ಕಾಞಂಗಾಡ್-ಬಂದಡ್ಕ-ಸುಳ್ಯ ಅಂತಾರಾಜ್ಯ ರಸ್ತೆಯಲ್ಲಿ ಕೇರಳ ಸಾರಿಗೆ ಬಸ್ ಮಂಜೂರು
ಸುಳ್ಯ: ಕಾಞಂಗಾಡ್‌ನಿಂದ ಗಡಿ ಪ್ರದೇಶವಾದ ಬಂದಡ್ಕ ಮೂಲಕ ಸುಳ್ಯಕ್ಕೆ ಕೇರಳ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮಂಜೂರುಗೊಂಡಿದೆ.
ಕಾಞಂಗಾಡ್ ಡಿಪೋದಿಂದ ಪೆರಿಯ, ಮೂನಾಂಕಡವ್-ಕುಂಡಕುಯಿ-ಬಂದಡ್ಕ-ಕನ್ನಡಿತೋಡ್-ಕೋಲ್ಚಾರ್ ಮೂಲಕ ಸುಳ್ಯಕ್ಕೆ ಬಸ್ ಸೇವೆಯನ್ನು ಪ್ರಾರಂಭಿಸಲು ಕೆಎಸ್‌ಆರ್‌ಟಿಸಿ ಅನುಮತಿ ನೀಡಿದೆ ಎಂದು ತಿಳಿದು ಬಂದಿದೆ.
ಕಾಞಂಗಾಡ್‌ನಿಂದ ಸುಳ್ಯಕ್ಕೆ ಬಸ್ ಬೆಳಗ್ಗೆ 6.40ಕ್ಕೆ ಹೊರಟು 9.20ಕ್ಕೆ ಸುಳ್ಯ ತಲುಪುತ್ತದೆ, ಸುಳ್ಯದಿಂದ 9.30ಕ್ಕೆ ಹೊರಟು 11.45ಕ್ಕೆ ಕಾಞಂಗಾಡ್ ತಲುಪುತ್ತದೆ, ಕಾಂಞಂಗಾಡ್ ಮಧ್ಯಾಹ್ನ 12.10 ಹೊರಟು, 2.25ಕ್ಕೆ ಸುಳ್ಯ ತಲುಪುತ್ತದೆ, ಸುಳ್ಯ ದಿಂದ 2.35 ಹೊರಟು 4.30ಕ್ಕೆ ಕಾಞಂಗಾಡ್ ತಲುಪಲಿದೆ. ಪ್ರಸ್ತುತ ವೇಳಾಪಟ್ಟಿಯ ಪ್ರಕಾರ ಸುಳ್ಯಕ್ಕೆ 3 ಸರ್ವೀಸ್ ಇದ್ದು, ಬಸ್ ಸಂಜೆ 5 ಗಂಟೆಗೆ ಬಸ್ ರಾಷ್ಟ್ರೀಯ ಹೆದ್ದಾರಿಯ ಮೂಲಕ ಕಾಸರಗೋಡು ತೆರಳಿ ರಾತ್ರಿ 8 ಗಂಟೆಗೆ ಕಾಞಂಗಾಡ್ ಡಿಪೋ ತಲುಪಲಿದೆ ಎಂದು ತಿಳಿದು ಬಂದಿದೆ. ಈ ರಸ್ತೆಯಲ್ಲಿ ಬಸ್ ಸೇವೆ ಆರಂಭಿಸಬೇಕು ಎಂಬುದು ದಶಕಗಳ ಬೇಡಿಕೆ.
ಗಡಿ ರಸ್ತೆಯ ಮೂಲಕ ಬಸ್ ಸೇವೆ ಆರಂಭಿಸಬೇಕು ಎಂದು ಬಂದಡ್ಕದಲ್ಲಿ ನಡೆದ ಅರೆಭಾಷೆ ಗಡಿನಾಡ ಉತ್ಸವ ಸಂದರ್ಭದಲ್ಲಿ ಉದುಮ ಶಾಸಕ ಸಿ.ಎಚ್. ಕುಂಞಂಬು ಅವರಿಗೆ ಸಾರ್ವಜನಿಕರ ಪರವಾಗಿ ಮನವಿ ಸಲ್ಲಿಸಲಾಗಿತ್ತು. ಶಾಸಕ ಸಿ.ಎಚ್. ಕುಂಞಂಬು ಅವರು ಸಾರಿಗೆ ಸಚಿವರನ್ನು ಭೇಟಿ ಮಾಡಿ ಬಸ್ ಆರಂಭಿಸುವ ಬೇಡಿಕೆ ಸಲ್ಲಿಸಿ, ಪ್ರಯತ್ನ ನಡೆಸಿದ ಹಿನ್ನಲೆಯಲ್ಲಿ ಇದೀಗ ಬಸ್ ರೂಟ್ ಮಂಜೂರಾಗಿದೆ.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ಹಾಗೂ ಬಂದಡ್ಕದ ಗಡಿನಾಡ ಕನ್ನಡಿಗರ ಸಂಘದ ಅಧ್ಯಕ್ಷ ಪುರುಷೋತ್ತಮ ಬೊಡ್ಡನಕೊಚ್ಚಿ ಅವರ ನೇತೃತ್ವದಲ್ಲಿ ಅಂತಾರಾಜ್ಯ ರಸ್ತೆಯಲ್ಲಿ ಬಸ್ ಸೇವೆ ಆರಂಭಿಸುವಂತೆ ಉದುಮ ಶಾಸಕ ಸಿ.ಎಚ್. ಕುಂಞಂಬು ಅವರಿಗೆ ಮನವಿ ಸಲ್ಲಿಸಿದ್ದರು.