರಣ ಉಂಟಾಗಿದೆ. ಆದುದರಿಂದ ಪಾರದರ್ಶಕವಾಗಿ ತನಿಖೆ ನಡೆಸಿ ನ್ಯಾಯ ಒದಗಿಸಲು ಬುರುಡೆ ಪ್ರಕರಣವನ್ನು ಕೇಂದ್ರ ತನಿಖಾ ತಂಡಕ್ಕೆ ವಹಿಸಬೇಕು ಎಂದು ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದರು.


ಅವರು ಭಾನುವಾರ ತಮ್ಮ ಸಾವಿರಾರು ಅಭಿಮಾನಿಗಳೊಂದಿಗೆ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಮಾಡಿ, ಅಮೃತವರ್ಷಿಣಿ ಸಭಾಭವನದಲ್ಲಿ ಮಾತನಾಡಿದರು.


ಅನಾಮಧೇಯ ವ್ಯಕ್ತಿ ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ದೊರಕಿಸುವ ಬದಲು ಸರ್ಕಾರ ಷಡ್ಯಂತರ ರೂಪಿಸಿದೆ. ತಾನು ಹಾಗೂ ಕುಟುಂಬದವರೆಲ್ಲರೂ ಧರ್ಮಸ್ಥಳದ ಪರಮಭಕ್ತರಾಗಿದ್ದು, ಪ್ರಕರಣದಲ್ಲಿ ಸತ್ಯವನ್ನು ಹೊರಗೆಳೆಯಲು ನೈತಿಕ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.


ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ತಾಳ್ಮೆ, ಸಂಯಮ, ಸಮಾಧಾನ ಮತ್ತು ಮೌನವನ್ನು ಶ್ಲಾಘಿಸಿದ ನಿಖಿಲ್ ಕುಮಾರಸ್ವಾಮಿ, ಯಾವುದೇ ನಿರೀಕ್ಷೆ ಹಾಗೂ ಪ್ರತಿಫಲಾಪೇಕ್ಷೆ ಬಯಸದೆ, ಲೋಕಕಲ್ಯಾಣಕ್ಕಾಗಿ ಹೆಗ್ಗಡೆಯವರು ಮಾಡುತ್ತಿರುವ ಚತುರ್ವಿಧ ದಾನಪರಂಪರೆಯೊಂದಿಗೆ ಗ್ರಾಮಾಭಿವೃದ್ಧಿ, ಆರೋಗ್ಯ, ಶಿಕ್ಷಣ, ಮಹಿಳಾಸಬಲೀಕರಣ ಮೊದಲಾದ ಸಮಾಜಮುಖಿ ಸೇವಾಕಾರ್ಯಗಳಿಗೆ ಅಭಿನಂದಿಸಿದರು.


ಭಕ್ತರು ಧರ್ಮಸ್ಥಳದ ಅಪಾರ ಸಂಪತ್ತು: ಡಾ. ಹೆಗ್ಗಡೆ

ದೇಶ-ವಿದೇಶಗಳಲ್ಲಿರುವ ಕೋಟ್ಯಾಂತರ ಭಕ್ತಾದಿಗಳೇ ಧರ್ಮಸ್ಥಳದ ಅಪಾರ ಹಾಗೂ ಅಮೂಲ್ಯ ಸಂಪತ್ತು ಮತ್ತು ಶ್ರೀರಕ್ಷೆಯಾಗಿದೆ ಎಂದು ಹೆಗ್ಗಡೆಯವರು ಹೇಳಿದರು. ಅಪಾರ ಸಂಖ್ಯೆಯ ಭಕ್ತರ ಪ್ರೀತಿ-ವಿಶ್ವಾಸ, ನಂಬಿಕೆ, ಗೌರವ ಅಮೂಲ್ಯ ಸಂಪತ್ತಾಗಿದ್ದು ಇದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇದರ ತೂಕ, ಘನತೆ, ಗೌರವವೇ ಅತಿ ಮಹತ್ವಪೂರ್ಣವಾಗಿದೆ.


ಆದುದರಿಂದಲೇ ನಂಬಿದವರಿಗೆ ಇಂಬು ಕೊಡುವ ಧರ್ಮಸ್ಥಳದಲ್ಲಿ ‘ಮಾತು ಬಿಡ ಮಂಜುನಾಥ’ ಎಂಬ ಮಾತು ಚಿರಪರಿಚಿತವಾಗಿದೆ. ಸತ್ಯ, ಧರ್ಮ, ನ್ಯಾಯ, ನೀತಿ ನಿತ್ಯವೂ ನೆಲೆನಿಂತಿರುವ ಪವಿತ್ರ ಕ್ಷೇತ್ರ ಧರ್ಮಸ್ಥಳ. ಧರ್ಮಸ್ಥಳದಲ್ಲಿ ಯಾವುದೇ ತಪ್ಪು ಅಥವಾ ಅಹಿತಕರ ಘಟನೆ ನಡೆಯದಂತೆ ಸದಾ ಎಚ್ಚರಿಕೆ ಹಾಗೂ ಮುಂಜಾಗರೂಕತೆ ವಹಿಸುತ್ತಿರುವುದಾಗಿ ಹೆಗ್ಗಡೆಯವರು ಸ್ಪಷ್ಟಪಡಿಸಿದರು.


ಡಿ. ಸುರೇಂದ್ರ ಕುಮಾರ್ ಮತ್ತು ಶಾಸಕರುಗಳಾದ ಜಿ.ಡಿ. ಹರೀಶ್ ಗೌಡ, ಹುಣಸೂರು, ಮಂಜು, ಅರಕಲಗೂಡು, ಸ್ವರೂಪ್ ಹಾಸನ, ಮಲ್ಲೇಶ್ ಬಾಬು, ಕೋಲಾರ, ವಿಧಾನಪರಿಷತ್ ಸದಸ್ಯ ಭೋಜೇಗೌಡ ಮತ್ತು ಮಾಜಿ ಶಾಸಕ ಕೆ. ಮಹಾದೇವ ಮತ್ತಿತರರು ಉಪಸ್ಥಿತರಿದ್ದರು.
















































Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article