ಫಿಲೋಮಿನಾದಲ್ಲಿ ವೈಭವದ ಯಕ್ಷಗಾನ ಪ್ರದರ್ಶನ
ಯಕ್ಷ ಧ್ರುವ ಪಟ್ಲ ಫೌಂಡೇಶನ್ ಪುತ್ತೂರು ಘಟಕದ ಗೌರವಾಧ್ಯಕ್ಷರಾದ ಸವಣೂರು ಸೀತಾರಾಮ ರೈ ರವರು ಫೌಂಡೇಶನ್‌ನ ಸಾಧನೆ ಮತ್ತು ಉದ್ದೇಶಗಳನ್ನು ತಿಳಿಸಿದರು. ಕಲೆಗಳಿಗೆ ನೀಡುವ ಪ್ರಾಶಸ್ತ್ಯ ಫಿಲೋಮಿನಾ ಕಾಲೇಜಿನ ಅನನ್ಯತೆ ಎಂದು ತಿಳಿಸಿದರು.
ಪಟ್ಲ ಫೌಂಡೇಶನ್ ಮಂಗಳೂರು ಮಾತೃ ಘಟಕದ ಸ್ಥಾಪಕಾಧ್ಯಕ್ಷರು ಮತ್ತು ಯಕ್ಷಗಾನದ ಖ್ಯಾತ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಕಲೆಯ ವಿಸ್ತಾರ ಮತ್ತು ಬೆಳವಣಿಗೆಯಲ್ಲಿ ವಿದ್ಯಾರ್ಥಿಗಳ ಆಸಕ್ತಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಎಂದು ತಿಳಿಸಿದರು.
ಪ್ರಖ್ಯಾತ ಪುಂಡು ವೇಷಧಾರಿ ಪುತ್ತೂರು ಶ್ರೀಧರ ಭಂಡಾರಿಯವರನ್ನು ನೆನಪಿಸಿ ಯಕ್ಷಗಾನಕ್ಕೆ ಅವರ ಕೊಡುಗೆಯ ಬಗ್ಗೆ ತಿಳಿಸಿದರು. ಪ್ರಾಂಶುಪಾಲ ರೆ. ಡಾ. ಆಂಟನಿ ಪ್ರಕಾಶ್ ಮೋಂತೆರೋ ಅವರು ಪಟ್ಲ ಸತೀಶ್ ಶೆಟ್ಟಿಯವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
ಪಟ್ಲ ಫೌಂಡೇಶನ್ ಪುತ್ತೂರು ಘಟಕದ ಪೂರ್ವಾಧ್ಯಕ್ಷರು ಜಯರಾಜ್ ಭಂಡಾರಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಉಪ ಪ್ರಾಂಶುಪಾಲ ಡಾ. ವಿಜಯಕುಮಾರ್ ಮೊಳೆಯಾರ್, ಪಟ್ಲ ಫೌಂಡೇಶನ್ ಪುತ್ತೂರು ಘಟಕದ ಅಧ್ಯಕ್ಷ ಕರುಣಾಕರ ರೈ ದೇರ್ಲ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ವಿ.ಪಿ. ಅಬ್ದುಲ್ ಕುಂಞಿ ಉಪಸ್ಥಿತರಿದ್ದರು.
ಯಕ್ಷ ಕಲಾ ಕೇಂದ್ರದ ನಿರ್ದೇಶಕರಾದ ಪ್ರಶಾಂತ್ ರೈ ಸ್ವಾಗತಿಸಿ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ತೇಜಸ್ವಿ ಭಟ್ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ‘ಸೀತಾ ಪರಿತ್ಯಾಗ ಕನಕಾಂಗಿ ಕಲ್ಯಾಣ’ ಯಕ್ಷಗಾನ ಪ್ರದರ್ಶನಗೊಂಡಿತು. ಕಾಲೇಜಿನ ನಿವೃತ್ತ ಉಪನ್ಯಾಸಕರು, ಹಿರಿಯ ವಿದ್ಯಾರ್ಥಿಗಳು ಮತ್ತು ಯಕ್ಷಾಭಿಮಾನಿಗಳು, ಯಕ್ಷಕಲಾ ಕೇಂದ್ರದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

