
ಅಧಿಕ ಮಳೆಯಿಂದಾಗಿ ಅಡಿಕೆ ಬೆಳೆಗಾರರಿಗೆ ಆಥಿ೯ಕ ನಷ್ಟ
Wednesday, August 13, 2025
ಮೂಡುಬಿದಿರೆ: ಈ ಮಳೆಗಾಲದ ಮೂರು ತಿಂಗಳಿನಲ್ಲಿ ಸುರಿದ ಅಧಿಕ ಮಳೆಯ ಪರಿಣಾಮವಾಗಿ ಅಡಿಕೆಗಳು ಮರದಿಂದ ಕೆಳಗೆ ಉರುಳಿ ಬಿದ್ದಿದ್ದು ಇದರಿಂದಾಗಿ ಬೆಳೆಗಾರರು ಆಥಿ೯ಕ ನಷ್ಟವನ್ನು ಅನುಭವಿಸುವಂತ್ತಾಗಿದೆ.
ಅಡಿಕೆಗೆ ಕೊಳೆ ರೋಗವು ಒಂದು ಪ್ರಮುಖ ಕೃಷಿ ಸಮಸ್ಯೆಯಾಗಿದೆ. ಮಳೆಗಾಲದಲ್ಲಿ ಅಧಿಕ ಮಳೆ ಮತ್ತು ಬಿಸಿಲಿನ ತಾಪಮಾನದ ಸಮಸ್ಯೆಯಿಂದಾಗಿ ಕೊಳೆ ರೋಗವು ಬರುತ್ತದೆ. ಈ ಕೊಳೆ ರೋಗವು ಅಡಿಕೆ ಮರದ ವಿವಿಧ ಭಾಗಗಳಿಗೆ ಹಾನಿ ಮಾಡುತ್ತವೆ.
ಈ ಬಾರಿ ಜೂನ್- ಜುಲೈ ತಿಂಗಳಲ್ಲಿ ಅತಿಯಾಗಿ ಸುರಿದ ಮಳೆಯಿಂದಾಗಿ ಕೆಲವು ಅಡಿಕೆ ಮರಗಳು ಜೀವಾಂತಿಕೆಯನ್ನು ಕಳೆದುಕೊಂಡಿವೆ ಮತ್ತು ಅಡಿಕೆ ಕಾಯಿಗಳು ಅವಧಿ ಪೂಣ೯ಗೊಳ್ಳುವ ಮೊದಲೇ ಕೊಳೆತು ಉದುರಿಬಿದ್ದು ಮರದ ಬುಡವನ್ನು ಸೇರಿಕೊಂಡಿವೆ.
ಮಳೆಯ ಕಾರಣದಿಂದ ಅಡಿಕೆ ಬೆಳೆಗಾರನಿಗೆ ಈ ಬಾರಿ ಸರಿಯಾಗಿ ಮರಗಳಿಗೆ ಮದ್ದು ಸಿಂಪಡಿಸಲು ಸಾಧ್ಯವಾಗಿರಲಿಲ್ಲ ಇದರಿಂದಾಗಿಯೂ ಸಮಸ್ಯೆಯಾಗಿದೆ.
ತಾಲೂಕಿನಲ್ಲಿರುವ ಅಡಿಕೆ ಬೆಳೆಯುತ್ತಿರುವ ಹಲವು ಬೆಳೆಗಾರರು ಇದೇ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ.
ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಕೇಶ್ ಶೆಟ್ಟಿ ಕೇಮಾರು ಅವರೂ ಅಡಿಕೆ ಬೆಳೆಯುತ್ತಾರೆ. ಅವರ ತೋಟದಲ್ಲಿಯೂ ಅಡಿಕೆಗೆ ಕೊಳೆ ರೋಗ ತಟ್ಟಿದೆ ಇದರಿಂದಾಗಿ ಅಡಿಕೆಗಳು ಕೊಳೆತು ಉದುರಿ ಬಿದ್ದಿದ್ದು ಇದರಿಂದಾಗಿ ಆಥಿ೯ಕ ನಷ್ಟ ಉಂಟಾಗಿದೆ.
ಕಳೆದ ಎರಡು ತಿಂಗಳಿನಲ್ಲಿ ಎಡೆಬಿಡದೆ ಸುರಿದ ಮಳೆಯ ಪರಿಣಾಮವಾಗಿ ಅಡಿಕೆ ಬೆಳೆಗಾರರಿಗೆ ತುಂಬಾ ನಷ್ಟ ವಾಗಿದೆ. ತನಗೆ ಪ್ರತಿವಷ೯ 10ರಿದ 15 ಕ್ವಿಂಟಾಲ್ ನಷ್ಟು ಅಡಿಕೆ ಸಿಗುತ್ತಿತ್ತು ಆದರೆ ಈ ಬಾರಿ ಅಡಿಕೆ ಕೊಳೆತು ಬಿದ್ದಿದ್ದರಿಂದ ಎಂಟು ಕ್ವಿಂಟಾಲ್ ನಷ್ಟು ಸಿಗುವುದೇ ಕಷ್ಟವಾಗಿದ್ದು ತನಗೂ ಆಥಿ೯ಕ ನಷ್ಟ ಉಂಟಾಗಿದೆ ಎಂದು ಪಾಲಡ್ಕ ಗ್ರಾ.ಪಂ. ಸದಸ್ಯ ಸುಕೇಶ್ ಶೆಟ್ಟಿ ಕೇಮಾರು ಹೇಳಿದರು.